ಕಾಸರಗೋಡು: ಕೊಲೆ ಪ್ರಕರಣವೊಂದರ ಸಾಕ್ಷಿದಾರನಿಗೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಮೂರು ಮಂದಿ ವಿರುದ್ಧ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕೂಡ್ಲು ಎರಿಯಾಲ್ ನಿವಾಸಿ ಆಬಿದ್ ಕೊಲೆ ಪ್ರಕರಣದ ಸಾಕ್ಷಿದಾರ ಇಬ್ರಾಹಿಂ ಖಲೀಲ್ ಎಂಬವರು ನೀಡಿದ ದೂರಿನನ್ವಯ ರಫೀಕ್, ಜಲೀಲ್ ಹಾಗೂ ಮಾರ್ಕೆಟ್ ರಫೀಕ್ ಎಂಬವರಿಗೆ ಈ ಕೇಸು.
ಎರಿಯಾಲ್ ಬಳ್ಳೀರ್ ಎಂಬಲ್ಲಿ 2007 ನ. 20ರಂದು ಆಬಿದ್ ಅವರನ್ನು ಬೈಕಲ್ಲಿ ಆಗಮಿಸಿದ್ದ ತಂಡ ಇರಿದು ಕೊಲೆಗೈದಿರುವ ಬಗ್ಗೆ ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಪ್ರಕರಣದ ತನಿಖೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ತೃತೀಯ)ದಲ್ಲಿ ನಡೆಯುತ್ತಿದ್ದು, ಸಾಕ್ಷಿದಾರ ಇಬ್ರಾಹಿಂ ಖಲೀಲ್ ಅವರಿಂದ ಗುರುವಾರ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಹೇಳಿಕೆ ನೀಡಿ ನ್ಯಾಯಾಲಯದಿಂದ ಹೊರಬರುವ ಮಧ್ಯೆ ಮೂರು ಮಂದಿಯ ತಂಡ ಬೆದರಿಕೆಯೊಡ್ಡಿರುವುದಾಗಿ ಇಬ್ರಾಹಿಂ ಖಲೀಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

