ಪತ್ತನಂತಿಟ್ಟ: ಹೋಟೆಲ್, ಪಾತ್ರೆ ಅಂಗಡಿಗಳಲ್ಲಿ ದುಬಾರಿ ಬೆಲೆ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಶಬರಿಮಲೆ ಸನ್ನಿಧಾನದಲ್ಲಿ ಜಿಲ್ಲಾಧಿಕಾರಿಯಿಂದ ಮಿಂಚಿನ ತಪಾಸಣೆ ನಡೆದಿದೆ.
ಅಯ್ಯಪ್ಪ ಭಕ್ತರಿಂದ ದುಬಾರಿ ಬೆಲೆ ವಸೂಲಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎ.ಶಿಬು ಪರಿಶೀಲನೆ ತೀವ್ರಗೊಳಿಸಿದ್ದಾರೆ.
ಸನ್ನಿಧಾನದ ಹೋಟೆಲ್‍ನಿಂದ ನಾಲ್ಕು ಮಸಾಲೆ ದೋಸೆ ಖರೀದಿಸಿದ ಅಯ್ಯಪ್ಪ ಭಕ್ತರಿಗೆ 360 ರೂಪಾಯಿ ಬಿಲ್ ನೀಡಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ. 228 ರೂಪಾಯಿ ಮೌಲ್ಯದ ಮಸಾಲೆ ದೋಸೆಗೆ 360 ರೂಪಾಯಿ ಬಿಲ್ ನೀಡಲಾಗಿತ್ತು. ಅಲ್ಲದೆ 49 ರೂಪಾಯಿ ಬೆಲೆಯ ನೇಯ್ ರೋಸ್ಟ್(ತುಪ್ಪ ರೋಸ್ಟ್) ಗೆ 75 ರೂಪಾಯಿ ವಸೂಲಿ ಮಾಡಿರುವುದು ಕಂಡು ಬಂದಿದೆ. 48 ರೂ.ಗಳ ಗ್ರೀನ್‍ಪೀಸ್ ಕರಿಗೆ 60 ರೂ. 14 ರೂ.ಗಳ ಪಲಾವ್ ಗೆ 20 ರೂ., 15 ರೂ.ಗಳ ಪರೋಟಕ್ಕೆ 20 ರೂ. ವಸೂಲಿ ಮಾಡಿರುವುದು ಕಂಡುಬಂದಿದೆ.
ಮಸಾಲೆದೋಸೆಗೆ ದುಬಾರಿ ದರ ವಿಧಿಸಿರುವ ಬಗ್ಗೆ ಹೋಟೆಲ್ ಮಾಲೀಕರಿಂದ ಜಿಲ್ಲಾಧಿಕಾರಿಗೆ ವಿವರಣೆ ಕೇಳಿದ್ದು, ದೋಸೆ ಜೊತೆಗೆ ಚಟ್ನಿಗೆ ಹೆಚ್ಚುವರಿ ಹಣ ನೀಡಿರುವುದಾಗಿ ತಿಳಿಸಲಾಗಿದೆ. ಘಟನೆಯ ನಂತರ ಜಿಲ್ಲಾಧಿಕಾರಿಗಳು ಹೋಟೆಲ್‍ನಿಂದ ದಂಡ ವಸೂಲಿ ಮಾಡಿ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹೋಟೆಲ್‍ಗಳಲ್ಲದೆ, ಪಾತ್ರೆ ಅಂಗಡಿಗಳಲ್ಲೂ ಅಧಿಕ ದರ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ. ಜಿಲ್ಲಾಧಿಕಾರಿಯವರು ಸತತ ಎರಡನೇ ದಿನವೂ ಮಿಂಚಿನ ತಪಾಸಣೆ ನಡೆಸಿದ್ದಾರೆ.


