ತ್ರಿಶೂರ್: ಕಪ್ಪು ಮೈಬಣ್ಣದವರು ಮೋಹಿನಿಯಾಟ್ಟಂ ನೃತ್ಯ ಮಾಡಬಾರದು ಎಂದು ಆರ್‍ಎಲ್‍ವಿ ರಾಮಕೃಷ್ಣನ್ ಅವರನ್ನು ಉದ್ದೇಶಿಸಿ ಕಲಾಮಂಡಲಂ ಸತ್ಯಭಾಮಾ ಅವರು ಯೂಟ್ಯೂಬ್ ಚಾನೆಲ್‍ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರ ವಿರುದ್ಧ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದೆ.
ತ್ರಿಶೂರ್ ಜಿಲ್ಲಾ ಪೋಲೀಸ್ ಮುಖ್ಯಸ್ಥರು ಹಾಗೂ ಸಂಸ್ಕøತಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಉಲ್ಲೇಖವನ್ನು ಪರಿಶೀಲಿಸಿ 15 ದಿನಗಳೊಳಗೆ ವರದಿ ಸಲ್ಲಿಸಬೇಕು ಎಂದು ಆಯೋಗದ ಸದಸ್ಯ ವಿ.ಕೆ. ಬೀನಾ ಕುಮಾರಿ ಆಗ್ರಹಿಸಿದರು. ಮಾಧ್ಯಮಗಳ ಸುದ್ದಿ ಆಧರಿಸಿ ಸ್ವಯಂಪ್ರೇರಿತವಾಗಿ ದಾಖಲಾಗಿರುವ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮಾನವ ಹಕ್ಕುಗಳ ಕಾರ್ಯಕರ್ತ ಗಿನ್ನಿಸ್ ಮಾದ ಸಾಮಿ ಕೂಡ ಇದೇ ವಿಚಾರವಾಗಿ ದೂರು ದಾಖಲಿಸಿದ್ದರು.
ಆರ್‍ಎಲ್‍ವಿ ರಾಮಕೃಷ್ಣನ್ ಅವರು ಸತ್ಯಭಾಮಾ ಜೊತೆಗೆ ಕಲಾಮಂಡಲಂ ಯೂಟ್ಯೂಬ್ ಚಾನೆಲ್ ಮತ್ತು ಸಂದರ್ಶಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದರು. ದೂರು ದಾಖಲಿಸುವ ಕುರಿತು ತಜ್ಞರಿಂದ ಕಾನೂನು ಸಲಹೆ ಪಡೆಯಲಾಗಿದೆ. ರಾಮಕೃಷ್ಣನ್ ಮಾತನಾಡಿ, ಕಲಾಕ್ಷೇತ್ರಕ್ಕೆ ಹೊಸಬರು ಬರಲಾಗದ ಪರಿಸ್ಥಿತಿ ಇದೆ ಎಂದಿರುವರು.
ಘಟನೆ ಏನು?:
ಮೋಹಿನಿಯಾಟ್ಟಂ ಕಲಾವಿದರೊಬ್ಬರನ್ನು ಗುರಿಯಾಗಿಸಿ ಕಲಾವಿದೆ ಕಲಾಮಂಡಲಂ ಸತ್ಯಭಾಮಾ ನೀಡಿರುವ ಹೇಳಿಕೆ ಕೇರಳದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.
ಜನಾಂಗೀಯ ನಿಂದನೆ ಎಂಬ ಟೀಕೆಗಳು ಕೇಳಿಬಂದಿವೆ. ಇದನ್ನು ನಿರಾಕರಿಸಿರುವ ಸತ್ಯಭಾಮಾ ಅವರು, 'ನಾನು ಯಾವ ಕಲಾವಿದರನ್ನೂ ಗುರಿಯಾಗಿಸಿ ಈ ಹೇಳಿಕೆ ನೀಡಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.
'ಕಾಗೆ ಬಣ್ಣದಂತಹ ಮೈಬಣ್ಣ ಹೊಂದಿದ ಪುರುಷ ಕಲಾವಿದನೊಬ್ಬ ನೀಡಿರುವ ಮೋಹಿನಿಯಾಟ್ಟಂ ಪ್ರದರ್ಶನ ಅಶ್ಲೀಲವೆನಿಸುತ್ತದೆ. ಪುರುಷ ತನ್ನ ಕಾಲುಗಳನ್ನು ಅಗಲಿಸಿ ನೃತ್ಯ ಮಾಡುವುದನ್ನು ನೋಡುವುದು ವಿಲಕ್ಷಣವೆನಿಸುತ್ತದೆ' ಎಂದು ಸತ್ಯಭಾಮಾ ಹೇಳಿದ್ದಾರೆ.
ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಮಾತುಗಳನ್ನಾಡಿರುವ ಸತ್ಯಭಾಮಾ, 'ಆ ಕಲಾವಿದನ ತಾಯಿ ಕೂಡ ಆತನ ನೃತ್ಯ ಪ್ರದರ್ಶನ ಸಹಿಸಲಾರಳು' ಎಂದಿದ್ದಾರೆ.
ತಮ್ಮ ಮಾತುಗಳಲ್ಲಿ ಯಾವುದೇ ಕಲಾವಿದನ ಹೆಸರನ್ನು ಸತ್ಯಭಾಮಾ ಉಲ್ಲೇಖ ಮಾಡಿಲ್ಲವಾದರೂ, ಮೋಹಿನಿಯಾಟ್ಟಂ ಕಲಾವಿದ ಆರ್.ಎಲ್.ವಿ.ರಾಮಕೃಷ್ಣನ್ ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
'ಚಾಲಕ್ಕುಡಿ ಮೂಲದ ಕಲಾವಿದನನ್ನು ಗುರಿಯಾಗಿಸಿ ಸತ್ಯಭಾಮಾ ಈ ಟೀಕೆ ಮಾಡಿದ್ದಾರೆ. ಚಾಲಕ್ಕುಡಿ ನನ್ನ ಸ್ವಂತ ಊರು. ಹೀಗಾಗಿ, ನನ್ನನ್ನೇ ಗುರಿಯಾಗಿಸಿ ಅವರು ಈ ಟೀಕೆ ಮಾಡಿರುವುದು ಸ್ಪಷ್ಟ' ಎಂದು ರಾಮಕೃಷ್ಣನ್ ಹೇಳಿದ್ದಾರೆ.
ಮೋಹಿನಿಯಾಟ್ಟಂ ಕುರಿತು ಪಿಎಚ್.ಡಿ ಪದವಿ ಪಡೆದಿರುವ ರಾಮಕೃಷ್ಣನ್ ಅವರು, ದಿವಂಗತ ನಟ ಕಲಾಭವನ ಮಣಿ ಅವರ ಸಹೋದರ.
'ಈ ರೀತಿಯ ಜನಾಂಗೀಯ ನಿಂದನೆ ಮಾಡಿರುವುದಕ್ಕಾಗಿ ಸತ್ಯಭಾಮಾ ವಿರುದ್ಧ ಕಾನೂನುಕ್ರಮ ಕೈಗೊಳ್ಳುವೆ. ನನ್ನ ಕುರಿತು ಅವರು ದ್ವೇಷ ಸಾಧಿಸುತ್ತಲೇ ಬಂದಿದ್ದಾರೆ. ಈ ಹಿಂದೆಯೂ ಹಲವು ಬಾರಿ ನನ್ನನ್ನು ಅಮಾನಿಸಿದ್ದಾರೆ' ಎಂದು ರಾಮಕೃಷ್ಣನ್ ಹೇಳಿದ್ದಾರೆ.
ಸತ್ಯಭಾಮಾ ಅವರ ಹೇಳಿಕೆಗೆ ಸಮಾಜದ ವಿವಿಧ ಸ್ತರದ ಜನರಿಂದಲೂ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಆದರೆ, ಸತ್ಯಭಾಮಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. 'ಮೋಹಿನಿಯಾಟ್ಟಂ ಪ್ರದರ್ಶಿಸುವವರಿಗೆ ಗೌರವರ್ಣ ಇರಬೇಕು. ಮೈಬಣ್ಣವೇ ಈ ನೃತ್ಯಪ್ರಕಾರದ ತಿರುಳು' ಎಂದಿರುವ ಅವರು 'ನಾನು ಎಲ್ಲಿಯೂ ರಾಮಕೃಷ್ಣನ್ ಅವರ ಹೆಸರು ಪ್ರಸ್ತಾಪಿಸಿಲ್ಲ' ಎಂದು ಹೇಳಿದ್ದಾರೆ.