HEALTH TIPS

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಪಾತ್ರ

 ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಸಾರುವುದೇ ಪ್ರಜಾಪ್ರಭುತ್ವ ವ್ಯವಸ್ಥೆ. ಅಬ್ರಾಹಂ ಲಿಂಕನ್ ಹೇಳುವಂತೆ "ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ರಚಿತವಾದ ಪ್ರಜೆಗಳ ಸರಕಾರವೇ ಪ್ರಜಾಪ್ರಭುತ್ವ". ಪ್ರಜಾಪ್ರಭುತ್ವದಲ್ಲಿ ನಿರಂಕುಶ ಪ್ರಭುತ್ವಕ್ಕೆ ಎಡೆಯಿಲ್ಲ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿಯಲ್ಲಿ ತನ್ನ ದೇಶದ ಮತ್ತು ಸರಕಾರದ ವ್ಯವಹಾರಗಳಲ್ಲಿ ಭಾಗವಹಿಸಲು ಇಲ್ಲಿ ಅವಕಾಶವಿದೆ. ದೇಶದ ಆಗುಹೋಗುಗಳಲ್ಲಿ ಭಾಗವಹಿಸಲು ಹಕ್ಕುಗಳ ರೂಪದಲ್ಲಿ ಪ್ರಜೆಗಳಿಗೆ ಅವಕಾಶಗಳನ್ನು ಕಲ್ಪಿಸಲಾಗಿದೆ. ಪ್ರಜಾಪ್ರಭುತ್ವದಲ್ಲಿ ಲೋಕವಾಣಿಯೇ ಪ್ರಭುವಾಣಿ.

 ಪ್ರಜಾಪ್ರಭುತ್ವ ಯಾವುದೇ ಶ್ರೇಷ್ಠ ವ್ಯಕ್ತಿ ಅಥವಾ ವರ್ಗಗಳ ಹಿತಕ್ಕಾಗಿ ಶ್ರಮಿಸುವುದಿಲ್ಲ. ಬದಲಾಗಿ ಸರ್ವರಿಗೂ ಸಾಂವಿಧಾನಿಕ ರಕ್ಷಣೆ ನೀಡಲಾಗುತ್ತದೆ. ಇಡೀ ಸಮಾಜದ ಕಲ್ಯಾಣವೇ ಪ್ರಜಾಪ್ರಭುತ್ವದ ಗುರಿಯಾಗಿದೆ.


ದೇಶಭಕ್ತಿಯು ಕಾಲೋಚಿತ ಅಥವಾ ವಯಸ್ಸಿನ ಮೇಲೆ ಅವಲಂಬಿತವಾಗಿರುವ ವಿಷಯವಲ್ಲ. ದೇಶದಲ್ಲಿ ಹುಟ್ಟಿದ ಪ್ರತೀ ವ್ಯಕ್ತಿಯು ದೇಶದ ಬಗ್ಗೆ ಪ್ರೀತಿ, ಕಾಳಜಿ, ದೇಶಪ್ರೇಮ ಹೊಂದಿರಬೇಕಾದ ಅಗತ್ಯವಿದೆ. ಮನುಷ್ಯ ಬುದ್ಧಿಜೀವಿಯೂ ಹೌದು, ಸಂಘಜೀವಿಯೂ ಹೌದು. ಒಂದು ದೇಶದ ಪ್ರಜೆಗಳು ಪರಸ್ಪರ ಸೌಹಾರ್ದದಿಂದ ಬದುಕು ಸಾಗಿಸಲು ನೀತಿ-ನಿಯಮಗಳು ಇರುವಂತೆ ಆಡಳಿತಕ್ಕೂ ನೀತಿ - ನಿಯಮಗಳನ್ನು ರೂಪಿಸಿ ಕೊಳ್ಳಬೇಕಾಯಿತು. ಅದೇ "ಪ್ರಜಾಪ್ರಭುತ್ವ /ಗಣರಾಜ್ಯ" ಎಂಬ ಹೆಸರನ್ನು ಪಡೆಯಿತು.

