HEALTH TIPS

ಹೆಚ್ಚುತ್ತಿರುವ ತೆರಿಗೆ ವಂಚನೆ: ವಿಮಾ ಕಂಪನಿಗಳ ಮೇಲೆ ನಿಗಾ

               ವದೆಹಲಿ:ವಿಮಾ ನಿಯಂತ್ರಣ ಪ್ರಾಧಿಕಾರದ ನಿಯಮಗಳನ್ನು ಮೀರಿ ಏಜೆಂಟರಿಗೆ ಕಮಿಷನ್ ಪಾವತಿಯಲ್ಲಿ ಹೆಚ್ಚಿನ ಅಕ್ರಮಗಳು ಮತ್ತು ತೆರಿಗೆ ವಂಚನೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ(Income Tax Department)ಯು ಶೀಘ್ರವೇ ವಿಮಾ ಕಂಪನಿಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ ಅಧ್ಯಕ್ಷ ನಿತಿನ್ ಗುಪ್ತಾ(Nitin Gupta) ತಿಳಿಸಿದ್ದಾರೆ.

                      ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು,'ಇತ್ತೀಚಿಗಷ್ಟೇ ನಾವು ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದು,ವಿಮಾ ಕಂಪನಿಗಳು ಕಮಿಷನ್ ಪಾವತಿಸುವ ರೀತಿಯಲ್ಲಿ ಹಲವಾರು ಅಕ್ರಮಗಳು ಬೆಳಕಿಗೆ ಬಂದಿವೆ. ಎಲ್ಲ ವಿಮಾ ಕಂಪನಿಗಳು ಈ ಅಕ್ರಮಗಳನ್ನು ನಡೆಸಿವೆ. ತೆರಿಗೆ ವಂಚನೆ ಮತ್ತು ನಿಯಂತ್ರಣ ಪ್ರಾಧಿಕಾರದ ನಿಯಮಗಳನ್ನು ಮೀರಿದ್ದನ್ನು ನಾವು ಕಂಡುಕೊಂಡಿದ್ದೇವೆ. ಈ ಕಂಪನಿಗಳು ನಿಯಂತ್ರಣ ಪ್ರಾಧಿಕಾರದ ನಿಯಮಗಳನ್ನು ಮೀರಿರುವುದರಿಂದ ಅಂತಹ ವೆಚ್ಚಗಳಿಗೆ ಆದಾಯ ತೆರಿಗೆ ಕಾಯ್ದೆಯಡಿ ವಿನಾಯಿತಿಗೆ ಅನುಮತಿಸಲಾಗುವುದಿಲ್ಲ 'ಎಂದು ತಿಳಿಸಿದರು.

                      ಈ ಪ್ರಕರಣಗಳಲ್ಲಿ ಕಾನೂನು ಕ್ರಮಗಳು ಪ್ರಗತಿಯಲ್ಲಿವೆಯೇ ಎಂಬ ಪ್ರಶ್ನೆಗೆ ಗುಪ್ತಾ,'ಅಗತ್ಯವಿರುವ ಯಾವುದೇ ಕ್ರಮವನ್ನು ನಾವು ಆರಂಭಿಸುತ್ತೇವೆ,ಆದರೆ ಅವು ಕಾನೂನನ್ನು ಉಲ್ಲಂಘಿಸಿರುವ ರೀತಿಯು ಅತಿರೇಕದ್ದಾಗಿದೆ. ಅವು ಪವಿತ್ರ ಗೋವುಗಳೇನೂ ಅಲ್ಲ' ಎಂದು ಉತ್ತರಿಸಿದರು.
                     ಆದಾಯ ತೆರಿಗೆ ಇಲಾಖೆಯು ಕಂಡುಕೊಂಡಿರುವ ಅಂಶಗಳನ್ನು ಜಿಎಸ್ಟಿ ಕಾಯ್ದೆ ಗುಪ್ತಚರ ಮಹಾನಿರ್ದೇಶನಾಲಯವು 2022ರಲ್ಲಿ ಆರಂಭಿಸಿದ್ದ ತನಿಖೆಯೊಂದಿಗೆ ತಳುಕು ಹಾಕಬಹುದು. 824 ಕೋ.ರೂ.ಗಳ ಅನರ್ಹ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದುಕೊಂಡಿದ್ದಕ್ಕಾಗಿ 16 ವಿಮಾ ಕಂಪನಿಗಳು ಮಹಾನಿರ್ದೇಶನಾಲಯದ ತನಿಖೆಗೊಳಪಟ್ಟಿವೆ.

             ಕಾರ್ಪೊರೇಟ್ ವಿಮಾ ಏಜಂಟರಿಗೆ ಕೇವಲ ನಾಮಮಾತ್ರ ಕಮಿಷನ್ ಪಾವತಿಗೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಅನುಮತಿಸಿದೆ. ಆದರೆ ಮೈಕ್ರೋ ಫೈನಾನ್ಸಿಂಗ್ ವ್ಯವಹಾರದಲ್ಲಿ ತೊಡಗಿಕೊಂಡಿರುವ ಬ್ಯಾಂಕೇತರ ಹಣಕಾಸು ಕಂಪನಿಗಳಂತಹ ಕಾರ್ಪೊರೇಟ್ ಏಜಂಟರಿಗೆ ಹೆಚ್ಚಿನ ಕಮಿಷನ್ ಪಾವತಿಸಲು ಈ ವಿಮಾ ಕಂಪನಿಗಳು ಈ ನಿಯಮಗಳನ್ನು ತಪ್ಪಿಸುತ್ತಿವೆ ಎನ್ನುವುದು ಪರೋಕ್ಷ ತೆರಿಗೆ ಇಲಾಖೆಯ ತನಿಖೆಯಿಂದ ತಿಳಿದುಬಂದಿದೆ.

                      ವೆಬ್ ಮಾರ್ಕೆಟಿಂಗ್ ಅಥವಾ ಜಾಹೀರಾತುಗಳಂತಹ ಸೇವೆಗಳನ್ನು ವಾಸ್ತವದಲ್ಲಿ ಪಡೆದುಕೊಳ್ಳದೆ,ಅವುಗಳನ್ನು ಪೂರೈಸಲಾಗಿದೆ ಎಂದು ಮಧ್ಯವರ್ತಿಗಳಿಂದ ಇನ್ವಾಯ್ಸಾಗಳನ್ನು ಪಡೆದುಕೊಳ್ಳುವುದು ಈ ಕಂಪನಿಗಳು ಅಧಿಕ ಕಮಿಷನ್ ಪಾವತಿಯಲ್ಲಿ ಅನುಸರಿಸುತ್ತಿರುವ ಕಾರ್ಯತಂತ್ರವಾಗಿದೆ. 2022.ಸೆ.30ರ ವೇಳೆಗೆ ಈ ಕಂಪನಿಗಳು 824 ಕೋ.ರೂ.ಗಳ ಪೈಕಿ 217 ಕೋ.ರೂ.ಗಳನ್ನು 'ಸ್ವಯಂಪ್ರೇರಿತ'ವಾಗಿ ಜಿಎಸ್ಟಿ ಬೊಕ್ಕಸಕ್ಕೆ ರವಾನಿಸಿವೆ.

          ಐದು ಲಕ್ಷ ರೂ.ಗಿಂತ ವಾರ್ಷಿಕ ಪ್ರೀಮಿಯಮ್ನ ಜೀವವಿಮೆ ಪಾಲಿಸಿಗಳನ್ನು ಶ್ರೀಮಂತರು ಮಾತ್ರ ಖರೀದಿಸುತ್ತಾರೆ,ಹೀಗಾಗಿ ಇಂತಹವರಿಗೆ ತೆರಿಗೆಯನ್ನು ವಿಧಿಸುವ ಬಜೆಟ್ ನಿರ್ಧಾರವು ಸಾಮಾನ್ಯ ತೆರಿಗೆದಾರರಿಗೆ ಹೊಡೆತವನ್ನು ನೀಡುವುದಿಲ್ಲ. ಅಲ್ಲದೆ ಬಜೆಟ್ ನಿರ್ಧಾರವು ಮರಣ ಸೌಲಭ್ಯಗಳನ್ನು ಮಾತ್ರ ಒದಗಿಸುವ ಟರ್ಮ್ ಇನ್ಶೂರನ್ಸ್ ಪಾಲಿಸಿಗಳಿಗೆ ಅನ್ವಯಿಸುವುದಿಲ್ಲ ಎಂದು ಗುಪ್ತಾ ಈ ಸಂದರ್ಭದಲ್ಲಿ ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries