ಕಾಸರಗೋಡು: ಎಂಡೋಸಂತ್ರಸ್ತರ ವಿಚಾರದಲ್ಲಿ ಮಾತುಪಾಲಿಸದ ಸರ್ಕಾರದ ವಿರುದ್ಧ ಎಂಡೋಸಲ್ಫಾನ್ ಸಂತ್ರಸ್ತರ ಒಕ್ಕೂಟ ಜಿಲ್ಲೆಯಲ್ಲಿ ನಡೆಸಿಕೊಂಡು ಬರುತ್ತಿರುವ ಹೋರಾಟವನ್ನು ಮತ್ತೆ ರಾಜಧಾನಿಗೆ ವಿಸ್ತರಿಸಲಾಗುವುದು. ಡಿ. 5ರಂದು ತಿರುವನಂತಪುರ ಸೆಕ್ರೆಟೇರಿಯೆಟ್ ಎದುರು ಸಂತ್ರಸ್ತರ ಬೃಹತ್ ಹೋರಾಟ ಆಯೋಜಿಸಲು ಸಮಿತಿ ಸಭೆ ತೀರ್ಮಾನಿಸಿದೆ.
ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರಾಗಿದ್ದರು, ಸವಲತ್ತುಗಳಿಂದ ವಂಚಿತರಾಗಿರುವ 1031ಮಂದಿಯನ್ನು ಸಂತ್ರಸ್ತರ ಪಟ್ಟಿಗೆ ಸೇರ್ಪಡೆಗೊಳಿಸಬೇಕು, ಇವರಿಗೆ ಅಗತ್ಯ ಔಷಧü ಮತ್ತು ಚಿಕಿತ್ಸೆಯನ್ನು ಮುಂದುವರಿಸಬೇಕು, ಎಂಡೋಸೆಲ್ ಸಭೆಯನ್ನು ಸಕಾಲಕ್ಕೆ ನಡೆಸಬೇಕು, ಸಮರ್ಪಕಾಗಿ ಪಿಂಚಣಿ ವಿತರಿಸಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಷ್ಕರವನ್ನು ರಾಜಧಾನಿಗೆ ಸ್ಥಳಾಂತರಿಸುವುದು ಅನಿವಾರ್ಯವಾಗಲಿದೆ ಎಂದೂ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಆರ್ಥಿಕ ಸಮಸ್ಯೆ ಎಂಬ ಕಾರಣ ನೀಡಿ ಯೋಜನೆಗಳನ್ನು ಬುಡಮೇಲುಗೊಳಿಸುವ ಕ್ರಮವನ್ನು ಯಾವುದೇ ಬೆಲೆ ತೆತ್ತಾದರೂ ವಿರೋಧಿಸಲಾಗುವುದು. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ರಾಜ್ಯವು ಪಾವತಿಸಿದ ಸಂಪೂರ್ಣ ಮೊತ್ತವನ್ನು ಎಂಡೋಸಲ್ಫಾನ್ ಉತ್ಪಾದನಾ ಕಂಪೆನಿಯಿಂದ ವಸೂಲಿಮಾಡಲು ಸರ್ಕಾರ ಬದ್ಧವಾಗಬೇಖು, ಕಂಪನಿ ನೀಡದಿದ್ದರೆ ಕೇಂದ್ರ ಸರಕಾರದಿಂದ ವಸೂಲಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. 2017ರ ಜ.10ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಜಾರಿಗೆ ಮುಂದಾಗದೆ ಆರ್ಥಿಕ ಸಂಕಷ್ಟದಿಂದ ಯೋಜನೆ ನಿಲ್ಲಿಸುವ ಕ್ರಮವನ್ನು, ನ್ಯಾಯಾಲಯದಲ್ಲಿ ಹೋರಾಟನಡೆಸಿ ಗೆದ್ದ ಡಿವೈಎಫ್ ಐ ಸೇರಿದಂತೆ ಯುವ ಸಂಘಟನೆಗಳು ತಡೆಯಲು ಮುಂದಾಗಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ.ಈ ಬಗ್ಗೆ ನಡೆದ ಸಭೆಯಲ್ಲಿ ಎಂ.ಕೆ. ಅಜಿತಾ ಅಧ್ಯಕ್ಷತೆ ವಹಿಸಿದ್ದರು. ಡಾ.ಡಿ.ಸುರೇಂದ್ರನಾಥ್, ಜೈನ್. ಪಿ. ವರ್ಗೀಸ್, ತಸ್ರಿಯಾ ಚೆಂಗಳ, ಸರಸ್ವತಿ ಅಜಾನೂರು, ಭವಾನಿ ಕೋಟೋಂ-ಬೇಲೂರು, ಸುಬೈರ್ ಪಡ್ಪು, ಮೊದಲಾದವರು ಉಪಸ್ಥಿತರಿದ್ದರು. ಪಿ.ಶೈನಿ ಸ್ವಾಗತಿಸಿದರು. ರಾಧಾಕೃಷ್ಣನ್ ಅಂಜಾವಯಲ್ ವಂದಿಸಿದರು.

