ಸಿಂಗಲ್ ಪೇರೆಂಟ್ ಆಗಿ ಮಕ್ಕಳನ್ನು ಸಾಕೋದು ಅಂದ್ರೆ ಸುಲಭದ ಕೆಲಸವಲ್ಲ. ಅದು ಪುರುಷರಾಗಲಿ ಅಥವಾ ಮಹಿಳೆಯರಾಗಲಿ. ಕೆಲಸದ ಜೊತೆಗೆ ಮಕ್ಕಳ ಕಾಳಜಿಯನ್ನು ಮಾಡುವುದು ಕಷ್ಟವೇ ಸರಿ. ಮಹಿಳೆಯರಾದ್ರೆ ಹೆಚ್ಚಿನ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆಗಳಾಗುತ್ತದೆ. ಇನ್ನೂ ಪುರುಷರು ಸಿಂಗಲ್ ಪೇರೆಂಟ್ ಆಗಿದ್ರೆ ಆರ್ಥಿಕ ಸಮಸ್ಯೆಗಳು ಅಷ್ಟಾಗಿ ಎದುರಾಗದಿದ್ರೂ ಕೂಡ ಮಕ್ಕಳನ್ನು ನಿಭಾಯಿಸೋದು ಅವರಿಗೆ ಕಷ್ಟ ಆಗುತ್ತದೆ.
ಹೀಗೆ ಅನೇಕ ಸವಾಲುಗಳು ಎದುರಾಗುತ್ತಲೇ ಇರುತ್ತದೆ. ಇದು ಪೋಷಕರು ಮಾತ್ರವಲ್ಲದೇ ಮಕ್ಕಳ ಮೇಲೆಯೂ ಕೂಡ ಪರಿಣಾಮ ಬೀರಲಿದೆ. ಅಷ್ಟಕ್ಕೂ ಸಿಂಗಲ್ ಪೇರೆಂಟ್ ಎದುರಿಸುವ ಸವಾಲುಗಳೇನು? ಇದು ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನು ತಿಳಿಯೋಣ.
1. ಆರ್ಥಿಕ ಸಮಸ್ಯೆ ಕಾಡುತ್ತದೆ
ಪೋಷಕರು ಇಬ್ಬರೂ ದುಡಿಯುತ್ತಿದ್ದಾಗ ಕುಟುಂಬವನ್ನು ನಿಭಾಯಿಸೋದು ತುಂಬಾನೇ ಸುಲಭ. ಆದರೆ ಸಿಂಗಲ್ ಪೇರೆಂಟ್ ಆಗಿದ್ದಾಗ ಒಬ್ಬರ ದುಡಿಮೆಯಿಂದ ಇಡೀ ಕುಟುಂಬವನ್ನು ನೋಡಿಕೊಳ್ಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆಗಳು ಎದುರಾಗುತ್ತದೆ. ಒಂದು ಕಡೆಯಿಂದ ಕುಟುಂಬದ ಖರ್ಚು -ವೆಚ್ಚಗಳನ್ನು ನೋಡಿಕೊಳ್ಳಬೇಕು, ಮಕ್ಕಳ ಶಿಕ್ಷಣದ ಜೊತೆಗೆ ಮಕ್ಕಳ ಅವಶ್ಯಕತೆಗಳನ್ನು ಪೂರೈಸುವುದು ತುಂಬಾನೇ ಕಷ್ಟ.
ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ತುಂಬಾ ಆಸೆಗಳು ಇರುತ್ತದೆ. ಇದು ಹದಿಹರೆಯದ ವಯಸ್ಸಿಗೆ ಬಂದಂತೆ ಹೆಚ್ಚಾಗುತ್ತದೆ. ಇನ್ನೂ ಕಾಲೇಜಿಗೆ ಬಂದ ಹಾಗೆ ತಮ್ಮ ಸ್ನೇಹಿತರನ್ನು ನೋಡಿ ಕೆಲವೊಂದು ಆಸೆಗಳು ಮಕ್ಕಳಿಗೆ ಹುಟ್ಟಿಕೊಳ್ಳುತ್ತದೆ. ಇವೆಲ್ಲವನ್ನೂ ಪೂರೈಸೋದು ಸಿಂಗಲ್ ಪೇರೆಂಟ್ ಆಗಿದ್ದಾಗ ಕಷ್ಟ ಆಗುತ್ತದೆ.
2. ಶೈಕ್ಷಣಿವಾಗಿ ಹಿಂದಿಳಿಯುವ ಸಾಧ್ಯತೆಗಳಿದೆ
ಇಬ್ಬರು ಪೋಷಕರು ಇದ್ದಾಗ ಮಕ್ಕಳನ್ನು ನೋಡಿಕೊಳ್ಳೋದು ಅಷ್ಟೇನು ಕಷ್ಟ ಅನ್ನಿಸೋದಿಲ್ಲ. ಇಬ್ಬರಲ್ಲಿ ಒಬ್ಬರು ಕೆಲಸಕ್ಕೆ ಹೋದ್ರೂ ಕೂಡ ಮತ್ತೊಬ್ಬರು ಮಗುವಿನ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗೋದ್ರಿಂದ ಹಿಡಿದು ಅವರನ್ನು ಮನೆಯಲ್ಲಿ ಮಗುವಿಗೆ ಪಾಠ ಹೇಳಿಕೊಡಬಹುದು.
ಆದ್ರೆ ಸಿಂಗಲ್ ಪೇರೆಂಟ್ ಆದ್ರೆ ಇದು ಕಷ್ಟ. ಒಂದು ಕಡೆಯಿಂದ ಹೊರಗಡೆ ಹೋಗಿ ದುಡಿಯಬೇಕು, ಆಮೇಲೆ ಮನೆಗೆ ಬಂದು ಮನೆ ಕೆಲಸ, ಈ ಮಧ್ಯೆ ಮಕ್ಕಳನ್ನು ಓದಿಸೋದು ಕಷ್ಟ. ಮಕ್ಕಳ ಮೇಲೆ ಸರಿಯಾಗಿ ಕಣ್ಣಿಡದೇ ಹೋದರೆ ಮಕ್ಕಳು ಹಾದಿ ತಪ್ಪುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲದೇ, ಕಲಿಕೆಯಲ್ಲೂ ಹಿಂದೆ ಬೀಳುತ್ತಾರೆ.
3. ಆತ್ಮ ವಿಶ್ವಾಸ ಕಡಿಮೆ ಇರುತ್ತದೆ ಹುಟ್ಟುತ್ತಲೇ ಯಾವ ವ್ಯಕ್ತಿಯಲ್ಲೂ ಕೂಡ ಆತ್ಮ ವಿಶ್ವಾಸ ಅನ್ನೋದು ಇರೋದಿಲ್ಲ. ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬುವ ಸಂಪೂರ್ಣ ಜವಾಬ್ದಾರಿ ಪೋಷಕರ ಮೇಲೆ ಇರುತ್ತದೆ. ಶಾಲೆಯಲ್ಲಿ ಏನಾದರೂ ಘಟನೆಗಳು ನಡೆದಾಗ ಆ ಘಟನೆಗಳಿಂದ ಮಕ್ಕಳ ಮನಸ್ಸಿಗೆ ಅತಿಯಾದ ನೋವು ಉಂಟಾಗಿರಬಹುದು. ಇದರಿಂದ ಮಕ್ಕಳು ಕುಗ್ಗಿ ಹೋಗುವ ಸಾಧ್ಯತೆಗಳು ಇರುತ್ತದೆ. ಇಂತಹ ಸಂದರ್ಭದಲ್ಲಿ ಪೋಷಕರಾದವರು ಅವರ ಬೆನ್ನಿಗೆ ನಿಂತು ಅವರಿಗೆ ದೈರ್ಯ ಹೇಳಬೇಕು. ಇದರಿಂದ ಮಕ್ಕಳ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಸಿಂಗಲ್ ಪೇರೆಂಟ್ ಆಗಿದ್ದಾಗ ಇದಕ್ಕೆಲ್ಲಾ ಅವಕಾಶ ಇರೋದಿಲ್ಲ. ಕುಟುಂಬದ ಜವಾಬ್ದಾರಿಯ ಮಧ್ಯೆ ಮಕ್ಕಳ ಜೊತೆಗೆ ಮಾತನಾಡುವುದಕ್ಕೂ ಅವರಿಗೆ ಅವಕಾಶ ಇಲ್ಲದಂತಾಗುತ್ತದೆ.
4. ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಬಹುದು
ಉದಾಹರಣೆಗೆ ಮಗುವು ಅಪ್ಪನನ್ನು ಅತಿಯಾಗಿ ಹಚ್ಚಿಕೊಂಡಿರಬಹುದು. ಇಂತಹ ಸಂದರ್ಭದಲ್ಲಿ ವಿಚ್ಛೇದನ ನೀಡಿ ಪೋಷಕರು ದೂರ ದೂರ ಆದರೆ, ಹೆಚ್ಚಿನ ಸಂದರ್ಭದಲ್ಲಿ ಮಕ್ಕಳು ಅಮ್ಮನ ಜೊತೆಗೆ ಇರಬೇಕೆಂದು ಕೋರ್ಟ್ ತೀರ್ಪು ನೀಡುತ್ತದೆ. ಆಗ ಮಗು ಅಪ್ಪನ ಪ್ರೀತಿಯನ್ನು ಕಳೆದುಕೊಳ್ಳುತ್ತದೆ. ಆ ಮಗುವಿಗೆ ಪದೇ ಪದೇ ಅಪ್ಪನ ನೆನೆಪು ಕಾಡಬಹುದು. ಇದು ಮಗುವಿನ ಮನಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ.
5. ಮಗುವಿನಲ್ಲಿ ಖಿನ್ನತೆ, ಒತ್ತಡ ಹೆಚ್ಚಾಗುತ್ತದೆ
ಜೊತೆಗಿದ್ದ ಪೋಷಕರು ಬೇರೆ ಬೇರೆ ಆದಾಗ ಅದು ಹೆಚ್ಚಿನ ಪ್ರಭಾವ ಬೀರುವುದು ಮಕ್ಕಳ ಮೇಲೆ. ಮಕ್ಕಳು ಚಿಕ್ಕ ವಯಸ್ಸಿನವರು ಆಗಿರೋದ್ರಿಂದ ಅವರಿಗೆ ಏನಾಗುತ್ತಿದೆ ಅನ್ನೋದ್ರ ಸಣ್ಣ ಸುಳಿವು ಕೂಡ ಇರೋದಿಲ್ಲ. ಒಂಟಿತನ ಮಕ್ಕಳನ್ನು ಕಾಡೋದಕ್ಕೆ ಶುರುವಾಗುತ್ತದೆ. ಅವರಿಗೆ ಶಾಲಾ, ಶೈಕ್ಷಣಿಕ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸೋದಕ್ಕೆ ಸಾಧ್ಯವಾಗದೇ ಇರಬಹುದು. ಖಿನ್ನತೆ, ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ.
ಸಿಂಗಲ್ ಪೇರೆಂಟ್ ಆಗಿದ್ದಾಗ ಮಕ್ಕಳ ಮೇಲೆ ಗಮನ ಕೊಡೋದು ತುಂಬಾನೇ ಮುಖ್ಯ ಆಗುತ್ತದೆ. ಇಲ್ಲದಿದ್ದರೆ ಈ ರೀತಿ ಕೆಟ್ಟ ಪರಿಣಾಮಗಳು ಮಕ್ಕಳ ಮೇಲೆ ಆಗುತ್ತದೆ.