HEALTH TIPS

ಸದ್ಗುರು @ದಾವೋಸ್​: ಮಣ್ಣು ರಕ್ಷಣೆಗಾಗಿ ಜಾಗತಿಕ ಆರ್ಥಿಕ ವೇದಿಕೆಯಲ್ಲೂ ಮನವಿ..

            ದಾವೋಸ್: ಮಣ್ಣು ರಕ್ಷಣೆಗಾಗಿ ಜಾಗತಿಕ ಜಾಗೃತಿ ಮೂಡಿಸುವ ಸಲುವಾಗಿ ಏಕಾಂಗಿ ಬೈಕ್​ ಪ್ರಯಾಣದ ಮೂಲಕ ಮಣ್ಣು ರಕ್ಷಿಸಿ ಅಭಿಯಾನ ಕೈಗೊಂಡಿರುವ ಈಶ ಫೌಂಡೇಷನ್​ನ ಸದ್ಗುರು, ದಾವೋಸ್​ನಲ್ಲೂ ಮಣ್ಣಿನ ಕುರಿತು ತಮ್ಮ ಕಳಕಳಿ ವ್ಯಕ್ತಪಡಿಸಿ, ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.

             ಮಣ್ಣಿನ ಸಾವಯವ ಸತ್ವವನ್ನು ವೃದ್ಧಿಸುವ ವಿಚಾರವನ್ನು ಭೂಮಿಯ ಮೇಲೆ ಯಾರೂ ವಿರೋಧಿಸುವುದಿಲ್ಲ. ರಸಗೊಬ್ಬರ ಕೈಗಾರಿಕೆಗಳು, ಕೀಟನಾಶಕ ಕಂಪನಿಗಳನ್ನೊಳಗೊಂಡು ಎಲ್ಲರೂ ಅದರ ಪರವಾಗಿಯೇ ಇದ್ದಾರೆ. ಏಕೆಂದರೆ ಸಮೃದ್ಧ ಮಣ್ಣು ನಮ್ಮ ಶ್ರೀಮಂತ ಜೀವನದ ತಳಹದಿ. ಆರೋಗ್ಯವಂತ ಮಣ್ಣು ಮತ್ತು ಆರೋಗ್ಯವಂತ ಜೀವನ ಒಂದಕ್ಕೊಂದು ಬೆಸೆದುಕೊಂಡಿದೆ ಎಂದು ಈಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ನಿನ್ನೆ ದಾವೋಸ್​ನಲ್ಲಿ ವಿಶ್ವ ಆರ್ಥಿಕ ವೇದಿಕೆ 2022ರಲ್ಲಿ ನಡೆದ ಫ್ಯೂಚರ್ ಆಫ್ ಸಿಟೀಸ್ ಕಾರ್ಯಕ್ರಮದ ವಿಸ್ಡಂ ಪ್ಯಾನೆಲ್​ನಲ್ಲಿ ಮಾತನಾಡುತ್ತ ವಿವರಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 150ಕ್ಕೂ ಹೆಚ್ಚಿನ ದೇಶಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಭಾವಪೂರ್ಣ ಮನವಿ ಮಾಡಿಕೊಂಡರು. ಆಹಾರ ಭದ್ರತೆ, ನಗರಗಳಿಗೆ ಸಾಮೂಹಿಕ ವಲಸೆ ಕಡಿಮೆ ಮಾಡುವುದು ಮತ್ತು ಭೂಮಿಯ ದೀರ್ಘಕಾಲಿಕ ಒಳಿತಿಗಾಗಿ ಮಣ್ಣಿನ ಆರೋಗ್ಯವನ್ನು ಪುನರುತ್ಪತ್ತಿ ಮಾಡಬೇಕಾದ ನಿರ್ಣಾಯಕ ಅಗತ್ಯದ ಕುರಿತಾಗಿ ಸದ್ಗುರು ಮಾತನಾಡಿದರು.


