HEALTH TIPS

ಚುನಾವಣಾ ಆಯುಕ್ತರ ನೇಮಕ: ಮಾರ್ಚ್‌ 15ಕ್ಕೆ ಪ್ರಧಾನಿ ಮೋದಿ ಸಭೆ?

           ವದೆಹಲಿ: ಚುನಾವಣಾ ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸರ್ಕಾರವು ತ್ವರಿತಗತಿಯಲ್ಲಿ ಮುಂದಡಿ ಇರಿಸಿರುವಂತಿದೆ. ಚುನಾವಣಾ ಆಯುಕ್ತರನ್ನು ನೇಮಕ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಮಾರ್ಚ್‌ 15ರ ಸುಮಾರಿಗೆ ಸಭೆ ಸೇರುವ ನಿರೀಕ್ಷೆ ಇದೆ.

              ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ತಮ್ಮ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿದ್ದಾರೆ. ಇನ್ನೊಬ್ಬ ಚುನಾವಣಾ ಆಯುಕ್ತ ಆಗಿದ್ದ ಅನೂಪ್ ಪಾಂಡೆ ಅವರು ಫೆಬ್ರುವರಿಯಲ್ಲಿ ನಿವೃತ್ತರಾಗಿದ್ದಾರೆ. ಈಗ ಚುನಾವಣಾ ಆಯೋಗದ ಸಮಿತಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಮಾತ್ರ ಇದ್ದಾರೆ.

                ಲೋಕಸಭಾ ಚುನಾವಣೆಯ ವಿಚಾರವಾಗಿ ಗೋಯಲ್ ಅವರು ರಾಜೀವ್ ಕುಮಾರ್ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದರು ಎಂಬ ಊಹಾಪೋಹಗಳಿವೆ. ಹೀಗಾಗಿ, ಗೋಯಲ್ ಅವರ ರಾಜೀನಾಮೆಗೂ, ಅವರು ರಾಜೀವ್ ಕುಮಾರ್ ಅವರ ಜೊತೆ ಹೊಂದಿದ್ದರು ಎನ್ನಲಾದ ಭಿನ್ನಾಭಿಪ್ರಾಯಕ್ಕೂ ಸಂಬಂಧ ಇದೆಯೇ ಎಂಬ ಪ್ರಶ್ನೆಯನ್ನು ವಿರೋಧ ಪಕ್ಷಗಳು ಎತ್ತಿವೆ.

ಮಾರ್ಚ್‌ 5ರಂದು ಕೋಲ್ಕತ್ತದಲ್ಲಿ ನಡೆದ ಚುನಾವಣಾ ಆಯೋಗದ ಸುದ್ದಿಗೋಷ್ಠಿಯಲ್ಲಿ ಗೋಯಲ್ ಅವರು ಹಾಜರಿರಲಿಲ್ಲ. ಅವರು ಆರೋಗ್ಯದ ಸಮಸ್ಯೆಯ ಕಾರಣಕ್ಕಾಗಿ ಸುದ್ದಿಗೋಷ್ಠಿಗೆ ಬಂದಿಲ್ಲ ಎಂದು ಹೇಳಲಾಗಿತ್ತು. ಆದರೆ, ಅವರ ಅಂದಿನ ಅನುಪಸ್ಥಿತಿಯು, ರಾಜೀನಾಮೆ ನಂತರದ ಊಹಾಪೋಹಗಳಿಗೆ ಪುಷ್ಟಿ ನೀಡುತ್ತಿದೆ.

                ಗೋಯಲ್ ಅವರು ರಾಜೀನಾಮೆಗೆ ಕಾರಣ ಏನು ಎಂಬುದನ್ನು ಅಧಿಕೃತವಾಗಿ ಹೇಳಿಲ್ಲ. ಸರ್ಕಾರ ಅಥವಾ ಚುನಾವಣಾ ಆಯೋಗದ ಕಡೆಯಿಂದಲೂ ವಿವರಣೆ ಲಭ್ಯವಾಗಿಲ್ಲ. ಅವರು 2027ರ ಡಿಸೆಂಬರ್‌ವರೆಗೆ ಕರ್ತವ್ಯ ಅವಧಿ ಹೊಂದಿದ್ದರು. ಅಲ್ಲದೆ, ಗೋಯಲ್ ಅವರು ಮುಂದೆ ಮುಖ್ಯ ಚುನಾವಣಾ ಆಯುಕ್ತ ಆಗುವ ಸಾಧ್ಯತೆಯೂ ಇತ್ತು.

            ಚುನಾವಣಾ ಆಯೋಗದಲ್ಲಿ ಸಿಇಸಿ ಮಾತ್ರ ಇದ್ದಾರೆ ಎಂಬ ಕಾರಣಕ್ಕೆ ಆಯೋಗದ ಕರ್ತವ್ಯಗಳ ನಿರ್ವಹಣೆಗೆ ಕಾನೂನಿನ ತೊಡಕೇನೂ ಇಲ್ಲ. ಪಾಂಡೆ ಅವರ ನಿವೃತ್ತಿಯ ನಂತರ ಅವರ ಸ್ಥಾನಕ್ಕೆ ಇನ್ನೊಬ್ಬರನ್ನು ನೇಮಕ ಮಾಡಲು ಸರ್ಕಾರವು ತ್ವರಿತವಾಗಿ ಕ್ರಮ ಕೈಗೊಂಡಿರಲಿಲ್ಲ.

              ಆಯ್ಕೆ ಸಮಿತಿಯ ಸಭೆಯನ್ನು ಮಾರ್ಚ್‌ 15ಕ್ಕೆ ನಡೆಸಲು ಈಗ ಸರ್ಕಾರವು ಮುಂದಾಗಿದೆ ಎಂದು ಮೂಲಗಳು ಹೇಳಿವೆ. ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ಸಿನ ನಾಯಕ ಆಗಿರುವ ಅಧೀರ್ ರಂಜನ್ ಚೌಧರಿ ಅವರು ಆಯ್ಕೆ ಸಮಿತಿಯ ಸದಸ್ಯರು.

                ಪಾಂಡೆ ಅವರ ನಿವೃತ್ತಿಯ ಕಾರಣದಿಂದ ತೆರವಾದ ಸ್ಥಾನವನ್ನು ಭರ್ತಿ ಮಾಡುವ ಉದ್ದೇಶದ ಸಭೆಗೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ಹೇಳಿವೆ. ಆದರೆ, ಸಭೆಯ ಕಾರ್ಯಸೂಚಿಯನ್ನು ಪರಿಷ್ಕರಿಸಿ ಚುನಾವಣಾ ಆಯುಕ್ತರ ಎರಡೂ ಸ್ಥಾನಗಳ ಭರ್ತಿಗೆ ಮುಂದಾಗಬಹುದು ಎಂದು ಮೂಲಗಳು ಹೇಳಿವೆ. ಚೌಧರಿ ಅವರು ಬುಧವಾರ ದೆಹಲಿಗೆ ಬರಲಿದ್ದಾರೆ ಎಂದು ಗೊತ್ತಾಗಿದೆ. ಸಭೆಯು ಮಾರ್ಚ್‌ 14ರಂದೇ ನಡೆಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಲೋಕಸಭಾ ಚುನಾವಣೆಯ ವೇಳಾಪಟ್ಟಿಯು ಇಬ್ಬರು ಚುನಾವಣಾ ಆಯುಕ್ತರ ಆಯ್ಕೆಯ ನಂತರ ಪ್ರಕಟವಾಗುವ ನಿರೀಕ್ಷೆ ಇದೆ.

              'ಕಾದು ನೋಡಬೇಕು': ಅಭಿಜಿತ್ ಗಂಗೋಪಾಧ್ಯಾಯ ಅವರು ಕೋಲ್ಕತ್ತ ಹೈಕೋರ್ಟ್‌ ನ್ಯಾಯಮೂರ್ತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮಾರನೆಯ ದಿನ ಬಿಜೆಪಿ ಸೇರಿದ ನಿದರ್ಶನವನ್ನು ಉಲ್ಲೇಖಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗೋಯಲ್ ಅವರ ಮುಂದಿನ ನಡೆ ಏನಿರಲಿದೆ ಎಂಬುದನ್ನು ಕಾದುನೋಡಬೇಕು ಎಂದು ಹೇಳಿದ್ದಾರೆ.

             ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗೋಯಲ್ ಅವರ ರಾಜೀನಾಮೆಗೂ ಬಂಗಾಳದ ಚುನಾವಣೆಗೂ ಸಂಬಂಧ ಇದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. 'ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣೆ ಹಾಗೂ ಭದ್ರತಾ ಸಿಬ್ಬಂದಿಯ ನೇಮಕ ವಿಚಾರದಲ್ಲಿ ದೆಹಲಿಯ ನಾಯಕರು ಹಾಗೂ ತಮ್ಮ ಮೇಲಧಿಕಾರಿಯ ಒತ್ತಡಕ್ಕೆ ಮಣಿಯದ ಗೋಯಲ್ ಅವರಿಗೆ ನಾನು ಪ್ರಣಾಮ ಸಲ್ಲಿಸುವೆ. ಚುನಾವಣೆಯ ಹೆಸರಿನಲ್ಲಿ ಮೋದಿ ನೇತೃತ್ವದ ಸರ್ಕಾರವು ಏನು ಮಾಡಲು ಬಯಸಿತ್ತು ಎಂಬುದನ್ನು ಇದು ತೋರಿಸಿಕೊಟ್ಟಿದೆ. ಅವರು ಮತಗಳನ್ನು ಲೂಟಿಹೊಡೆಯಲು ಬಯಸಿದ್ದರು' ಎಂದು ಮಮತಾ ಹೇಳಿದ್ದಾರೆ.

                ಗೋಯಲ್ ರಾಜೀನಾಮೆಯು ಮೂರು ಪ್ರಶ್ನೆಗಳನ್ನು ಎತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆ. 'ಅವರು ಮುಖ್ಯ ಚುನಾವಣಾ ಆಯುಕ್ತರ ಜೊತೆಗಿನ ಭಿನ್ನಾಭಿಪ್ರಾಯದ ಕಾರಣಕ್ಕೆ ರಾಜೀನಾಮೆ ನೀಡಿದರೇ, ಅಥವಾ ಸ್ವತಂತ್ರ ಅಂದುಕೊಂಡಿರುವ ಎಲ್ಲ ಸಂಸ್ಥೆಗಳ ಚಾಲಕ ಸ್ಥಾನದಲ್ಲಿ ಕುಳಿತಿರುವ ಮೋದಿ ನೇತೃತ್ವದ ಸರ್ಕಾರದ ಜೊತೆಗಿನ ಭಿನ್ನಮತದ ಕಾರಣಕ್ಕೆ ರಾಜೀನಾಮೆ ನೀಡಿದರೇ? ಅಥವಾ ಅವರು ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದರೇ' ಎಂದು ರಮೇಶ್ ಅವರು ಎಕ್ಸ್‌ ಮೂಲಕ ಪ್ರಶ್ನಿಸಿದ್ದಾರೆ.

                'ಕಲ್ಕತ್ತ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರು ಕೆಲವು ದಿನಗಳ ಹಿಂದೆ ಮಾಡಿರುವಂತೆ, ಬಿಜೆಪಿ ಟಿಕೆಟ್ ಪಡೆದು ಚುನಾವಣೆ ಎದುರಿಸಲು ರಾಜೀನಾಮೆ ನೀಡಿದರೇ' ಎಂದು ಕೂಡ ರಮೇಶ್ ಪ್ರಶ್ನಿಸಿದ್ದಾರೆ. ಬಿಜೆಪಿ ಟಿಕೆಟ್ ಪಡೆದು ಚುನಾವಣಾ ಕಣಕ್ಕೆ ಇಳಿಯುವ ಉದ್ದೇಶದಿಂದ ಗೋಯಲ್ ರಾಜೀನಾಮೆ ನೀಡಿರುವ ಸಾಧ್ಯತೆ ಇದೆ ಎಂದು ರಮೇಶ್ ಅವರು ಸುದ್ದಿಗಾರರ ಬಳಿ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries