HEALTH TIPS

ಪೋಲಿಯೊದಿಂದಾಗಿ 70 ವರ್ಷಗಳ ಕಾಲ ಲೋಹದ ಸಿಲಿಂಡರ್‌ ಒಳಗೇ ಬದುಕಿದ್ದ ವ್ಯಕ್ತಿ ನಿಧನ

              ವಾಷಿಂಗ್ಟನ್‌: ಹುಟ್ಟಿದ ಕೆಲವೇ ವರ್ಷಗಳಲ್ಲಿ ಪೋಲಿಯೊಗೆ ತುತ್ತಾಗಿದ್ದ ಪೌಲ್ ಅಲೆಕ್ಸಾಂಡರ್‌ ಎಂಬ ವ್ಯಕ್ತಿ, ಕುತ್ತಿಗೆ ಭಾಗದಲ್ಲಿ ಉಂಟಾದ ಪಾರ್ಶ್ವವಾಯು ಸಮಸ್ಯೆಯಿಂದ ಉಸಿರಾಡಲು ಕಷ್ಟಪಡುತ್ತಿದ್ದರು. ವೈದ್ಯರ ಸಲಹೆಯಂತೆ ಉಸಿರಾಡಲು ಅಳವಡಿಸಿದ ಲೋಹದ ಸಿಲಿಂಡರ್‌ ಒಳಗೇ ಜೀವನ ಪೂರ್ತಿ ಕಳೆದ ವ್ಯಕ್ತಿ 78ನೇ ವರ್ಷದಲ್ಲಿ ನಿಧನರಾಗಿದ್ದಾರೆ.

            ಸ್ವತಂತ್ರವಾಗಿ ಓಡಾಡಲು ಸಾಧ್ಯವಾಗದೇ ಬಾಲ್ಯದಲ್ಲೇ ಲೋಹದ ಸಿಲಿಂಡರ್‌ ಒಳಗೆ ದೇಹ ತೂರಿಸಿಕೊಂಡೇ ಬದುಕಿದ ಪೌಲ್, ಕಾನೂನು ಪದವಿ ಪಡೆದವರು. ಅಷ್ಟು ಮಾತ್ರವಲ್ಲ, ಲೋಹದ ಸಿಲಿಂಡರ್‌ ಒಳಗೆ ತೂರಿಕೊಂಡೇ ವಕೀಲಿ ವೃತ್ತಿಯನ್ನೂ ನಡೆಸಿದರು. ಇವರ ಆತ್ಮ ಚರಿತ್ರೆ ಸಾಕಷ್ಟು ಸುದ್ದಿ ಮಾಡಿತು ಎಂದು ಬಿಬಿಸಿ ವರದಿ ಮಾಡಿದೆ.

              'ಲೋಹದ ಸಿಲಿಂಡರ್ ಹೊಂದಿದ ಮಾತ್ರಕ್ಕೆ ಆತ ವಿಶೇಷ ವ್ಯಕ್ತಿಯಾಗಿರಲಿಲ್ಲ. ಇತರರಿಗೆ ಇರುವಂತೆಯೇ ನನಗೂ ಆತ ಸಹಜ ಸಹೋದರನಂತೆಯೇ ಇದ್ದ. ನಾವು ಜಗಳವಾಡಿದ್ದೇವೆ, ಬಡಿದಾಡಿಕೊಂಡಿದ್ದೇವೆ. ಕೂಡಿ ಆಡಿದ್ದೇವೆ, ಪ್ರೀತಿಸಿದ್ದೇವೆ, ಪಾರ್ಟಿಗಳಿಗೂ ಹೋಗಿದ್ದೇವೆ. ಆತನ ಇತರರಂತೆ ಸಾಮಾನ್ಯನಲ್ಲ ಎಂಬ ಕಲ್ಪನೆಯೂ ನನಗೆ ಎಂದಿಗೂ ಬಾರದಷ್ಟು ಸಹಜವಾಗಿ ಆತ ಬದುಕಿದ್ದ' ಎಂದು ಪೌಲ್ ಸೋದರ ಫಿಲಿಪ್ ನೆನೆದಿದ್ದಾರೆ.

               'ಇತರರಿಗೆ ನೆರವಾಗುವಲ್ಲಿ ಮೊದಲಿಗನಾಗಿರುತ್ತಿದ್ದ. ಆದರೆ ಇತ್ತೀಚಿನ ಕೆಲ ದಿನಗಳಲ್ಲಿ ಆತನ ಆರೋಗ್ಯ ಹದಗೆಡುತ್ತಿತ್ತು. ಅಂತಿಮ ಕಾಲದಲ್ಲಿ ಆತ ನನ್ನೊಂದಿಗೇ ಇದ್ದ. ಇಬ್ಬರೂ ಜತೆಗೂಡಿ ಪಿಂಟ್‌ ಹಾಗೂ ಐಸ್‌ ಕ್ರೀಂ ಸವಿದಿದ್ದೇವೆ. ಆತನೊಂದಿಗೆ ದಿನಗಳನ್ನು ಕಳೆದಿದ್ದೇ ನನ್ನ ಬದುಕಿನ ಸುಂದರ ಕ್ಷಣ' ಎಂದಿದ್ದಾರೆ.

                ಪೌಲ್‌ ದೇಹದ ಸುತ್ತ ಹಾಕಲಾಗಿದ್ದ ಲೋಹದ ಸಿಲಿಂಡರ್ ಅವರಿಗಿದ್ದ ಶ್ವಾಸಕೋಶದ ಸಮಸ್ಯೆಗೆ ಸ್ವಲ್ಪ ಮಟ್ಟಿನ ನೆರವು ನೀಡುತ್ತಿತ್ತು. ತೆಗೆದುಕೊಂಡ ಉಸಿರು, ಅವರ ಪುಪ್ಪಸವನ್ನು ಇನ್ನಷ್ಟು ಉಬ್ಬಿಸುವಂತೆ ಮಾಡುತ್ತಿತ್ತು. ಇದರಿಂದ ಅವರ ಶ್ವಾಸಕೋಶದೊಳಗೆ ಗಾಳಿ ಸೇರುತ್ತಿತ್ತು. ಈ ಪ್ರಕ್ರಿಯೆ ನಡೆಯುತ್ತಲೇ ಇತ್ತು. 1950ರ ನಂತರದಲ್ಲಿ ಪೋಲಿಯೊಗೆ ಲಸಿಕೆ ಕಂಡುಹಿಡಿಯಲಾಯಿತು. ನಂತರವಷ್ಟೇ ಪೋಲಿಯೊ ನಿರ್ಮೂಲನೆಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಯಿತು. ಅಲ್ಲಿಯವರೆಗೂ ಇಂಥ ಸಮಸ್ಯೆ ಎದುರಿಸುವವರಿಗೆ ಲೋಹದ ಶ್ವಾಸಕೋಶವನ್ನೇ ಅಳವಡಿಸಲಾಗುತ್ತಿತ್ತು.

               1984ರಲ್ಲಿ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಪೌಲ್ ಕಾನೂನು ಪದವಿ ಪಡೆದರು. ನಂತರ ಬಾರ್‌ ಕೌನ್ಸಿಲ್‌ನ ಸದಸ್ಯತ್ವವನ್ನೂ ಪಡೆದರು, ಅಗತ್ಯ ಇರುವವರಿಗೆ ನೆರವಾದರು. 1960ರಲ್ಲೇ ಲೋಹದ ಸಿಲಿಂಡರ್‌ ಮರೆಯಾಗಿ, ವೆಂಟಿಲೇಟರ್‌ಗಳು ಮಾರುಕಟ್ಟೆಗೆ ಬಂದಿದ್ದವು. ಆದರೆ ಬಾಲ್ಯದಿಂದ ಬದುಕಿನ ಬಹುಪಾಲು ಲೋಹದ ಸಿಲಿಂಡರ್‌ಗೆ ಒಗ್ಗಿಕೊಂಡಿದ್ದರಿಂದ, ಅದರಿಂದ ಹೊರ ಬರಲು ಪೌಲ್ ನಿರಾಕರಿಸಿದರು.

                 ಅತಿ ದೀರ್ಘಕಾಲದವರೆಗೆ (70 ವರ್ಷ) ಲೋಹದ ಶ್ವಾಸಕೋಶ ಹೊಂದಿದ್ದಕ್ಕಾಗಿ ಪೌಲ್ ಅವರ ಹೆಸರು ಗಿನ್ನಿಸ್ ವಿಶ್ವ ದಾಖಲೆಯೂ ಆಗಿ ದಾಖಲಾಗಿದೆ. ಆದರೆ ಇಷ್ಟು ದೀರ್ಘಕಾಲ ಬದುಕಿದ್ದ ಪೌಲ್ ಅಲೆಕ್ಸಾಂಡರ್‌ ಇನ್ನು ನೆನಪಷ್ಟೇ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries