ಬದಿಯಡ್ಕ : ಇಡೀ ವರ್ಷದ ಶೈಕ್ಷಣಿಕ ಆರಾಧನೆಗೆ ವಿದ್ಯಾದಶಮಿಯು ಶಕ್ತಿಯಾಗುತ್ತದೆ. ಭಾರತೀಯ ಸಂಸ್ಕøತಿಯಲ್ಲಿ ಪುಸ್ತಕ, ಸಂಗೀತ, ವಾದ್ಯಪರಿಕರಗಳನ್ನು ದೇವರ ಎದುರು ಇರಿಸಿ, ಪೂಜಿಸಿ, ಶಿಕ್ಷಣಕ್ಕಾಗಿ ಬಳಸುವ ಸಂಪ್ರದಾಯವಿದೆ. ಇದನ್ನು ವಿದ್ಯಾರ್ಥಿಗಳು ಆರಾಧನಾ ರೂಪದಲ್ಲಿ ಸ್ವೀಕರಿಸಬೇಕು’ ಎಂದು ಬದಿಯಡ್ಕ ಸಮೀಪದ ಪುಳಿತ್ತಡಿಯ ನಾರಾಯಣೀಯಂ ಸಂಗೀತ ವಿದ್ಯಾಪೀಠಂನ ನಿರ್ದೇಶಕ ವಿದ್ವಾನ್ ಬಳ್ಳಪದವು ಯೋಗೀಶ ಶರ್ಮ ಹೇಳಿದರು.
ಅವರು ಮಂಗಳವಾರ ಸಂಸ್ಥೆಯಲ್ಲಿ ನಡೆದ ಸಂಗೀತ ವಿದ್ಯಾರಂಭಂ ಕಾರ್ಯಕ್ರಮದಲ್ಲಿ ಮಾತನಾಡಿದರು.
’ಸಂಗೀತಗಾರರಿಗೆ ನವರಾತ್ರಿಯೇ ವರ್ಷಾರಂಭ. ಗುರುಗಳ ಮನಸ್ಸಿಗೆ ನೋವು ಮಾಡದಿರುವುದೇ ಬಹುದೊಡ್ಡ ಗುರುದಕ್ಷಿಣೆ. ಯಾಕಂದರೆ ಅವರು ವಿದ್ಯಾರ್ಥಿಗಾಗಿ ಸರ್ವಸ್ವವನ್ನೂ ಧಾರೆ ಎರೆದಿರುತ್ತಾರೆ. ’ಗುರುತ್ವಂ’ ಎಂಬ ಶಬ್ಧಕ್ಕೆ ಪ್ರತಿ ವಿದ್ಯಾರ್ಥಿಯೂ ಗೌರವ ನೀಡಬೇಕು.’ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಮಾಧವನ್ ನಂಬೂದರಿ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಸುಭಾಷ್ ಬೆಂಗಳೂರು, ಗಣೇಶ್ ಕಿನ್ನಿಗೋಳಿ ಇದ್ದರು. ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತಾರ್ಚನೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಆಲಂಗಾರು ರಾಧಾಕೃಷ್ಣ ಭಟ್ ಅವರ ನೇತೃತ್ವದಲ್ಲಿ ನವಾವರಣ ಕೃತಿ ಸಹಿತ ಶ್ರೀವಿದ್ಯಾ ಸಪರ್ಯ ಯಜ್ಞಂ ಹಾಗೂ ಗಣಪತಿ ಹೋಮ ನಡೆಯಿತು. ಸಂಸ್ಥೆಯಲ್ಲಿ ಅನೇಕ ಮಂದಿ ವಿದ್ಯಾರ್ಥಿಗಳು ಸಂಗೀತಾಭ್ಯಾಸ ಆರಂಭಿಸಿದರು.


