ನವದೆಹಲಿ: ಸಂವಿಧಾನದ 200ನೆಯ ವಿಧಿಯ ಅಡಿಯಲ್ಲಿ ಕ್ರಮಗಳನ್ನು ಕೈಗೊಳ್ಳುವುದಕ್ಕೆ ರಾಜ್ಯಪಾಲರಿಗೆ ಸಮಯಮಿತಿ ವಿಧಿಸುವ ಮೂಲಕ ತಾನು ರಾಜ್ಯಪಾಲರ ಹುದ್ದೆಯನ್ನು ಹಗುರವಾಗಿ ಕಾಣುವ ಕೆಲಸ ಮಾಡಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಆದರೆ ರಾಜ್ಯಪಾಲ ಹುದ್ದೆಯಲ್ಲಿ ಇರುವವರು ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯ ಪದ್ಧತಿಗಳನ್ನು ಗೌರವಿಸಿ ಕೆಲಸ ಮಾಡಬೇಕು ಎಂದು ಹೇಳಿದೆ.
ತಮಿಳುನಾಡಿನ ವಿಧಾನಸಭೆಯು ಅಂಗೀಕಾರ ನೀಡಿದ ಮಸೂದೆಗಳ ವಿಚಾರವಾಗಿ ಯಾವುದೇ ಕ್ರಮ ಕೈಗೊಳ್ಳದ ಅಲ್ಲಿನ ರಾಜ್ಯಪಾಲ ಆರ್.ಎನ್. ರವಿ ಅವರ ಕ್ರಮದ ಬಗ್ಗೆ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರು ಇರುವ ವಿಭಾಗೀಯ ಪೀಠವು ಈಚೆಗೆ ನೀಡಿದ ತೀರ್ಪಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.
'ರಾಜ್ಯಪಾಲರ ಅಧಿಕಾರವನ್ನು ನಾವು ಯಾವ ಬಗೆಯಿಂದಲೂ ಹಗುರವಾಗಿ ಕಾಣುತ್ತಿಲ್ಲ' ಎಂದು ಪೀಠವು 415 ಪುಟಗಳ ತೀರ್ಪಿನಲ್ಲಿ ಹೇಳಿದೆ. ತೀರ್ಪಿನ ಪ್ರತಿಯನ್ನು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಶುಕ್ರವಾರ ಪ್ರಕಟಿಸಲಾಗಿದೆ.
'ರಾಜ್ಯಪಾಲರು ಸಮಸ್ಯೆಗೆ ಪರಿಹಾರ ತರುವ, ಸಹಮತ ಮೂಡಿಸುವ ವ್ಯಕ್ತಿಯಾಗಬೇಕು. ಅವರು ತಮ್ಮ ಬುದ್ಧಿಮತ್ತೆ ಹಾಗೂ ಪಾಂಡಿತ್ಯದ ಮೂಲಕ ರಾಜ್ಯದ ಆಡಳಿತ ಯಂತ್ರದ ಪಾಲಿಗೆ ಕೀಲೆಣ್ಣೆಯಂತೆ ಆಗಬೇಕು. ಆಡಳಿತಯಂತ್ರ ಸ್ಥಗಿತಗೊಳ್ಳುವಂತೆ ಮಾಡಬಾರದು. ಅವರು ವೇಗವರ್ಧಕ ಆಗಿರಬೇಕು, ಅಡ್ಡಿ ಸೃಷ್ಟಿಸುವವರಾಗಬಾರದು. ತಾವು ಹೊಂದಿರುವ ಉನ್ನತವಾದ ಸಾಂವಿಧಾನಿಕ ಹುದ್ದೆಯ ಘನತೆಯನ್ನು ಮನಸ್ಸಿನಲ್ಲಿ ಇರಿಸಿಕೊಂಡು ಅವರು ತಮ್ಮೆಲ್ಲ ಕೆಲಸಗಳನ್ನು ನಿರ್ವಹಿಸಬೇಕು' ಎಂದು ತೀರ್ಪಿನಲ್ಲಿ ಕಿವಿಮಾತು ಹೇಳಲಾಗಿದೆ.
ವಿಭಾಗೀಯ ಪೀಠದ ಪರವಾಗಿ ನ್ಯಾಯಮೂರ್ತಿ ಪಾರ್ದೀವಾಲಾ ಅವರು ತೀರ್ಪು ಬರೆದಿದ್ದಾರೆ. ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿ ರಾಜ್ಯಪಾಲರು, ಜನರ ಇಚ್ಛೆಗೆ ಮತ್ತು ಅವರ ಅಭಿವೃದ್ಧಿಗೆ ಆದ್ಯತೆ ನೀಡಬೇಕಾದ ಹೊಣೆ ಹೊತ್ತಿರುತ್ತಾರೆ, ರಾಜ್ಯಪಾಲರು ರಾಜ್ಯದ ಆಡಳಿತ ಯಂತ್ರದ ಜೊತೆ ಹೊಂದಾಣಿಕೆಯಿಂದ ಕೆಲಸ ಮಾಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ.




