ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾ ಅದ್ಯಕ್ಷ ಸ್ಥಾನಕ್ಕೆ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯೆ, ಅಶ್ವಿನಿ ಎಂ.ಎಲ್ ಆಯ್ಕೆ ಬಹುತೇಕ ಖಚಿತಗೊಂಡಿದ್ದು, ಜ. 27ರಂದು ಬೆಳಗ್ಗೆ 11ಕ್ಕೆ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಅಧಿಕೃತ ಘೋಷಣೆ ಹೊರಬೀಳಲಿದೆ.
ಕೇರಳದ 14 ಜಿಲ್ಲೆಗಳನ್ನು 30 ಸಂಘಟನಾ ಜಿಲ್ಲೆಗಳನ್ನಾಗಿ ವಿಭಜಿಸಲಾಗಿದ್ದು, ಇವುಗಳಲ್ಲಿ 27 ಜಿಲ್ಲಾಧ್ಯಕ್ಷರ ಆಯ್ಕೆಗೆ ಬಿಜೆಪಿಯಲ್ಲಿ ಅಂತಿಮ ನಿರ್ಧಾರ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯನ್ನು ವಿಭಜಿಸದೇ, ನೂತನ ಜಿಲ್ಲಾಧ್ಯಕ್ಷೆಯಾಗಿ ಎಂ.ಎಲ್. ಅಶ್ವಿನಿ ಆಯ್ಕೆಯಾಗಲಿದ್ದಾರೆ. ಪಕ್ಷದ ಜಿಲ್ಲಾ ಉಸ್ತುವಾರಿ ವಕೀಲ ಸುರೇಶ್ ಅವರಿಗೆ ಅಶ್ವಿನಿ ಅವರು ಭಾನುವಾರ ನಾಮಪತ್ರ ಸಲ್ಲಿಸಿದರು. ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದಿರುವುದರಿಂದ ಅಶ್ವಿನಿ ಎಂ.ಎಲ್ ಆಯ್ಕೆ ಖಚಿತಗೊಂಡಿದೆ.
ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ನಡೆಸಲಾಗುತ್ತಿರುವ ಪಕ್ಷ ಸಂಘಟನೆಯನ್ವಯ ಹೊಸ ಅಧ್ಯಕ್ಷರ ನೇಮಕ ನಡೆಸಲಾಗುತ್ತಿದೆ. ಕಾಸರಗೋಡು ಜಿಲ್ಲೆಗೆ ಇದೇ ಮೊದಲ ಬಾರಿಗೆ ಬಿಜೆಪಿಗೆ ಮಹಿಳಾ ಅಧ್ಯಕ್ಷೆಯ ನೇಮಕವಾಗಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಸರಗೋಡು, ಮಂಜೇಶ್ವರ ಸೇರಿದಂತೆ ಲೋಕಸಭಾ ಕ್ಷೇತ್ರದ ವಿವಿಧ ಮಂಡಲಗಳಲ್ಲಿ ಗಣನೀಯ ಮತ ಪಡೆದುಕೊಳ್ಳುವ ಮೂಲಕ ಎಂ.ಎಲ್. ಅಶ್ವಿನಿ ಗಮನಸೆಳೆದಿದ್ದರು. ಮಹಿಳಾ ಮೋರ್ಛಾ ರಾಷ್ಟ್ರೀಯ ಸಮಿತಿ ಸದಸ್ಯೆಯಾಗಿರುವ ಎಂ.ಎಲ್ ಅಶ್ವಿನಿ ಅವರು, ಪಕ್ಷದ ಕೇಂದ್ರೀಯ ನಾಯಕರ ಜತೆ ಉತ್ತಮ ಸಂಘಟನಾ ಬಾಂಧವ್ಯ ಹೊಂದಿದವರಾಗಿದ್ದಾರೆ.