             ಹಾನಿಗೀಡಾದ ಭೂಮಿಯನ್ನು ಸರಿಪಡಿಸಲು ಸದ್ಗುರುಗಳು ತಮ್ಮ 'ಒಂದು ಕಟ್ಟಡದ ನಗರ'ದ ಪರಿಕಲ್ಪನೆಯನ್ನು ವಿವರಿಸಿದರು. ಕಟ್ಟಡ ನಿರ್ಮಾಣಕಾರರು ನಗರಗಳ ಹೊರವಲಯದಲ್ಲಿ ಸಾಕಷ್ಟು ಭೂಪ್ರದೇಶವಿರುವ ಕಡೆ ಕಟ್ಟಡಗಳನ್ನು ನಿರ್ಮಾಣ ಮಾಡಿ, ಅದನ್ನು ಭಾಗಶಃ ಮಾನವ ವಾಸಸ್ಥಳಗಳನ್ನಾಗಿ ಅಭಿವೃದ್ಧಿಪಡಿಸುವ ಮೂಲಕ ನಗರಗಳ ಒತ್ತಡವನ್ನು ಕಡಿಮೆ ಮಾಡಬೇಕು ಎಂದು ಹೇಳುತ್ತ ಅವರು 50 ಎಕರೆ ಪ್ರದೇಶದಲ್ಲಿ ಒಂದು ಎಕರೆ ಸ್ಥಳದಲ್ಲಿ ಮಾತ್ರ ಕಟ್ಟಡವನ್ನು ನಿರ್ಮಿಸುವ ಪ್ರಸ್ತಾವನೆಯನ್ನು ಮುಂದಿಟ್ಟರು. 'ನೀವು ಅಲ್ಲಿ 50ರಿಂದ 100 ಮಹಡಿಗಳನ್ನು ನಿರ್ಮಿಸಬಹುದು. ಉಳಿದ 49 ಎಕರೆಗಳು ಕಾಡು, ಕೃಷಿ ಇತ್ಯಾದಿಗಳಿಂದ ಪರಿಸರ ಸ್ನೇಹಿಯಾಗಿಸಬಹುದು; ಬೇಕಾದರೆ ನೀವು ಆ ಕಟ್ಟಡದ ನಿವಾಸಿಗಳಿಗೆ ಬೇಕಾದಷ್ಟು ಹಣ್ಣು ತರಕಾರಿಗಳನ್ನು ಬೆಳೆಯಬಹುದು ಎಂದು ಅವರು ವಿವರಿಸಿದರು. 'ಸುಮಾರು 10,000 ಜನರು ಈ ನಗರದಲ್ಲಿ ವಾಸಿಸಬಹುದು; ನಾವು 10,000ಕ್ಕೆ ಮಿತಿಗೊಳಿಸಬಹುದು, 10 ದಶಲಕ್ಷ ಜನರಿರುವ ಒಂದು ಅತಿ ದೊಡ್ಡ ನಗರ ಒಂದು ಗೊಂದಲವೇ ಸರಿ ಎಂದು ಅವರು ಹೇಳಿದರು.

               'ಪ್ರಪಂಚದ ಶೇ.72ರಷ್ಟು ಬಂಡವಾಳವು ಭೂಮಿಯ ಮೇಲಿನ 31 ನಗರಗಳಲ್ಲಿದೆ' ಇದರಿಂದ ನಗರಗಳು ಕೇವಲ ವಲಸೆಯ ಅಯಸ್ಕಾಂತಗಳಂತಾಗಿವೆ ಅಲ್ಲದೆ ಹೆಚ್ಚೆಚ್ಚು ಗೊಂದಲಮಯ ಮತ್ತು ಪರಿಜ್ಞಾನರಹಿತವಾಗಿವೆ ಎಂದು ಸದ್ಗುರು ಹೇಳಿದರು. ಈಗ ನಗರ ಕೇಂದ್ರಗಳಲ್ಲಿ ಕೇಂದ್ರೀಕೃತವಾಗಿರುವ ಬಂಡವಾಳವನ್ನು ಗ್ರಾಮೀಣ ಕೇಂದ್ರಗಳಿಗೆ ವರ್ಗಾಯಿಸುವ ಮೂಲಕ ನಗರೀಕರಣಗೊಳಿಸಬೇಕು ಎಂದು ಅವರು ಕರೆ ನೀಡಿದರು.

