ತಿರುವನಂತಪುರಂ: ಕರ್ನಾಟಕದಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್ ಪಕ್ಷದ ನಾಯಕತ್ವದ ಪಡಿಪಾಟಲು ಭಾರೀ ಅಪಹಾಸ್ಯಕ್ಕೆ ಕಾರಣವಾಗಿತ್ತು.
ಕರ್ನಾಟಕದಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದೇವೆ ಎಂದು ಕಾಂಗ್ರೆಸ್ ಹೇಳಿಕೊಂಡಾಗಲೂ ಸಿದ್ದರಾಮಯ್ಯ ಬಣ ಮತ್ತು ಡಿಕೆ ಶಿವಕುಮಾರ್ ಬಣ ಮುಖ್ಯಮಂತ್ರಿ ಗಾದಿಗಾಗಿ ಬೀದಿಗಿಳಿದು ಪ್ರತಿಭಟನೆ, ಮಾತಿನ ಚಕಮಕಿ ನಡೆಸುತ್ತಿರುವುದು ಕಂಡು ಬಂತು. ಉಭಯ ನಾಯಕರ ನಡುವಿನ ಜಟಾಪಟಿ ಕಾಂಗ್ರೆಸ್‍ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬಹುದಿನಗಳ ಸಂಧಾನದ ನಂತರ ಡಿಕೆ ಶಿವಕುಮಾರ್ ಒಲ್ಲದ ಮನಸ್ಸಿನಿಂದಲೇ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಟ್ಟರು. ಆದರೆ, ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಕರ್ನಾಟಕದಲ್ಲಿ ಯಾವುದೇ ಅನಾನುಕೂಲವಾಗದಂತೆ ಸಚಿವ ಸಂಪುಟ ರಚನೆಯಾಗಲಿದೆ ಎಂದು ಹೇಳಿಕೊಂಡಿದ್ದಾರೆ.
ಸಂಘಪರಿವಾರದ ದ್ವೇಷದ ರಾಜಕಾರಣ ಮತ್ತು ನರೇಂದ್ರ ಮೋದಿಯವರ ಹೊಗಳಿಕೆಯ ಪ್ರಚಾರವನ್ನು ಗಾಳಿಗೆ ತೂರಿ ಕರ್ನಾಟಕದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಬಲಿಷ್ಠ ಸರಕಾರ ಅಧಿಕಾರಕ್ಕೆ ಬಂದಿದೆ. ಸಚಿವ ಸಂಪುಟ ಬಹುಬೇಗ ಅಧಿಕಾರ ಹಿಡಿಯುತ್ತಿರುವುದು ಕಾಂಗ್ರೆಸ್ ನ ರಾಷ್ಟ್ರೀಯ ಹಾಗೂ ರಾಜ್ಯ ನಾಯಕತ್ವದ ಒಗ್ಗಟ್ಟನ್ನು ತೋರಿಸುತ್ತದೆ.
'ವ್ಯಕ್ತಿವಾದವನ್ನು ಅನುಸರಿಸುತ್ತಿರುವ ಬಿಜೆಪಿ ಮತ್ತು ಸಿಪಿಎಂನಂತಹ ರಾಜಕೀಯ ಪಕ್ಷಗಳು ಮುಖ್ಯಮಂತ್ರಿಯನ್ನು ನಿರ್ಧರಿಸಲು ದಿನಗಳು ಮತ್ತು ವಾರಗಳನ್ನು ತೆಗೆದುಕೊಂಡಾಗ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯಾವುದೇ ಅನಾನುಕೂಲತೆ ಇಲ್ಲದೆ ಸಚಿವ ಸಂಪುಟ ರಚನೆಗೆ ಬೇಗನೆ ಪ್ರವೇಶಿಸುತ್ತದೆ. ಕಾಂಗ್ರೆಸ್ ನ ರಾಷ್ಟ್ರೀಯ ನಾಯಕತ್ವ ಮತ್ತು ಕರ್ನಾಟಕದ ಕಾಂಗ್ರೆಸ್ ನಾಯಕರು ಜನರ ನಿರೀಕ್ಷೆಗೆ ತಕ್ಕಂತೆ ಬೆಳೆದಿದ್ದಾರೆ ಎಂದು ಕೆ.ಸುಧಾಕರನ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.





