ಕೊಚ್ಚಿ/ರಾಂಚಿ: ಐಆರ್‌ಎಸ್ ಅಧಿಕಾರಿ ಮತ್ತು ಅವರ ಸಹೋದರಿ ಹಾಗೂ ತಾಯಿ ಕಾಕ್ಕನಾಡು ಕೇಂದ್ರೀಯ ಅಬಕಾರಿ ಸಿಬ್ಬಂದಿ ಕ್ವಾರ್ಟರ್ಸ್‌ನಲ್ಲಿ ನಿಗೂಢವಾಗಿ ಮೃತಪಟ್ಟಿರುವುದು ವರದಿಯಾಗಿದೆ.
ಮೃತರನ್ನು ಕೊಚ್ಚಿಯ ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್‌ನ ಐಆರ್‌ಎಸ್ ಅಧಿಕಾರಿ ಹಾಗೂ ಹೆಚ್ಚುವರಿ ಆಯುಕ್ತ ಮನೀಶ್ ವಿಜಯ್ (43), ಅವರ ಸಹೋದರಿ ಶಾಲಿನಿ ವಿಜಯ್ ಮತ್ತು ಅವರ ತಾಯಿ ಶಕುಂತಲಾ ಅಗರ್‌ವಾಲ್ ಎಂದು ಗುರುತಿಸಲಾಗಿದೆ.
ಶಾಲಿನಿ ಅವರು ಜಾರ್ಖಂಡ್‌ನಲ್ಲಿ ರಾಜ್ಯ ಸರ್ಕಾರಿ ಅಧಿಕಾರಿಯಾಗಿದ್ದರು. ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗದ (ಜೆಪಿಎಸ್‌ಸಿ) ಮೊದಲ ಬ್ಯಾಚ್‌ನ ಟಾಪರ್ ಕೂಡ ಹೌದು. ಮನೀಶ್ ವಿಜಯ್ ಅವರು ಕಾಕ್ಕನಾಡು ಕೇಂದ್ರೀಯ ಅಬಕಾರಿ ಸಿಬ್ಬಂದಿ ಕ್ವಾರ್ಟರ್ಸ್‌ನಲ್ಲಿ ತಾಯಿ, ತಂಗಿ ಜತೆ ವಾಸವಿದ್ದರು.
ಮನೀಶ್ ಮತ್ತು ಅವರ ಸಹೋದರಿ ಶಾಲಿನಿ ಅವರ ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಅಲ್ಲದೆ, ಅವರ ತಾಯಿ ಶಕುಂತಲಾ ಅವರ ಶವದ ಮೇಲೆ ಬಿಳಿ ಬಟ್ಟೆ ಹೊದಿಸಿ, ಅದರ ಮೇಲೆ ಹೂವುಗಳನ್ನು ಹಾಕಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾರ್ಖಂಡ್‌ನ ಗರ್ವಾದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಯಾಗಿದ್ದ ಶಾಲಿನಿ ಅವರು ತನ್ನ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆಸಿರುವ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಸಿಬಿಐ ತನಿಖೆ ನಡೆಸುತ್ತಿರುವ ಈ ಪ್ರಕರಣದಲ್ಲಿ, ಜಾರ್ಖಂಡ್‌ನಲ್ಲಿ ವಿಚಾರಣೆಗೆ ಫೆ.15ರಂದು ಹಾಜರಾಗುವಂತೆ ಶಾಲಿನಿ ಅವರಿಗೆ ಕೋರ್ಟ್‌ನಿಂದ ಸಮನ್ಸ್ ಬಂದಿತ್ತು ಎಂದು ಮೂಲಗಳು ಹೇಳಿವೆ.
'ಶಾಲಿನಿ ಅವರು 2020ರಲ್ಲಿ ರಜೆಯ ಮೇಲೆ ಕೇರಳಕ್ಕೆ ತೆರಳಿದ ನಂತರ ಆಕೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ' ಎಂದು ರಾಂಚಿಯ ಸಿಬ್ಬಂದಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇವರ ಸಾವಿಗೂ ಸಿಬಿಐ ತನಿಖೆಗೂ ಸಂಬಂಧವಿದೆ ಎನ್ನುವುದು ಈವರೆಗೆ ತನಿಖೆಯಲ್ಲಿ ದೃಢಪಟ್ಟಿಲ್ಲ. ಈ ಪ್ರಕರಣವನ್ನು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿರುವುದಾಗಿ ಕೇರಳ ಪೊಲೀಸರು ಶನಿವಾರ ಹೇಳಿದ್ದಾರೆ.
ಕೆಲವು ದಿನಗಳಿಂದ ರಜೆಯಲ್ಲಿದ್ದ ಮನೀಶ್ ವಿಜಯ್ ಅವರು ಕೆಲಸಕ್ಕೆ ಹಿಂತಿರುಗದ ಕಾರಣ, ಸಹೋದ್ಯೋಗಿಗಳು ಗುರುವಾರ ರಾತ್ರಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಆಗ ಮನೆ ಒಳಗಿನಿಂದ ದುರ್ವಾಸನೆ ಬರುತ್ತಿದ್ದನ್ನು ಗಮನಿಸಿದ ಸಿಬ್ಬಂದಿ, ತೆರೆದಿದ್ದ ಕಿಟಕಿಯಲ್ಲಿ ಕಣ್ಣುಹಾಯಿಸಿದಾಗ ಶವ ನೇತಾಡುತ್ತಿರುವುದು ಕಂಡಿದೆ. ಪೊಲೀಸರಿಗೆ ಮಾಹಿತಿ ನೀಡಿದಾಗ, ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಮೂವರು ಮೃತಪಟ್ಟಿರುವುದು ಗೊತ್ತಾಗಿದೆ.
ಈ ಕುಟುಂಬ ಕಳೆದ ಒಂದೂವರೆ ವರ್ಷದಿಂದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿತ್ತು. ಆದರೆ ನೆರೆಹೊರೆಯವರೊಂದಿಗೆ ಅಷ್ಟೇನು ಸಂಪರ್ಕದಲ್ಲಿರಲಿಲ್ಲ ಎನ್ನುವುದು ವರದಿಯಾಗಿದೆ.