          ವೇದಿಕೆಯಲ್ಲಿ ಈಕ್ವೆಡಾರ್​ನ ಪಸ್ತಝಾದಲ್ಲಿನ ಕಿಚ್ವಾ ಸರಯಾಕು ಸಮುದಾಯದ ಪರಿಸರ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿಯಾದ ಹೆಲೆನಾ ಗ್ವಾಲಿಂಗ ಮತ್ತು ಡಾ.ಚೋಪ್ರಾ ಫೌಂಡೇಷನ್​ನ ಸಂಸ್ಥಾಪಕರಾದ ಡಾ.ದೀಪಕ್ ಚೋಪ್ರಾ ಮಾತನಾಡಿದರು.

           ಸದ್ಗುರು ಈಗ ಮಣ್ಣನ್ನು ಅವನತಿಯಿಂದ ರಕ್ಷಿಸಲು ಜಾಗತಿಕ ಕಾರ್ಯನೀತಿ ಚಾಲಿತ ಕ್ರಮಕ್ಕಾಗಿ ಜಾಗತಿಕ ಒಮ್ಮತವನ್ನು ಮೂಡಿಸಲು 100 ದಿನಗಳ 30,000 ಕಿ.ಮೀ. ಒಬ್ಬಂಟಿ ಮೋಟಾರ್ ಸೈಕಲ್ ಪ್ರಯಾಣವನ್ನು ಯುರೋಪ್, ಮಧ್ಯ ಏಷ್ಯಾ ಮತ್ತು ಮಧ್ಯಪ್ರಾಚ್ಯದ ಮೂಲಕ ಕೈಗೊಂಡಿದ್ದಾರೆ. ದಾವೋಸ್​​ನಲ್ಲಿ ಮಾತನಾಡಿದ ನಂತರ ಸದ್ಗುರು ಮಧ್ಯಪ್ರಾಚ್ಯಕ್ಕೆ ತಮ್ಮ ಪ್ರಯಾಣವನ್ನು ಬೆಳೆಸಿ ಓಮನ್ ತಲುಪಲಿದ್ದಾರೆ.

               ಮಾರ್ಚ್ 21ರಂದು ಲಂಡನ್​ನಿಂದ ಪ್ರಾರಂಭವಾದ ಅವರ ಪ್ರಯಾಣವು 65 ದಿನಗಳನ್ನು ಪೂರೈಸಿದೆ. ಈ ಪ್ರಯಾಣದಲ್ಲಿ ಒಟ್ಟು 467 ಕಾರ್ಯಕ್ರಮಗಳನ್ನು ಆಯೋಜಿಸಿದ ಸದ್ಗುರು, ಮಣ್ಣು ಉಳಿಸಲು ಅನೇಕ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ನಾಯಕರು ಒಂದೇ ಧ್ವನಿಯಲ್ಲಿ ಮಾತನಾಡುವಂತೆ ಒಟ್ಟುಗೂಡಿಸಿದ್ದಾರೆ. ಇಲ್ಲಿಯವರೆಗೆ 72 ದೇಶಗಳು ಮಣ್ಣನ್ನು ಉಳಿಸಲು ಒಪ್ಪಿಕೊಂಡಿದ್ದು ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.

               ಪ್ರಪಂಚದ ಎಲ್ಲೆಡೆ ಫಲವತ್ತಾದ ಮಣ್ಣಿನ ಅವನತಿಯು ಜಾಗತಿಕ ಆಹಾರ ಮತ್ತು ನೀರಿನ ಭದ್ರತೆಗೆ ಸ್ಪಷ್ಟ ಬೆದರಿಕೆಯೊಡ್ಡುತ್ತಿರುವ ಈ ಹೊತ್ತಿನಲ್ಲಿ ಅವರ ಈ ಜಾಗತಿಕ ಅಭಿಯಾನವು ಮಣ್ಣನ್ನು ಅವನತಿಯಿಂದ ಉಳಿಸಲು ಮುನ್ನೆಲೆಗೆ ಬಂದಿದೆ. ಮಣ್ಣಿನ ಅವನತಿಯ ಈಗಿನ ಗತಿಯಲ್ಲಿ 2050ರ ವೇಳೆಗೆ ಭೂಮಿಯ ಶೇ.90 ಮಣ್ಣು ಮೂರು ದಶಕಗಳಲ್ಲಿ ಮರುಭೂಮಿಯಾಗಲಿದೆ ಎಂದು ವಿಶ್ವಸಂಸ್ಥೆಯು ಎಚ್ಚರಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries