HEALTH TIPS

ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣ

            ಭಗವಾನ್ ಶ್ರೀಕೃಷ್ಣನು ಒಮ್ಮೆ ಯೋಗಿಯಾಗಿ ಕಂಡರೆ, ಮಗದೊಮ್ಮೆ ಭೋಗಿಯಾಗಿ ಪ್ರತ್ಯಕ್ಷನಾಗುತ್ತಾನೆ. ಒಮ್ಮೆ ಸ್ನೇಹಿತನಂತೆ ಜೊತೆಯಲ್ಲಿರುವಂತೆ ಭಾಸವಾಗುತ್ತಿರುತ್ತದೆ; ಮರುಕ್ಷಣವೇ ಅವನೊಬ್ಬ ಜಗದ್ಗುರುವಾಗಿ ದರ್ಶನ ಕೊಡುತ್ತಾನೆ. ಒಂದು ಕ್ಷಣ ನಮಗೆ ಅರ್ಥವಾಗುತ್ತಿದ್ದಾನೆ ಎಂದೆನಿಸುತ್ತದೆ, ತತ್‌ಕ್ಷಣವೇ ನಮ್ಮ ಭಾವ–ಬುದ್ಧಿಗಳಿಗೆ ಅವನು ಅತೀತ ಎಂಬ ಅನುಭವ ದಟ್ಟವಾಗುತ್ತದೆ. ಒಟ್ಟಿನಲ್ಲಿ ಅವನನ್ನು ಹೀಗೆ ಎಂದು ನಿರ್ಣಯಿಸಿ ಅವನೊಂದಿಗೆ ವ್ಯವಹರಿಸುವುದಕ್ಕೆ ಆಗುವುದಿಲ್ಲ ಎಂಬುದಂತೂ ಸ್ಪಷ್ಟ.

        ಕೃಷ್ಣನು ಸಾಮಾನ್ಯನೂ ಹೌದು; ಅದ್ಭುತನೂ ಹೌದು. ಮನುಷ್ಯನಾದವನು ಏನೇನನ್ನು ಬಯಸಬಹುದೋ, ಏನೇನನ್ನು ಉತ್ತಮವೆಂದು ಭಾವಿಸಬಹುದೋ, ಮನುಷ್ಯನಿಗೆ ಯಾವುದು ಶ್ರೇಯಸ್ಸೆಂದು ಅನ್ನಿಸುತ್ತದೆಯೋ ಆ ಎಲ್ಲ ಜಾತಿಯ ಭಾಗ್ಯಗಳ ಸಂಮೇಳನಮೂರ್ತಿಯೇ ಶ್ರೀಕೃಷ್ಣ... ಶ್ರೀಕೃಷ್ಣಾವತಾರವು ಮನಸ್ಸಿನ ದೃಷ್ಟಿಯಿಂದ ಸರ್ವಾಂಗ ಸಂಪೂರ್ಣವಾದ ಅವತಾರ.‘

          ನಮಗೆ ಏನೆಲ್ಲ ಬೇಕೋ ಅದನ್ನೆಲ್ಲವನ್ನೂ ಪೂರೈಸಬಲ್ಲವನು ಶ್ರೀಕೃಷ್ಣ ಎನ್ನುವುದು ಇದರಿಂದ ಸಿದ್ಧವಾಗುತ್ತದೆ. ಇಲ್ಲಿ ನಮಗೆ ಬೇಕಾಗಿರುವುದು ಎಂದರೆ ಭೌತಿಕವಾಗಿ ಒದಗುವಂಥ ವಸ್ತುಗಳು ಎಂದಲ್ಲ; ನಮ್ಮ ಮನಸ್ಸಿಗೆ ಬೇಕಾಗಿರುವಂಥ ವಿವರಗಳು ಎನ್ನುವುದು ಇಲ್ಲಿರುವ ಧ್ವನಿ. ಹೀಗೆ ನಮ್ಮ ಎಲ್ಲ ಸ್ಥಿತಿಗಳಲ್ಲೂ ಒದಗಬಲ್ಲಂಥ ಜಗದ್ಗುರುವೇ ಶ್ರೀಕೃಷ್ಣ.

            ಶ್ರೀಕೃಷ್ಣನ ಉಪದೇಶವನ್ನು ಸಂಗ್ರಹವಾಗಿ ಒಂದೆಡೆ ನಾವು ನೋಡುವಂಥದ್ದು ಭಗವದ್ಗೀತೆಯಲ್ಲಿಯೇ. ಅವನು ಕೇವಲ ಉಪದೇಶವನ್ನಷ್ಟೆ ಮಾಡಿದವನಲ್ಲ; ಅವನ ಉಪದೇಶಗಳಿಗೆ ಅವನ ಜೀವನವೇ ಸೊಗಸಾದ ಉದಾಹರಣೆಯೂ ಆಗಿದೆ. ಹೀಗಾಗಿ ಅವನ ಉಪದೇಶಗಳಿಗೆ ಭಗವದ್ಗೀತೆಯನ್ನು ನೋಡುವಂತೆ, ಅವನ ಜೀವನಕ್ಕೆ – ಎಂದರೆ ಉಪದೇಶಗಳಿಗೆ ವ್ಯಾಖ್ಯಾನವನ್ನು – ಮಹಾಭಾರತ, ಭಾಗವತ, ಹರಿವಂಶಗಳಲ್ಲಿ ನೋಡಬಹುದು.

             ಶ್ರೀಕೃಷ್ಣನು ಮಹಾಭಾರತದಲ್ಲಿ ಅರ್ಜುನನಿಗೆ ಬೋಧಿಸಿದ ಭಗವದ್ಗೀತೆ ಸಾರಾಂಶವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡಲ್ಲಿ ಸುಂದರ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗಿದೆಯಲ್ಲದೇ ಜೀವನದಲ್ಲಿ ಖಿನ್ನತೆ ಅನುಭವಿಸುವವರಿಗೆ ಸಂಜೀವಿನಿಯಾಗಿರುವುದು ಅಕ್ಷರಶಃ ನಿಜ. ಇನ್ನು ಮಹಾಭಾರತದ ಅನೇಕ ಪ್ರಸಂಗಗಳು ಇಂದಿನ ಯುವ ಜನಾಂಗಕ್ಕೆ ಮಾದರಿ ಮತ್ತು ಪ್ರೇರಕ ಶಕ್ತಿಯಾಗಿರುವ ಮಹಾಕಾವ್ಯಗಳಲ್ಲೊಂದು!! ಆದರೆ ಶ್ರೀಕೃಷ್ಣ ಪರಮಾತ್ಮನು ಸಾವಿನ ಬಗ್ಗೆ ಮಾಡಿರುವ ವರ್ಣನೆ ನಿಜಕ್ಕೂ ಕೂಡ ಅದ್ಭುತವೇ ಸರಿ!!

            ಈ ಜಗತ್ತಿನಲ್ಲಿ ಎಲ್ಲವೂ ನಶ್ವರ. ಅದರಲ್ಲೂ ನಿಮ್ಮ ದೇಹಕ್ಕೆ ಒಂದು ಆಯಸ್ಸು ಇದ್ದೂದರಿಂದ ನಿಮ್ಮ ದೇಹವನ್ನು ನಿಮ್ಮ ಗುರುತಿಗಾಗಿ ಬಳಸಿಕೊಳ್ಳುವುದು ನಿಷ್ಪ್ರಯೋಜಕ. ನಿಮ್ಮ ಆತ್ಮದ ಹೊರತಾಗಿ ಮತ್ತೆಲ್ಲವೂ ನಶ್ವರ. ಸತ್ತ ಬಳಿಕ ಈ ಜಗತ್ತಿನಲ್ಲಿ ಗಳಿಸಿದ್ದ ಏನನ್ನೂ ನಾವು ಕೊಂಡು ಹೋಗಲು ಸಾಧ್ಯವಿಲ್ಲ. ಯಾರನ್ನೂ ಜೊತೆಗೂ ಕರೆದೊಯ್ಯಲು ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಆದ್ದರಿಂದ ಇಂದಲ್ಲ ನಾಳೆ ಗತಿಸಬಹುದಾದ ಯಾವುದೇ ವಸ್ತುವಿಗಾಗಿ ಹಂಬಲಿಸುವುದು ತರವಲ್ಲ. ಆತ್ಮಶುದ್ದಿ, ಉತ್ತಮ ಜೀವನ, ನಾಲ್ವರಿಗೆ ಉಪಯೋಗಕ್ಕೆ ಬರುವಂತೆ ಬದುಕುವುದು, ಇದ್ದಷ್ಟೂ ದಿನ ಆತ್ಮವಂಚನೆ ಮಾಡಿಕೊಳ್ಳದೇ ಸಂತೋಷವಾಗಿರುವುದು, ಜೀವನದ ಗುರಿಯನ್ನು ನಿಜವಾದ ಅರ್ಥದಲ್ಲಿ ಸಾಧಿಸುವುದೇ ಶ್ರೇಷ್ಠ ಎಂದು ಭಗವದ್ಗೀತೆ ತಿಳಿಸುತ್ತದೆ. ಪಲಾಯನ ಮೂರ್ಖತನದ ಪರಮಾವಧಿಯಾಗಿದೆ ಈ ಭೂಮಿಯ ಮೇಲೆ ಬಂದ ಪ್ರತಿ ಜೀವಿಗೂ ತನ್ನದೇ ಆದ ಜವಾಬ್ದಾರಿಗಳಿವೆ. ಅಂತೆಯೇ ಜೀವನದಲ್ಲಿ ಎದುರಾಗುವ ಸುಖದುಃಖಗಳನ್ನು ಸಮನಾಗಿ ಎದುರಿಸಬೇಕೆಂದು ಭಗವದ್ಗೀತೆ ತಿಳಿಸುತ್ತದೆ.

             ಹೌದು… ಅರ್ಜುನನು, ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ತನ್ನ ಎದುರಾಳಿಗಳು ತಮ್ಮದೇ ಸ್ವಂತ ಸಹೋದರರು ಎನ್ನುವ ಸಂದಿಗ್ಧ ಪರಿಸ್ಥಿತಿಯು ಆತನಿಗೆ ಎದುರಾಗಿತ್ತು. ಅಷ್ಟೇ ಅಲ್ಲದೇ, ಪಿತೃಸಮಾನರಾದ ಭೀಷ್ಮ, ಮಲ ತಮ್ಮಂದಿರು, ಕರ್ಣ ಮೊದಲಾದವರು ತಮ್ಮ ಎದುರಾಳಿಗಳು. ಹಾಗಾಗಿ ತಾನು ಯುದ್ದವನ್ನೇ ಮಾಡಲಾರೇ ಎಂದು ಯುದ್ದದಿಂದ ಹಿಂಜರಿದು ರಥದಲ್ಲಿ ಕುಸಿಯುತ್ತಾನೆ. ಆ ಸಂದರ್ಭದಲ್ಲಿ, ಅರ್ಜುನನಿಗೆ ಸ್ಥೈರ್ಯ ತುಂಬಲು ಸಾರಥಿಯಾಗಿದ್ದ ಕೃಷ್ಣ ಹಲವು ಪಾಠಗಳನ್ನು ಕಲಿಸುತ್ತಾನೆ. ಈ ಮಾತುಗಳು ಸರ್ವಕಾಲಕ್ಕೂ ಸಲ್ಲುವ ವಾಣಿಗಳಾಗಿದ್ದು ಇವನ್ನು ಜೀವನದಲ್ಲಿ ಅಳವಡಿಸುವ ಮೂಲಕ ಅಂದು ಅರ್ಜುನ ಪಡೆದಿದ್ದ ಯಶಸ್ಸನ್ನು ಇಂದಿಗೂ ಯಾರೂ ಪಡೆಯಬಹುದು. ಅಷ್ಟೇ ಅಲ್ಲದೇ ಸಾವಿನ ಬಗೆಗೆ ಶ್ರೀ ಕೃಷ್ಣ ಪರಮಾತ್ಮ ನೀಡಿರುವ ಸಂದೇಶ ನಿಜಕ್ಕೂ ಅದ್ಭುತ!!

             ಶ್ರೀ ಕೃಷ್ಣನು ಸಾವಿನ ಬಗ್ಗೆ ಯಾಕೆ ಚಿಂತಿಸಬೇಕೆಂಬ ಪ್ರಶ್ನೆಗೆ ಪೂರಕ ಉತ್ತರ ನೀಡುತ್ತಾನೆ!! ಕೃಷ್ಣ ಹೇಳುವ ಪ್ರಕಾರ, “ಸಾವು ಭಯಾನಕವಲ್ಲ ಹುಟ್ಟಿಬಂದ ಮೇಲೆ ಸಾವು ಅನಿವಾರ್ಯ, ಆತ್ಮಕ್ಕೆ ಎಂದು ಸಾವಿಲ್ಲ, ದೇಹನಾಶವಾದಾಗ ಜೀವನಾಶವಾಗದು, ಆತ್ಮವನ್ನು ಕೊಲ್ಲುವುದು ಅಸಾಧ್ಯ ಆತ್ಮ ಎಂದಿಗೂ ಅಜರಾಮರ, ಪ್ರತಿಯೊಂದು ಜೀವಕ್ಕೆ ಅದರದೇ ಆದ ಸ್ವಭಾವವಿದೆ, ಜೀವವೊಂದು ಬೀಜದಂತೆ ಭಗವಂತ ಒಂದು ತೋಟಗಾರನಂತೆ ಆತ ಈ ಪ್ರಪಂಚವೆಂಬ ತೋಟ ಸೃಷ್ಟಿ ಮಾಡಿ ಆ ತೋಟದಲ್ಲಿ ಬೀಜ ಬಿತ್ತಿ ಅದಕ್ಕೊಂದು ಅಸ್ಥಿತ್ವ ಕೊಟ್ಟು ಪ್ರತಿಯೊಂದು ಜೀವ ಅದರ ಸ್ವಭಾವಕ್ಕನುಗುಣವಾಗಿ ಈ ಪ್ರಪಂಚದಲ್ಲಿ ಬೆಳೆಯುತ್ತವೆ, ಒಂದು ಜೀವದ ಸ್ವಭಾವ ಇನ್ನೊಂದು ಜೀವದ ಸ್ವಭಾವಕ್ಕೆ ಭಿನ್ನವಾಗಿರುತ್ತವೆ ಎಂದು ಹೇಳಿದ್ದಾನೆ!!

           ಅಷ್ಟೇ ಅಲ್ಲದೇ, ದೇಹನಾಶವೆಂದರೆ ಸ್ವರೂಪನಾಶವಲ್ಲ ಈ ದೇಹದಲ್ಲಿರುವ ಜೀವ ಪ್ರತೀ ಕ್ಷಣದಲ್ಲಿ ತನ್ನ ದೇಹ ಪರಿವರ್ತನೆಯನ್ನು ಮಾಡುತ್ತದೆ. ಬಾಲ್ಯದಲ್ಲಿನ ದೇಹ ಯೌವ್ವನದಲ್ಲಿಲ್ಲ, ಯೌವ್ವನದಲ್ಲಿನ ದೇಹ ಮುಪ್ಪಿನಲ್ಲಿಲ್ಲ, ಸತ್ತನಂತರ ಮತ್ತೆ ಮರುಹುಟ್ಟಿನೊಂದಿಗೆ ಹೊಸ ದೇಹ ಆದಕಾರಣ ನಮಗೆ ನಾವು ಎಲ್ಲಿಂದ ಬಂದಿದ್ದೇವೆ ಎಲ್ಲಿಗೆ ಹೋಗುತ್ತೇವೆ ಎಂಬ ಅರಿವು ನಮಗಿರಲ್ಲ, ನಮಗೆ ತಿಳಿದಿರುವುದು ನಮ್ಮ ಈಗಿನ ಅಸ್ಥಿತ್ವ ಮಾತ್ರ, ದೇಹ ನಾಶವಾಗಿ ಹೊಸ ದೇಹ ಬರಬಹುದು ಆದರೆ ಎಂದೂ ನಾಶವಾಗದ ಈ ಆತ್ಮ ಚೈತನ್ಯ ಈ ಜೀವ, ನಾಶವಾಗುವ ಈ ದೇಹದ ಬಗ್ಗೆ ಧೀರನಾದವನೂ ಎಂದೂ ಅಳುವುದಿಲ್ಲವೆಂದು ಕೃಷ್ಣ ಹೇಳುತ್ತಾನೆ.

           ಇಲ್ಲಿ ಶ್ರೀಕೃಷ್ಣ ಜೀವ ಸ್ವರೂಪ ಅಂದರೆ ಏನೆಂಬುವುದನ್ನು ವಿವರಿಸಿದ್ದಾನೆ!! ಜೀವ ಸ್ವರೂಪ ಎಂದೂ ಹುಟ್ಟುವುದಿಲ್ಲ ಎಂದೂ ಸಾಯುವುದಿಲ್ಲ ಅದು ಸದಾ ಏಕರೂಪದಲ್ಲಿರುತ್ತದೆ ಏಕೆಂದರೆ ಜೀವ ಸ್ವರೂಪ ಭಗವಂತನ ಪ್ರತೀರೂಪ, ಭಗವಂತನಿಗೆ ಹುಟ್ಟಿಲ್ಲ ಅವನು ಶಾಶ್ವತ, ಜೀವ ಸದಾ ಶರೀರದಿಂದ ಶರೀರಕ್ಕೆ ಚಲಿಸುತ್ತದೆ ಆದರೆ ದೇಹ ಬದಲಾಗುವಂತೆ ಜೀವ ಸ್ವರೂಪ ಬದಲಾಗುವುದಿಲ್ಲ, ದೇಹಕ್ಕೆ ಮುದಿತನ ಇದ್ದಂತೆ ಜೀವ ಸ್ವರೂಪಕ್ಕೆ ಮುದಿತನವಿಲ್ಲ, ಒಂದು ಜನ್ಮದಲ್ಲಿ ನಾಸ್ತಿಕನಾದವನು ಇನ್ನೊಂದು ಜನ್ಮದಲ್ಲಿ ಆಸ್ತಿಕನಾಗಬಹುದು, ಜೀವಕ್ಕೆ ಅಳಿವಿಲ್ಲ ಅದಕ್ಕೆ ಹುಟ್ಟು ಸಾವಿಲ್ಲ.!!

              ಹಾಗಿದ್ದರೆ ನಾವು ಪ್ರಾಪಂಚಿಕವಾಗಿ ಕಾಣುವ ಹುಟ್ಟು ಸಾವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಈ ಪ್ರಶ್ನೆಗೆ ಕೃಷ್ಣನ ಉತ್ತರ ಹೀಗಿದೆ;

            ನಾವು ಹಾಕಿದ ಬಟ್ಟೆ ಹೇಗೆ ಬದಲಾಯಿಸುತ್ತೆವೋ ಹಾಗೆ ಜೀವವೊಂದು ದೇಹವನ್ನು ಬದಲಿಸುತ್ತದೆ, ಅದ್ದರಂತೆ ಹುಟ್ಟು ಮತ್ತು ಸಾವು ಹಳೆ ಬಟ್ಟೆ ಕಳಚಿ ಹೊಸ ಬಟ್ಟೆ ಬದಲಿಸಿದಂತೆ, ಸ್ವರೂಪದಲ್ಲಿ ಜೀವಕ್ಕೆ ಹುಟ್ಟು ಸಾವೆಂಬುದಿಲ್ಲ, ಆತ್ಮಕ್ಕೆ ಸಾವೇ ಇಲ್ಲವೆಂದು ಕೃಷ್ಣ ಹೇಳುತ್ತಾನೆ. ಹುಟ್ಟು ಸಾವು, ಸುಖ ದುಃಖ ಇವೆಲ್ಲವೂ ಎರಡು ನಾಣ್ಯದ ಒಂದು ಮುಖವಿದ್ದಂತೆ ಹುಟ್ಟಿದ ಮೇಲೆ ಸಾವು ಕಟ್ಟಿಟ್ಟ ಬುತ್ತಿ ಹಾಗಿದ್ದ ಮೇಲೆ ಸಾವಿಗೆ ಅಳುವ ಅಗತ್ಯವಿಲ್ಲ, ನಮಗೆ ದೇಹ ಕೊಟ್ಟದ್ದು ಭಗವಂತ ಹಾಗಾಗಿ ಅವನು ಅದನ್ನು ಕಿತ್ತುಕೊಳ್ಳುವಾಗ ದುಃಖಪಡುವ ಅಗತ್ಯವಿಲ್ಲ, ನಮ್ಮ ಪ್ರತಿಯೊಂದು ಕರ್ತವ್ಯವನ್ನು ದೇವರ ಪೂಜೆಯೆಂದು ಮಾಡಿ ಸಾವಿಗೆ ಅಂಜದೆ ಬದುಕಿದರೆ ಈ ಜೀವ ಸಾರ್ಥಕ.

             ಈ ಭೂಮಿಯ ಮೇಲೆ ಬಂದ ಪ್ರತಿ ಜೀವಿಗೂ ತನ್ನದೇ ಆದ ಜವಾಬ್ದಾರಿಗಳಿವೆ. ಅಂತೆಯೇ ಜೀವನದಲ್ಲಿ ಎದುರಾಗುವ ಸುಖದುಃಖಗಳನ್ನು ಸಮನಾಗಿ ಎದುರಿಸಬೇಕೆಂದು ಭಗವದ್ಗೀತೆ ತಿಳಿಸುತ್ತದೆ. ಪಲಾಯನ ಮೂರ್ಖತನದ ಪರಮಾವಧಿಯಾಗಿದೆ ತನ್ನ ಜವಾಬ್ದಾರಿಗಳಿಂದ ಓಡಿ ಹೋಗುವವರನ್ನು ಹೇಡಿಗಳೆಂದು ಜರೆಯುವ ಮೂಲಕ ಜೀವನದಲ್ಲಿ ನಿಷ್ಕ್ರಿಯತೆಯನ್ನು ಖಂಡಿಸುತ್ತದೆ. ಕರ್ಮದ ಬಗ್ಗೆ ಚಿಂತಿಸು ಕರ್ಮದ ಫಲ ದೇವರಿಗೆ ಬಿಡು ನೀವು ಮಾಡುತ್ತಿರುವ ಯಾವುದೇ ಕೆಲಸವನ್ನು ಶ್ರದ್ದೆಯಿಂದ ಮತ್ತು ಪೂರ್ಣವಾಗಿ ತೊಡಗಿಸಿಕೊಂಡು ನಿರ್ವಹಿಸುವುದನ್ನು ಭಗವದ್ಗೀತೆ ಬೋಧಿಸುತ್ತದೆ. ಇದರ ಫಲವೇನಾಗಬಹುದು ಎಂಬ ಬಗ್ಗೆ ಚಿಂತೆ ಮಾಡದೇ ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯ ಫಲವೇ ಬರುತ್ತದೆ ಎಂದು ತಿಳಿದು ನಿಮ್ಮ ಕೆಲಸವನ್ನು ಆದಷ್ಟು ಪರಿಪೂರ್ಣವಾಗಿ ನಿರ್ವಹಿಸಿ ಎಂಬ ಪಾಠ ಮಹತ್ವದ್ದಾಗಿದೆ.

                ನಿಮ್ಮ ಭಗವಂತ ನಿಮ್ಮೊಳಗೇ ಇದ್ದಾನೆ, ಭಗವಂತ ಎಲ್ಲೆಲ್ಲೂ ಇದ್ದಾನೆ. ಆದರೆ ನೀವು ಆರಾಧಿಸುವ ಭಗವಂತ ನಿಮ್ಮೊಳಗೇ ಇದ್ದಾನೆ. ಜಗತ್ತಿನ ಕಣಕಣಗಳಲ್ಲಿ, ಜೀವಂತ ಮತ್ತು ಜೀವವಿಲ್ಲದ ಪ್ರತಿ ವಸ್ತುವಿನಲ್ಲಿ ಭಗವಂತನಿದ್ದಾನೆ.

            ಜೀವನದಲ್ಲಿ ನಡೆಯುವ ಪ್ರತಿ ಕ್ರಿಯೆಯೂ ಭಗವಂತನ ಅಣತಿಯಂತೆಯೇ ನಡೆಯುತ್ತಿದೆ. ನಿಮ್ಮ ಹೃದಯದಲ್ಲಿಯೂ ಭಗವಂತನಿರುವುದರಿಂದ ನಿಮ್ಮ ಕರ್ಮ ನಿಜವಾದುದೇ ಆದರೆ ಅದರ ಫಲ ಸಿಕ್ಕೇ ಸಿಗುತ್ತದೆ. ಯುದ್ದದ ಸಮಯದಲ್ಲಿ ಸಾವಿಗೆ ಹೆದರದಿರಲು ಹೇಳಿದ ಶ್ರೀಕೃಷ್ಣನ ಮಾತನ್ನು ನಂಬಿ ಮುನ್ನುಗ್ಗಿದ ಅರ್ಜುನನಿಗೆ ಕಡೆಗೆ ಜಯ ಪ್ರಾಪ್ತಿಯಾಗುತ್ತದೆ. ಭಯಪಡಬೇಡಿ ಸಾವು ದೇಹವನ್ನು ಕೊನೆಗೊಳಿಸಿ ಇನ್ನೊಂದು ಸ್ಥಿತಿಗೆ ತಲುಪಿಸುವ ಕ್ರಿಯೆಯೇ ಹೊರತು ಆತ್ಮಕ್ಕೆ ಸಾವಿಲ್ಲ. ಆದ್ದರಿಂದ ಸಾವಿಗೆ ಅಥವಾ ತನ್ನ ಏನನ್ನಾದರೂ ಕಳೆದುಕೊಳ್ಳುವ ಕಾರಣಕ್ಕೆ ಹೆದರದೇ ಮುನ್ನುಗ್ಗುವುದು ಜೀವನದ ಯಶಸ್ಸಿಗೆ ಮೂಲ ಎಂದು ಭಗವದ್ಗೀತೆ ತಿಳಿಸುತ್ತದೆ.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries