ಶ್ರೀನಗರ: ಬಾಲಿವುಡ್ ಚಿತ್ರ “ದಿ ಕಾಶ್ಮೀರ್ ಫೈಲ್ಸ್” ದೇಶದ ಎರಡು ಪ್ರಮುಖ ಸಮುದಾಯಗಳ ನಡುವೆ ಅಂತರ ಮತ್ತು ದ್ವೇಷ ಸೃಷ್ಟಿಸುವ ಉದ್ದೇಶ ಹೊಂದಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಗುರುವಾರ ಹೇಳಿದ್ದಾರೆ.
“‘ಕಾಶ್ಮೀರ ಫೈಲ್ಸ್ ಸಿನಿಮಾವನ್ನು ಸಮುದಾಯಗಳ ನಡುವೆ ಹಿಂಸಾಚಾರ ಮತ್ತು ದ್ವೇಷವನ್ನು ಹುಟ್ಟುಹಾಕಲು ಮಾಡಲಾಗಿದೆ. ಈ ದ್ವೇಷವನ್ನು ನಿಲ್ಲಿಸದಿದ್ದರೆ, ಅದು ಇಡೀ ದೇಶವನ್ನು ತೊಂದರೆಗೆ ಸಿಲುಕಿಸುತ್ತದೆ ಎಂದು ಯೆಚೂರಿ ಮಾಧ್ಯಮಗಳಿಗೆ ತಿಳಿಸಿದರು.
ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರ ಹಕ್ಕುಗಳಿಗಾಗಿ ಸಿಪಿಐ(ಎಂ) ಹೋರಾಡಿದೆ ಎಂದು ಅವರು ಹೇಳಿದರು. ಹಿಂಸಾಚಾರದಲ್ಲಿ ಕಾಶ್ಮೀರಿ ಪಂಡಿತರು ಮಾತ್ರವಲ್ಲದೆ ಸಿಖ್ಖರು ಮತ್ತು ಮುಸ್ಲಿಮರೂ ಸಾವನ್ನಪ್ಪಿದ್ದಾರೆ ಎಂದರು.
ಬಿಜೆಪಿಯವರು ದ್ವೇಷದ ನೆಲೆಯಲ್ಲಿ ರಾಜಕಾರಣ ಮಾಡುತ್ತಿರುವ ರೀತಿ ಗಂಭೀರ ಪರಿಣಾಮ ಬೀರುತ್ತದೆ. ದೇಶ ಮತ್ತು ಸಂವಿಧಾನವನ್ನು ಉಳಿಸುವುದು ನಮ್ಮ ಮುಖ್ಯ ಗುರಿಯಾಗಿದೆ, ಅದಕ್ಕಾಗಿ ಬಿಜೆಪಿಯನ್ನು ಪ್ರತ್ಯೇಕಿಸಿ ಸೋಲಿಸಬೇಕು. ಎಡಪಂಥೀಯ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಬಲಪಡಿಸಬೇಕು. ವಿಶಾಲ ಜಾತ್ಯತೀತ ರಂಗವು ಇಂದಿನ ಅಗತ್ಯವಾಗಿದೆ. ಅಲ್ಲದೇ ಕೇಂದ್ರದ ಹಿಂದಿನ ಸರ್ಕಾರಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಪರಕೀಯತೆಯನ್ನು ಹೋಗಲಾಡಿಸುವ ಭರವಸೆಗಳನ್ನು ಈಡೇರಿಸಿಲ್ಲ ಎಂದು ಯೆಚೂರಿ ಹೇಳಿದರು.





