HEALTH TIPS

ಆಹಾರ ಧಾನ್ಯ ಸಂಗ್ರಹಕ್ಕೆ ₹1 ಲಕ್ಷ ಕೋಟಿ ಯೋಜನೆ: ಕೇಂದ್ರ ಅನುಮೋದನೆ

               ವದೆಹಲಿ: ಸಹಕಾರ ಕ್ಷೇತ್ರದಲ್ಲಿ ಆಹಾರ ಧಾನ್ಯಗಳ ಸಂಗ್ರಹ ಸಾಮರ್ಥ್ಯವನ್ನು 7 ಕೋಟಿ ಟನ್‌ಗಳಷ್ಟು ಹೆಚ್ಚಿಸುವ ಒಂದು ಲಕ್ಷ ಕೋಟಿ ರೂಪಾಯಿ ಮೊತ್ತದ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

                 ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌, 'ಉದ್ದೇಶಿತ ಈ ಕಾರ್ಯಕ್ರಮವು ಸಹಕಾರ ಕ್ಷೇತ್ರದಲ್ಲಿನ ವಿಶ್ವದಲ್ಲಿಯೇ ಅತಿದೊಡ್ಡ ಆಹಾರ ಧಾನ್ಯ ಸಂಗ್ರಹ ಯೋಜನೆಯಾಗಿದೆ' ಎಂದು ಹೇಳಿದರು.

                'ಈ ಕಾರ್ಯಕ್ರಮದಡಿ ಪ್ರತಿ ಮಂಡಲ ಮಟ್ಟದಲ್ಲಿ 2 ಸಾವಿರ ಟನ್‌ ಸಂಗ್ರಹ ಸಾಮರ್ಥ್ಯದ ಉಗ್ರಾಣ ನಿರ್ಮಿಸಲಾಗುವುದು' ಎಂದು ಮಾಹಿತಿ ನೀಡಿದರು.

              'ಆಹಾರ ಧಾನ್ಯಗಳನ್ನು ಸಂಗ್ರಹಿಸಿಡುವುದಕ್ಕೆ ಸಮರ್ಪಕ ಸೌಲಭ್ಯಗಳ ಕೊರತೆಯಿಂದಾಗಿ ರೈತರು ಕಡಿಮೆ ದರಕ್ಕೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ ತೊಂದರೆ ಅನುಭವಿಸುವುದನ್ನು ತಪ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಅಲ್ಲದೆ, ಆಹಾರ ಧಾನ್ಯಗಳ ಆಮದನ್ನು ತಗ್ಗಿಸುವುದು ಹಾಗೂ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯ ಗುರಿಯನ್ನೂ ಈ ಯೋಜನೆ ಹೊಂದಿದೆ' ಎಂದು ಠಾಕೂರ್‌ ವಿವರಿಸಿದರು.

               'ದೇಶದಲ್ಲಿ ವರ್ಷಕ್ಕೆ 31 ಕೋಟಿ ಟನ್‌ಗಳಷ್ಟು ಆಹಾರ ಧಾನ್ಯ ಉತ್ಪಾದಿಸಲಾಗುತ್ತದೆ. ಆದರೆ, ಈಗಿರುವ ಉಗ್ರಾಣಗಳಲ್ಲಿ ಒಟ್ಟು ಉತ್ಪಾದನೆಯ ಶೇ 47ರಷ್ಟು ಉತ್ಪನ್ನಗಳನ್ನು ಮಾತ್ರ ಸಂಗ್ರಹಿಸಿಡಲು ಸಾಧ್ಯವಾಗುತ್ತಿದೆ' ಎಂದೂ ಹೇಳಿದರು.

                                              'ಸಿಐಟಿಐಐಎಸ್‌ 2.0'ಗೆ ಅನುಮೋದನೆ:

              ನಗರ ಪ್ರದೇಶಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಒತ್ತು ನೀಡುವ 'ಸಿಟಿ ಇನ್ವೆಸ್ಟ್‌ಮೆಂಟ್ಸ್ ಟು ಇನ್ನೋವೇಟ್, ಇಂಟಿಗ್ರೇಟ್ ಅಂಡ್ ಸಸ್ಟೇನ್ (ಸಿಐಟಿಐಐಎಸ್‌) 2.0' ಎಂಬ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

                  ಈ ಕುರಿತು ಮಾಹಿತಿ ನೀಡಿದ ಸಚಿವ ಠಾಕೂರ್‌, ಪ್ರಸಕ್ತ ಹಣಕಾಸು ವರ್ಷದಿಂದ ನಾಲ್ಕು ವರ್ಷಗಳ ವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ. ಫ್ರೆಂಚ್‌ ಅಭಿವೃದ್ಧಿ ಸಂಸ್ಥೆ (ಎಎಫ್‌ಡಿ), ಕೆಎಫ್‌ಡಬ್ಲ್ಯು, ಐರೋಪ್ಯ ಒಕ್ಕೂಟ ಹಾಗೂ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಅರ್ಬನ್‌ ಅಫೇರ್ಸ್‌ (ಎನ್‌ಐಯುಎ) ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಹೇಳಿದರು.

              'ನಗರ ಮಟ್ಟದಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣೆ, ರಾಜ್ಯ ಮಟ್ಟದಲ್ಲಿ ಹವಾಮಾನ ಬದಲಾವಣೆ ಕೇಂದ್ರಿತ ಸುಧಾರಣಾ ಕ್ರಮಗಳಿಗೆ ಉತ್ತೇಜನ ನೀಡಲಾಗುತ್ತದೆ. ಈ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಗಳ ಸಬಲೀಕರಣ ಹಾಗೂ ಜ್ಞಾನ ಪ್ರಸಾರ ಕಾರ್ಯಕ್ಕೆ ರಾಷ್ಟ್ರ ಮಟ್ಟದಲ್ಲಿ ಪ್ರೋತ್ಸಾಹ ನೀಡುವುದನ್ನು ಈ ಯೋಜನೆ ಒಳಗೊಂಡಿದೆ' ಎಂದು ತಿಳಿಸಿದರು.

                'ಈ ಯೋಜನೆ ಅನುಷ್ಠಾನಕ್ಕೆ ಎಎಫ್‌ಡಿ ಹಾಗೂ ಕೆಎಫ್‌ಡಬ್ಲ್ಯು ಜಂಟಿಯಾಗಿ ಒಟ್ಟು ₹ 1,760 ಕೋಟಿ ಸಾಲ ಒದಗಿಸಲಿವೆ. ತಾಂತ್ರಿಕ ನೆರವಿನಡಿ ಐರೋಪ್ಯ ಒಕ್ಕೂಟವು ₹ 106 ಕೋಟಿ ಒದಗಿಸಲಿದೆ' ಎಂದು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries