ಎರ್ನಾಕುಳಂ: ಕಲಮಸ್ಸೆರಿಯಲ್ಲಿ ಸಂಭವಿಸಿದ ಸ್ಫೋಟದ ಭೀಕರತೆಯನ್ನು ಪ್ರತ್ಯಕ್ಷದರ್ಶಿ ವಿವರಿಸಿದ್ದಾರೆ. ಎಲ್ಲರೂ ಕಣ್ಣು ಮುಚ್ಚಿ ಪ್ರಾರ್ಥನೆ ಮಾಡುತ್ತಿದ್ದಾಗ ಏಕಾಏಕಿ ಸ್ಫೋಟ ಸಂಭವಿಸಿದೆ ಮತ್ತು ಸ್ಫೋಟ ಸಂಭವಿಸಿದ ತಕ್ಷಣ ಎಲ್ಲೆಂದರಲ್ಲಿ ಓಡುತ್ತಿರುವುದು ಕಂಡುಬಂತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೂರು ಸ್ಫೋಟಗಳು ಸಂಭವಿಸಿವೆ. ವೇದಿಕೆಯ ಮಧ್ಯದಲ್ಲಿ ಮೊದಲ ಸ್ಫೋಟ ಸಂಭವಿಸಿದೆ. ಅದರ ನಂತರ ತಕ್ಷಣವೇ ಎಡ ಮತ್ತು ಬಲ ಭಾಗದಿಂದ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿ ಹೇಳಿದರು.
ಯೆಹೋವನ ಸಾಕ್ಷಿಗಳ ದೇವಾಲಯದಲ್ಲಿ ಮೂರು ದಿನಗಳ ಕನ್ವೆನ್ಶನ್ ಮುಕ್ತಾಯವಾಗುತ್ತಿದ್ದಂತೆ ಸ್ಫೋಟ ಸಂಭವಿಸಿದೆ. ಸ್ಫೋಟ ಸಂಭವಿಸಿದಾಗ ಸುಮಾರು 2,400 ಜನರು ಸಮಾವೇಶ ಕೇಂದ್ರದಲ್ಲಿ ಇದ್ದರು. ಅಗ್ನಿಶಾಮಕ ದಳ ಸೇರಿದಂತೆ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಕೇಂದ್ರ ತನಿಖಾ ತಂಡಗಳು ಕಲಮಶ್ಶೇರಿ ತಲುಪಿವೆ.




.webp)
