ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್‌ಎಫ್ ವಶದಲ್ಲಿದ್ದ ಅತ್ಯಾಚಾರ ಆರೋಪಿಯು, ಸಿನಿಮೀಯ ರೀತಿಯಲ್ಲಿ ಕಾರಿನಿಂದ ಜಿಗಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
0
samarasasudhi
ಡಿಸೆಂಬರ್ 26, 2023
ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್‌ಎಫ್ ವಶದಲ್ಲಿದ್ದ ಅತ್ಯಾಚಾರ ಆರೋಪಿಯು, ಸಿನಿಮೀಯ ರೀತಿಯಲ್ಲಿ ಕಾರಿನಿಂದ ಜಿಗಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಇದೇ 20ರಂದು ಬಹ್ರೇನ್‌ನಿಂದ ಭಾರತಕ್ಕೆ ಬಂದಿದ್ದ ಅಮನ್‌ದೀಪ್ ಸಿಂಗ್ ಸಿಐಎಸ್‌ಎಫ್ ವಶದಿಂದ ತಪ್ಪಿಸಿಕೊಂಡಿರುವ ಆರೋಪಿ.
'ಅಮನ್‌ದೀಪ್ ವಿರುದ್ಧ 2020ರ ಏಪ್ರಿಲ್‌ನಲ್ಲಿ ಪಂಜಾಬ್‌ನ ಲೂಧಿಯಾನದಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಆಗಿನಿಂದಲೂ ಆತ ತಲೆ ಮರೆಸಿಕೊಂಡಿದ್ದ. 20ರಂದು ಬಹ್ರೇನ್‌ನಿಂದ ಭಾರತಕ್ಕೆ ಬಂದಿದ್ದ. ಆತನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಆಗಿದ್ದರಿಂದಾಗಿ ಆತನನ್ನು ವಲಸೆ ಇಲಾಖೆ ಅಧಿಕಾರಿಗಳು ಹಿಡಿದು, ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್‌ಎಫ್ ವಶಕ್ಕೆ ನೀಡಿದ್ದರು. ಸಿಐಎಸ್‌ಎಫ್ ಅಧಿಕಾರಿಗಳು ಆತನನ್ನು ದೆಹಲಿ ಪೊಲೀಸರ ವಶಕ್ಕೆ ನೀಡಲು ವಿಮಾನ ನಿಲ್ದಾಣದಿಂದ ಕರೆದೊಯ್ಯುತ್ತಿದ್ದರು. ಆಗ, ಆರೋಪಿಯು ಕಾರಿನಿಂದ ಕೆಳಕ್ಕೆ ಜಿಗಿದು, ಪರಾರಿಯಾಗಿದ್ದಾನೆ' ಎಂದು ದೆಹಲಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಸಂಬಂಧ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆತನ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.