ಕಾಸರಗೋಡು: 'ಮಾಲಿನ್ಯ ಮುಕ್ತ ನವ ಕೇರಳಕ್ಕಾಗಿ ಜನಪರ ಅಬಿಯಾನ'ದ ಅಂಗವಾಗಿ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಹಸಿರು ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಲಯಾಳದ ಪ್ರಮಾಣಪತ್ರ ವಿತರಿಸಲಾಗುತ್ತಿದೆ.
ತಾವು ಕೈಗೊಳ್ಳುತ್ತಿರುವ ಆಂದೋಲನದ ಬಗ್ಗೆ ಲಭಿಸಿದ ಪ್ರಮಾಣಪತ್ರದಲ್ಲಿ ನಮೂದಿಸಿರುವ ಮಾಹಿತಿ ಬಗ್ಗೆ ಕಿಂಚಿತ್ತೂ ಅರಿಯದ ವಿದ್ಯಾರ್ಥಿಗಳಿಗೆ, ಇನ್ನು ಅಭಿಯಾನದ ಉದ್ದೇಶವಂತೂ ಅಥ್ರ್ಯಸಿಕೊಳ್ಳಲಾಗದ ಸ್ಥಿತಿಯಿದೆ. ಜಿಲ್ಲೆಯ ಅಚ್ಛಕನ್ನಡ ಪ್ರದೇಶ ಎನಿಸಿಕೊಂಡಿರುವ ಎಣ್ಮಕಜೆ ಪಂಚಾಯಿತಿಯಲ್ಲಿ ನವೆಂಬರ್ 14ರಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೂ ಮಲಯಾಳದ ಸರ್ಟಿಫಿಕೇಟನ್ನೇ ವಿತರಿಸಲಾಗಿದೆ. ಇದರಲ್ಲಿ ಒಳಗೊಂಡಿರುವ ಮಾಹಿತಿಯನ್ನು ಯಾವೊಬ್ಬ ವಿದ್ಯಾರ್ಥಿಯೂ ಅರ್ಥೈಸಿಕೊಳ್ಳುವ ಸ್ಥಿತಿಯಲ್ಲಿಲ್ಲ.
ಈ ಸರ್ಟಿಫಿಕೇಟ್‍ನಲ್ಲಿ ಮಲಯಾಳದಲ್ಲಿ ನಮೂದಿಸಿರುವ 'ಕುಟ್ಟಿಗಳುಡೆ ಹರಿತಸಭಾ ಸಾಕ್ಷ್ಯಪತ್ರ'ಎಂಬ ದಪ್ಪಕ್ಷರದ ಮಾಹಿತಿಯಾಗಲಿ, ಸಣ್ಣ ಅಕ್ಷರದಲ್ಲಿ ನಮೂದಿಸಿರುವ ವಿಷಯಗಳಾಗಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಒಂದೂ ಅರ್ಥವಾಗುತ್ತಿಲ್ಲ. ಕಾಸರಗೋಡು ಜಿಲ್ಲೆಯ ನೂರಾರು ಮಂದಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಕನ್ನಡದಲ್ಲಿ ಸರ್ಟಿಫಿಕೇಟ್ ಒದಗಿಸಿಕೊಡಬೇಕೆಂಬ ಸಾಮಾನ್ಯ ಜ್ಞಾನವಿಲ್ಲದ ಅಧಿಕಾರಿಗಳು, ಇಲ್ಲಿ ಉದ್ದೇಶಪೂರ್ವಕವಾಗಿ ಮಲಯಾಳ ಹೇರಿಕೆಗೆ ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಬಹು ಉದ್ದೇಶಿತ ಮಾಲಿನ್ಯ ಮುಕ್ತ ಹೋರಾಟಕ್ಕೆ ಎಲ್ಲಾ ಸಮುದಾಯದವರನ್ನೂ ಒಟ್ಟುಗೂಡಿಸಿ ಮುಂದಕ್ಕೊಯ್ಯುವ ಆಸಕ್ತಿ ಸರ್ಕಾರಕ್ಕಿದ್ದಲ್ಲಿ, ಕನ್ನಡಮಾಧ್ಯಮ ವಿದ್ಯಾರ್ಥಿಗಳಿಗೂ ಮಾಹಿತಿ ಲಭ್ಯವಾಗಿಸುವ ರೀತಿಯಲ್ಲಿ ನಿರ್ದೇಶ, ಸೂಚನೆ ಒಳಗೊಂಡ ಮುದ್ರಣ ಸಾಮಗ್ರಿ ಕನ್ನಡ ಮಾಧ್ಯಮದಲ್ಲೂ ನೀಡುವಂತಾಗಬೇಕು ಎಂಬುದಾಗಿ ವಿದ್ಯಾರ್ಥಿಗಳ ಹೆತ್ತವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ 40ಸಾವಿರದಷ್ಟು ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದು, ಇವರಿಗೆ ಉಪಕಾರವಾಗುವ ರೀತಿಯಲ್ಲಿ ಇಂತಹ ಸರ್ಟಿಫಿಕೇಟ್, ಸೂಚನಾ ಪತ್ರಗಳು ಲಭಿಸಿದಲ್ಲಿ, ಸರ್ಕಾರ ಆಯೋಜಿಸುವ ಅಭಿಯಾನಗಳು ಯಶಸ್ವಿಯಾಗಲ ಸಾಧ್ಯವಿದೆ. ವಿವಿಧ ಇಲಾಖೆಗಳು ನೀಡುವ ಅಭಿನಂದನಾ ಪತ್ರ, ಪ್ರಮಾಣಪತ್ರಗಳು, ಮಾಹಿತಿ ಪತ್ರಗಳನ್ನು ಮಲಯಾಳದೊಂದಿಗೆ ಕನ್ನಡದಲ್ಲೂ ವಿತರಿಸುವಂತೆ ಕನ್ನಡಪರ ಸಂಘಟನೆಗಳೂ ಆಗ್ರಹಿಸಿದೆ.



