ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್‍ಟಿಪಿ ರಸ್ತೆ ಅಂಚಿಗೆ ಅಳವಡಿಸುತ್ತಿರುವ ಸೂಚನಾಫಲಕಗಳು ಕೆಲವು ಪ್ರದೇಶಗಳಲ್ಲಿ ಭಾರಿ ಗೊಂದಲಕ್ಕೆ ಕಾರಣವಾಗುತ್ತಿದೆ. ಬದಿಯಡ್ಕ ಮೇಲಿನ ಪೇಟೆಯಲ್ಲಿ ಮುಳ್ಳೇರಿಯ ತೆರಳಬೇಕಾದ ಸೂಚನಾಫಲಕದಲ್ಲಿ ಚೆರ್ಕಳ ಹಾಗೂ ಚೆರ್ಕಳ ತೆರಳಬೇಕಾದ ಸೂಚನೆಯನ್ನು ಮುಳ್ಳೇರಿಯಾ ತೆರಳುವ ಬಾಣದ ಗುರುತುಮಾಡಿರುವುದು ಪ್ರಯಾಣಿಕರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ.
ಕುಂಬಳೆಯಿಂದ ಆರಂಭಗೊಂಡು, ಸೀತಾಂಗೋಳಿ, ಬದಿಯಡ್ಕ, ನಾರಂಪಾಡಿ, ಮವ್ವಾರು ಹಾದಿಯಾಗಿ ಮುಳ್ಳೇರಿಯ ಸಂಪರ್ಕ ಕಲ್ಪಿಸುವ ಪ್ರಸಕ್ತ ರಸ್ತೆಯನ್ನು 160ಕೋಟಿಗೂ ಹೆಚ್ಚಿನ ಮೊತ್ತ ಬಳಸಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಕಾಮಗಾರಿ ಬಹುತೇಕ ಪೂರ್ತಿಗೊಂಡಿದೆ. ಆದರೆ ಕೆಲವೆಡೆ ಇನ್ನೂ ಸೂಚನಾಫಲಕಗಳು ಪ್ರಯಾಣಿಕರನ್ನು ಹಾದಿ ತಪ್ಪಿಸುತ್ತಿದೆ. ಅಪರಿಚಿತರು ಬದಿಯಡ್ಕ ಮೇಲಿನ ಪೇಟೆಯಲ್ಲಿ ಅಳವಡಿಸಿರುವ ಸೂಚನಾಫಲಕ ಕಂಡು ಸಂಚರಿಸಿದಲ್ಲಿ ಮುಳ್ಳೇರಿಯ ತೆರಳುವವರು ಚೆರ್ಕಳ ಹಾಗೂ ಚೆರ್ಕಳ ತೆರಳಬೇಕಾದವರು ಮುಳ್ಳೇರಿಯ ತಲುಪುವ ಸಾಧ್ಯತೆ ಹೆಚ್ಚಾಗಿದೆ. ಈ ಹಿಂದೆ ಅಳವಡಿಸಿದ್ದ ಕೆಲವೊಂದು ಸೂಚನಾಫಲಕಗಳಲ್ಲೂ ತಪ್ಪುಗಳೇ ತುಂಬಿಕೊಂಡಿದ್ದು, ಈ ಬಗ್ಗೆ ಸಂಬಂಧಪಟ್ಟವರ ಗಮನಸೆಳೆದಾಗ ತಪ್ಪು ಸರಿಪಡಿಸಲಾಗಿತ್ತು.
ಮತ್ತೆ ಅದೇ ರೀತಿಯ ತಪ್ಪು ಸೂಚನಾಫಲಕಗಳಲ್ಲಿ ನುಸುಳಿಕೊಂಡಿದ್ದು, ಸಮಸ್ಯೆ ಎದುರಾಗಿದೆ. ಸೂಚನಾಫಲಕಗಳಲ್ಲದೆ ಚರಂಡಿ ನಿರ್ಮಾಣ, ರಸ್ತೆವಿಭಾಜಕ ನಿರ್ಮಾಣದಲ್ಲೂ ಕೆಲವೊಂದು ಲೋಪಗಳಿರುವುದಾಗಿ ಸ್ಥಳಿಯ ವ್ಯಾಪಾರಿಗಳು ದೂರಿದ್ದಾರೆ. ಕಾಸರಗೋಡು-ಜಾಲ್ಸೂರು ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರೀತಿಯಲ್ಲಿ ಕುಂಬಳೆಯಿಂದ ಸೀತಾಂಗೋಳಿ-ಬದಿಯಡ್ಕ-ನಾರಂಪಾಡಿ ಮೂಲಕ ಮುಳ್ಳೇರಿಯಕ್ಕೆ 28ಕಿ.ಮೀ ದೂರದ ಈ ರಸ್ತೆಯನ್ನು ಕೇರಳ ಸ್ಟೇಟ್ ಟ್ರಾನ್ಸ್‍ಪೋರ್ಟ್ ಪ್ರಾಜೆಕ್ಟ್(ಕೆಎಸ್‍ಟಿಪಿ)ನೇತೃತ್ವದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಪ್ರಸಕ್ತ ಕೆಎಸ್‍ಟಿಪಿ ರಸ್ತೆಯಲ್ಲಿ ಕುಂಬಳೆಯಿಂದ ಮುಳ್ಳೇರಿಯವರೆಗೆ 40ಕ್ಕೂ ಹೆಚ್ಚು ಪ್ರಯಾಣಿಕರ ತಂಗುದಾಣಗಳನ್ನೂ ನಿರ್ಮಿಸಲಾಗಿದೆ.