ಜನರು ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ವ್ಯವಸ್ಥಿತವಾಗಿ ಅನುಸರಿಸುವ ಮೂಲಕ ದೇಶದ ಶಿಸ್ತನ್ನು ಕಾಪಾಡುವಲ್ಲಿ ಕೈಜೋಡಿಸಬೇಕಾಯಿತು. ಹಕ್ಕು ಮತ್ತು ಕರ್ತವ್ಯಗಳು ಒಂದಕ್ಕೊಂದು ಪೂರಕವಾಗಿದ್ದು ದೇಶದ ಏಳಿಗೆಯ ದೃಷ್ಟಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಜನರು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸುವುದು ಪ್ರಜಾಪ್ರಭುತ್ವದ ಶಿಸ್ತು ಎಂದು ದೇಶ ನಂಬಿಕೊಂಡು ಬಂದಿದೆ. ಶಿಸ್ತಿಲ್ಲದ ಪ್ರಜಾಪ್ರಭುತ್ವ ಸರ್ವಾಧಿಕಾರ ಅಥವಾ ನಿರಂಕುಶಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಪ್ರಜಾಪ್ರಭುತ್ವದ ಯಶಸ್ಸಿಗೆ ಶಿಸ್ತು ಅನಿವಾರ್ಯವಾಯಿತು.

ಭಾರತೀಯ ಸಂವಿಧಾನ ಜಾರಿಗೆ ಬಂದು ಗಣರಾಜ್ಯವಾದ ದಿನ ಜನವರಿ 26, 1950. ಆ ದಿನವನ್ನು ಇಂದು ದೇಶದಾದ್ಯಂತ  ಗಣರಾಜ್ಯೋತ್ಸವ ದಿನ/ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂದು ಭಾರತದ ಸಂವಿಧಾನ ರಚನೆಯಾಗಿ ಭಾರತ "ಪ್ರಜಾಪ್ರಭುತ್ವ ರಾಷ್ಟ್ರ" ಎಂದು ಘೋಷಿಸಲ್ಪಟ್ಟಿತು. ಇಂದು ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಸಂವಿಧಾನವೆಂದರೆ ಭಾರತದ ಎಲ್ಲಾ ನಾಗರೀಕರು ಅನುಸರಿಸಬೇಕಾದ ಮೂಲಭೂತ ನಿಯಮ ಮತ್ತು ಹಕ್ಕುಗಳ ಸ್ಥಾಪನೆಗೆ ರಚಿತವಾದ ಕಾಯಿದೆ. ಪ್ರಜಾಪ್ರಭುತ್ವ ಅಥವಾ ಗಣರಾಜ್ಯ ಎಂದರೆ ಎಲ್ಲಾ ವಿಷಯಗಳು ಸಾರ್ವಜನಿಕವಾಗಿ ಇರುವುದು ಮತ್ತು ಪಾರದರ್ಶಕವಾಗಿರುವುದು. ಒಂದು ಪ್ರಜಾಪ್ರಭುತ್ವ ದೇಶದಲ್ಲಿ ಸರ್ಕಾರ ಜನರಿಂದ ರಚನೆಯಾಗಿರುತ್ತದೆ ಮತ್ತು ಜನರ ಎಲ್ಲಾ ಆಗುಹೋಗುಗಳ ಬಗ್ಗೆ ಸರ್ಕಾರ ನಿಗಾ ವಹಿಸಬೇಕಾಗುತ್ತದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಸ್ವತಂತ್ರವಾಗಿರಲು ಹಕ್ಕಿದೆ. ಅಪಾರವಾದ ಸ್ವಾತಂತ್ರ್ಯವೂ ಇದೆ. ಆದರೆ ಸ್ವಾತಂತ್ರ್ಯ ಯಾವತ್ತೂ ಸ್ವೇಚ್ಛೆಯಾಗಬಾರದು. ಸ್ವಾತಂತ್ರ್ಯದ ಸರಿಯಾದ ಬಳಕೆಯಿಂದ ಪ್ರಜ್ಞಾವಂತ ನಾಗರಿಕನು ಸೃಷ್ಟಿಯಾಗುತ್ತಾನೆ.

ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳು ಇದ್ದಹಾಗೆ. ಇದು ಸರಿಯಾದ ರೀತಿಯಲ್ಲಿ ಚಾಲನೆ ಆದರೆ ಮಾತ್ರ ಪ್ರಜಾಪ್ರಭುತ್ವ ಊರ್ಜಿತವಾಗುತ್ತದೆ. ಇಲ್ಲದಿದ್ದರೆ ಸರ್ವಾಧಿಕಾರದ ಆಡಳಿತ ಬರುತ್ತದೆ. ನಮ್ಮ ಸ್ವಾತಂತ್ರ್ಯವನ್ನು ನಾವು ಬಯಸುವಂತೆ, ಗೌರವಿಸುವಂತೆ ಇನ್ನೊಬ್ಬರ ಸ್ವಾತಂತ್ರ್ಯವನ್ನು ನಾವು ಗೌರವಿಸಬೇಕಾಗುತ್ತದೆ. ಅವರ ಹಕ್ಕನ್ನು ಅವರು ಅನುಭವಿಸಲು ಅವಕಾಶ ಇರಬೇಕು. ಆಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕು ಮತ್ತು ಕರ್ತವ್ಯಗಳ ಸರಿಯಾದ ಪಾಲನೆಯಾಗುತ್ತದೆ.

ಪ್ರಜಾಪ್ರಭುತ್ವವೂ ಸಮಾನತೆ, ನ್ಯಾಯ ಮತ್ತು ಸಹೋದರತ್ವ ಇವುಗಳ ಮೇಲೆ ಅವಲಂಬಿತವಾಗಿದೆ. ಭಾರತೀಯರು ಸ್ವಾಭಾವಿಕವಾಗಿ ಶಾಂತಿಪ್ರಿಯರೂ, ಶಾಂತಿ ಪಾಲಕರೂ, ಸ್ವತಃ ನೀತಿ ನಿರ್ಧಾರಗಳನ್ನು ಅನುಸರಿಸುವವರೂ, ನಿಯಮ ಪಾಲಕರೂ ಆಗಿರುವುದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಯಶಸ್ವಿ ಹೆಜ್ಜೆಯಿಟ್ಟು ಮಾದರಿ ರಾಷ್ಟ್ರವಾಗಿದೆ. ಸಾಮಾಜಿಕ, ನೈತಿಕ ಜವಾಬ್ದಾರಿ, ಕರ್ತವ್ಯಪ್ರಜ್ಞೆ,
ಶಿಸ್ತುಪಾಲನೆ, ತಾತ್ವಿಕ ಬದ್ಧತೆಗಳ ಮೂಲಕ ಪ್ರಜಾಪ್ರಭುತ್ವಕ್ಕೆ ಮೌಲಿಕ ಅರ್ಥವನ್ನೂ ಮತ್ತು ಉಜ್ವಲವಾದ ಭವಿಷ್ಯವನ್ನೂ ನೀಡಬೇಕಾದ ಅಗತ್ಯವಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಸಾರ್ವತ್ರಿಕ ವಯಸ್ಕ ಮತದಾನದ ವ್ಯವಸ್ಥೆಯಿದ್ದು, ಚುನಾವಣೆಗಳು ನಿಗದಿತ ಕಾಲಕ್ಕೆ ನಿಷ್ಪಕ್ಷಪಾತವಾಗಿ ಹಾಗೂ ಮುಕ್ತವಾಗಿ ನಡೆಯುತ್ತದೆ. ಇಲ್ಲಿ ವೈಯಕ್ತಿಕ ಅಭಿವೃದ್ಧಿಗೆ ಅವಕಾಶವಿದೆ. ಜನತೆಯ ಆಗುಹೋಗುಗಳಿಗೆ ಸರಕಾರ ಸ್ಪಂದಿಸಬೇಕಾಗುತ್ತದೆ. ಜನತೆಗೆ ಸ್ಪಂದಿಸದಿದ್ದರೆ ಶಾಂತಿಯುತ ಹಾಗೂ ಸಂವಿಧಾನಾತ್ಮಕ ವಿಧಾನಗಳಿಂದ ಸರಕಾರವನ್ನು ಬದಲಾಯಿಸುವ ಹಕ್ಕು ಜನತೆಗೆ ಇರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯು ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುತ್ತದೆ.

ವ್ಯಕ್ತಿತ್ವದ ಬೆಳವಣಿಗೆಗೆ ಅತ್ಯಂತ ಅವಶ್ಯವೆನಿಸುವ ಸ್ವಾತಂತ್ರ್ಯ, ಸಮಾನತೆ ಮೊದಲಾದವುಗಳು ಪ್ರಜಾಪ್ರಭುತ್ವದಲ್ಲಿ ಅಡಗಿವೆ.
ಇದು ವಾಕ್ ಸ್ವಾತಂತ್ರ್ಯ, ಸಂಘ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸಂಚಾರ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ರಾಜಕೀಯ ಸ್ವಾತಂತ್ರ್ಯ ಹೀಗೆ ಹಲವು ಬಗೆಯ ಸ್ವಾತಂತ್ರ್ಯಗಳನ್ನು ಪ್ರಜಾಪ್ರಭುತ್ವದಲ್ಲಿ ನಾಗರಿಕ ಪಡೆಯುತ್ತಾನೆ.

ಆದರೆ ಇಂದಿನ ದಿನಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಹಂತ ಹಂತವಾಗಿ ಕುಸಿಯುತ್ತಿದ್ದು, ಕೆಲವರು, ಕೆಲವರಿಗಾಗಿ, ಕೆಲವರಿಗೋಸ್ಕರ ಸ್ವಾತಂತ್ರ್ಯ ಸೀಮಿತವಾದಂತಿದೆ. ಮಾನವೀಯತೆ ಎಂಬುದು ಸಮಾಜದಿಂದ ಬಹುದೂರ ಸಾಗುತ್ತಿದೆ. ಒಬ್ಬ ವ್ಯಕ್ತಿಯಿಂದ ಎನ್ನುವುದಕ್ಕಿಂತ ಕೆಲವೊಮ್ಮೆ ಇಡೀ ಸಮಾಜದಿಂದಲೇ ಮಾನವ ಹಕ್ಕುಗಳ ಉಲ್ಲಂಘನೆ ಆದಂತೆ ಕಾಣಿಸುತ್ತದೆ. ತಳಮಟ್ಟದ ಜನರಿಗೆ ಸಂವಿಧಾನದ ಆಶಯದಂತೆ ಸಿಗಬೇಕಾದ ಸೌಲಭ್ಯಗಳು ಇಂದು ಶ್ರೀಮಂತರ ಪಾಲಾಗುತ್ತಿದೆ. ಸಾಮಾಜಿಕ ಮೌಲ್ಯಗಳ ಹರಣದಿಂದಾಗಿ, ಗೌರವಯುತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇವೆಲ್ಲವುಗಳಿಂದ ಹೊರಬಂದು ಮತ್ತೆ ನೈತಿಕತೆಯ, ಮಾನವೀಯತೆಯ ಸಮಾಜವನ್ನು ಕಟ್ಟುವ ಮೂಲಕ ಭವ್ಯವಾದ ದೇಶವನ್ನು ನಿರ್ಮಿಸುವತ್ತ, ಪ್ರಜಾಪ್ರಭುತ್ವದ ವ್ಯವಸ್ಥೆಯೊಳಗೆ ಪ್ರತಿಯೊಬ್ಬರು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಾಗಿದೆ. ಚಿರಂತನ ಜಾಗೃತಿ ಪ್ರಜಾಪ್ರಭುತ್ವದ ಬೆಲೆ. ಪರಸ್ಪರ ತಿಳುವಳಿಕೆ, ವಿಚಾರ ವಿನಿಮಯ ಪ್ರಜಾಪ್ರಭುತ್ವದ.
  ಮುಖ್ಯ ಸೆಲೆ.

ಒಟ್ಟಿನಲ್ಲಿ ಪ್ರಜಾಪ್ರಭುತ್ವ ಒಂದು ಜೀವನ ವಿಧಾನವೇ ಆಗಿದೆ. ಆರ್ಥಿಕ, ಸಾಮಾಜಿಕ, ಸಮಾನತೆ ಹಾಗೂ ರಾಜಕೀಯ ಸ್ವಾತಂತ್ರ್ಯ ಒದಗಿಸಿಕೊಡಲು ಅದು ಹೋರಾಡುತ್ತದೆ. ನಾಗರಿಕರಲ್ಲಿ ಪರಸ್ಪರ ತಿಳುವಳಿಕೆ, ವಿಚಾರ ವಿನಿಮಯ, ಸಹಕಾರ, ಸಹಾನುಭೂತಿ, ರಚನಾತ್ಮಕ ವಿಮರ್ಶೆ ಜೀವಂತ ಪ್ರಜಾಪ್ರಭುತ್ವದ ಲಕ್ಷಣಗಳು. ಶಿಸ್ತು, ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ, ಸಮರ್ಥ ಮುಖಂಡತ್ವ, ವ್ಯಕ್ತಿಗೌರವ, ತಾಳ್ಮೆ, ಸಹಾನುಭೂತಿ, ಸಹಕಾರ ಮನೋಭಾವ, ನಿಷ್ಠೆ, ಪ್ರಾಮಾಣಿಕತೆ ಮೊದಲಾದ ಧ್ಯೇಯಗಳೊಂದಿಗಿನ ಜೀವನವೇ ಪ್ರಜಾಪ್ರಭುತ್ವ ವ್ಯವಸ್ಥೆ. ಸಾವಿಧಾನಿಕ ನೆಲೆಗಟ್ಟು.


        



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries