ನವದೆಹಲಿ: ತೈವಾನ್ ಮೇಲೆ ಆಕ್ರಮಣ ನಡೆಸಲು ಚೀನಾದ ಸೇನಾಧಿಕಾರಿಗಳು ಚರ್ಚಿಸಿರುವುದಕ್ಕೆ ಸಂಬಂಧಿಸಿದ ಸ್ಫೋಟಕ ಆಡಿಯೊ ತುಣುಕೊಂದು ಬಹಿರಂಗವಾಗಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಚೀನಾಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದ್ದು, ಚೀನಾದ ನಡೆಯನ್ನು ಬೈಡನ್ 'ಅಪಾಯದೊಂದಿಗೆ ಚೆಲ್ಲಾಟ' ಎಂದು ಎಚ್ಚರಿಸಿದ್ದಾರೆ. ಕ್ವಾಡ್ ಸಮಾವೇಶದಲ್ಲಿ ಭಾಗಿಯಾಗಲು ಟೋಕಿಯೊಗೆ ತೆರಳಿರುವ ಬೈಡನ್ ಅವರು ಚೀನಾದ ಸೇನಾ ಯೋಜನೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ದ್ವೀಪ ರಾಷ್ಟ್ರ ತೈವಾನ್ ಮೇಲೆ ಚೀನಾ ಆಕ್ರಮಣಕ್ಕೆ ಮುಂದಾದರೆ, ಅಮೆರಿಕ ತೈವಾನ್ ಬೆನ್ನಿಗೆ ನಿಲ್ಲುವುದಾಗಿ ಹೇಳಿದ್ದಾರೆ. 'ನಾವು ಒನ್ ಚೀನಾ ನೀತಿಗೆ ಸಮ್ಮತಿಸಿದ್ದೇವೆ, ಅದಕ್ಕೆ ನಾವು ಸಹಿಯನ್ನೂ ಹಾಕಿದ್ದೇವೆ...ಆದರೆ, ಒತ್ತಾಯಪೂರ್ವಕವಾಗಿ ಅದನ್ನು ಸಾಧಿಸುವ ಯೋಚನೆಯು ಸೂಕ್ತವಾದುದಲ್ಲ...' ಎಂದು ಬೈಡನ್ ಹೇಳಿದ್ದಾರೆ.
ಏನಿದು ವಿವಾದಿತ ಆಡಿಯೋ?
ಚೀನಾ ಮೂಲದ ಮಾನವ ಹಕ್ಕುಗಳ ಹೋರಾಟಗಾರರಾದ ಜೆನಿಫರ್ ಹೆಂಗ್ ಅವರು ಟ್ವೀಟ್ ಮಾಡಿರುವ ಆಡಿಯೊ ಕ್ಲಿಪ್ ಚೀನಾದಾದ್ಯಂತ ಸಂಚಲನ ಮೂಡಿಸಿದೆ. 'ಲ್ಯೂಡ್ ಮೀಡಿಯಾ' (LUDE media) ಯುಟ್ಯೂಬ್ ಚಾನೆಲ್‌ನಲ್ಲಿ 57 ನಿಮಿಷಗಳ ಆಡಿಯೊ ಕ್ಲಿಪ್ ಪ್ರಕಟಿಸಲಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚೀನಾದ ಸೇನಾಪಡೆಯ ಗೋಪ್ಯ ಚರ್ಚೆ ಸೋರಿಕೆಯಾದಂತಾಗಿದೆ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ತೈವಾನ್ ಮೇಲೆ ರೂಪಿಸಿರುವ ಸೇನಾ ಕಾರ್ಯಾಚರಣೆ ಯೋಜನೆಯ ಕುರಿತ ಚರ್ಚೆಯನ್ನು ಚೀನಾ ಕಮ್ಯುನಿಸ್ಟ್ ಪಾರ್ಟಿಯ ಹಿರಿಯ ಅಧಿಕಾರಿಯೊಬ್ಬರು ಸೋರಿಕೆ ಮಾಡಿರುವುದಾಗಿ ಲ್ಯೂಡ್ ಮಿಡಿಯಾ ಪ್ರಸ್ತಾಪಿಸಿದೆ. 'ಸಹಜ ಸ್ಥಿತಿಯಿಂದ ಯುದ್ಧದ ಪರಿಸ್ಥಿತಿ' ನಿರ್ಮಿಸುವ ಯೋಜನೆಯನ್ನು ಜಾರಿಗೊಳಿಸಲು ಚೀನಾದ ಕಮ್ಯುನಿಸ್ಟ್ ಪಾರ್ಟಿ ಮತ್ತು ಚೀನಾ ಸೇನಾಪಡೆಯ ಅಧಿಕಾರಿಗಳ ನಡುವೆ ನಡೆದಿರುವ ಮಾರ್ಗಸೂಚಿಯ ಚರ್ಚೆಯು ವೈರಲ್ ಆಗಿರುವ ಆಡಿಯೊ ತುಣುಕಿನಲ್ಲಿದೆ ಎನ್ನಲಾಗಿದೆ.
ಆಡಿಯೋದಲ್ಲಿ ಏನಿದೆ?
ಆಡಿಯೊದಲ್ಲಿರುವಂತೆ, ಉನ್ನತ ಮಟ್ಟದ ಚರ್ಚೆಯಲ್ಲಿ ಚೀನಾದ ಆಗ್ನೇಯ ಕರಾವಳಿ ಭಾಗದ ಪಕ್ಷದ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಗವರ್ನರ್ ಹಾಗೂ ಉಪ ಗವರ್ನರ್ ಭಾಗಿಯಾಗಿದ್ದರು. ಅವರೊಂದಿಗೆ ಚೀನಾ ಸೇನಾಪಡೆಯ ಮೇಜರ್ ಜನರಲ್ ಝೋ ಹಿ, ಗಾಂಗ್‌ಡಾಂಗ್ ಸೇನಾ ವಲಯದ ಕಮಾಂಡರ್ ಸೇರಿದಂತೆ ಹಲವು ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ತೈವಾನ್‌ನ ಪಡೆಗಳನ್ನು ಧ್ವಂಸಗೊಳಿಸುವ ಹಾಗೂ ಯುದ್ಧ ಆರಂಭಿಸುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಗಾಂಗ್‌ಡಾಂಗ್ ಪ್ರಾಂತ್ಯಕ್ಕೆ ಹಂಚಿಕೆಯಾಗಿರುವ ಕಾರ್ಯಾಚರಣೆಯಲ್ಲಿ 1.40 ಲಕ್ಷ ಸೇನಾ ಸಿಬ್ಬಂದಿ, 953 ಹಡಗುಗಳು, 1,653 ಮಾನವರಹಿತ ಸಾಧನಗಳು, 20 ವಿಮಾನ ನಿಲ್ದಾಣಗಳು ಹಾಗೂ ಹಡಗು ಕಟ್ಟೆಗಳು, ಆರು ಹಡಗು ನಿರ್ಮಾಣ ಮತ್ತು ದುರಸ್ಥಿ ಕಾರ್ಯ ನಡೆಸುವ ಘಟಕಗಳು, 14 ತುರ್ತು ಕೇಂದ್ರಗಳು, ಆಸ್ಪತ್ರೆಗಳು, ದವಸ ಧಾನ್ಯ ಸಂಗ್ರಹ ಕೇಂದ್ರಗಳು, ರಕ್ತ ಸಂಗ್ರಹ ಕೇಂದ್ರಗಳು, ತೈಲ ಹಾಗೂ ಅನಿಲ ಸಂಗ್ರಹಗಾರಗಳು,..ಸೇರಿದಂತೆ ಅಗತ್ಯ ಸಿದ್ಧತೆಯ ಬಗ್ಗೆ ಚರ್ಚಿಸಲಾಗಿದೆ.
ಡ್ರೋನ್‌ಗಳು ಮತ್ತು ಹಡಗುಗಳ ತಯಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಂಪನಿಗಳ ಪಟ್ಟಿ ಮಾಡಲಾಗಿದೆ. 'ಭೂಮಿಯಿಂದ ಕಡಿಮೆ ಎತ್ತರದಲ್ಲಿ ಪರ್ಯಟನೆ ನಡೆಸುತ್ತಿರುವ 16 ಉಪಗ್ರಹಗಳನ್ನು ಹೊಂದಿದ್ದೇವೆ. 0.5 ಮೀಟರ್‌ನಿಂದ 10 ಮೀಟರ್ ಅಲ್ಟ್ರಾ ಹೈ ಆಪ್ಟಿಕಲ್ ರೆಸಲ್ಯೂಷನ್ ಸೆನ್ಸರ್ ಮತ್ತು ಚಿತ್ರವನ್ನು ಗ್ರಹಿಸುವ ಸಾಮರ್ಥ್ಯವಿದೆ' ಎಂದು ಅಧಿಕಾರಿಗಳು ಹೇಳಿರುವುದು ವೈರಲ್ ಆಡಿಯೊ ಕ್ಲಿಪ್‌ನಲ್ಲಿದೆ. ಗೊತ್ತು ಮಾಡಿರುವ ಪ್ರಾಂತ್ಯದಲ್ಲಿ ಸೇನೆಗೆ ಹೊಸದಾಗಿ ಸಿಬ್ಬಂದಿ ನಿಯೋಜಿಸಿಕೊಳ್ಳುವ ಸೂಚಿಸಲಾಗಿದೆ. ವಿಶೇಷ ಪರಿಣತಿ ಹೊಂದಿರುವವರು ಹಾಗೂ ಸೇನೆಯ ನಿವೃತ್ತ ಸಿಬ್ಬಂದಿ ಸೇರಿ 15,500 ಜನರನ್ನು ಕಾರ್ಯಾಚರಣೆಗೆ ನಿಯೋಜಿಸುವಂತೆ ಪ್ರಸ್ತಾಪಿಸಲಾಗಿದೆ. 64 ಹಡಗುಗಳು, 38 ವಿಮಾನಗಳು, 588 ಸರಕು ಸಾಗಣೆ ರೈಲುಗಳು ಸೇರಿದಂತೆ ರಕ್ಷಣಾ ವ್ಯವಸ್ಥೆಗೆ ಅಗತ್ಯ ಸಂಪನ್ಮೂಲಗಳನ್ನು ಕ್ರೋಢೀಕರಿಸುವಂತೆ ತಿಳಿಸಲಾಗಿದೆ. ಹೆಚ್ಚು ಜನಸಂಖ್ಯೆ ಮತ್ತು ಹಲವು ಕೈಗಾರಿಕೆಗಳನ್ನು ಒಳಗೊಂಡಿರುವ ಪರ್ಲ್ ನದಿ ತೀರದ ಪ್ರದೇಶಗಳಲ್ಲಿ ಸುರಕ್ಷತೆ ಕಾಯ್ದುಕೊಳ್ಳುವಂತೆ ಸೂಚಿಸಿರುವುದು ಆಡಿಯೊ ಕ್ಲಿಪ್‌ನಲ್ಲಿದೆ.
ಈಗಾಗಲೇ ಉಕ್ರೇನ್-ರಷ್ಯಾ ಯುದ್ಧವೇ ಜಗತ್ತಿನಲ್ಲಿ ತಲ್ಲಣ ಮೂಡಿಸಿದ್ದು, ತೈವಾನ್ ವಿರುದ್ಧ ಚೀನಾ ನಡೆ ಜಗತ್ತಿನಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಜಗತ್ತಿನಾದ್ಯಂತ ಭದ್ರತಾ ಸಂಸ್ಥೆಗಳು ಆಡಿಯೊದಲ್ಲಿರುವ ವಿಚಾರಗಳನ್ನು ಪರಿಶೀಲನೆಗೆ ಒಳಪಡಿಸಿವೆ. ಆ ಆಡಿಯೊದ ಸತ್ಯಾಸತ್ಯತೆಯ ಬಗ್ಗೆ ಇನ್ನಷ್ಟೇ ಖಚಿತವಾಗಬೇಕಿದೆ.




.jpg)
