ತಿರುವನಂತಪುರಂ: ಮಾದಕ ವಸ್ತುಗಳ ಕಳ್ಳಸಾಗಣೆ ಕುರಿತು ಮಾಹಿತಿ ನೀಡುವ ವ್ಯಕ್ತಿಗಳ ಗೌಪ್ಯತೆಯನ್ನು ಸಂಪೂರ್ಣವಾಗಿ ಖಚಿತಪಡಿಸಿಕೊಳ್ಳಲಾಗುವುದು ಮತ್ತು ಅಂತಹ ಗೌಪ್ಯತೆಯನ್ನು ಯಾವುದೇ ರೀತಿಯಲ್ಲಿ ಉಲ್ಲಂಘಿಸಿದರೆ ಆ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ.
ಮಕ್ಕಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಶಿಕ್ಷಕರು ಯಾವುದೇ ಬದಲಾವಣೆಯನ್ನು ತ್ವರಿತವಾಗಿ ಗುರುತಿಸಬಹುದು. ಮಾದಕ ವಸ್ತುಗಳ ತಡೆಗಟ್ಟುವಿಕೆ ಚಟುವಟಿಕೆಗಳ ಭಾಗವಾಗಿ, ಶಿಕ್ಷಕರು ಮಕ್ಕಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಅವರಿಗೆ ಏನಾದರೂ ಅನುಮಾನವಿದ್ದರೆ ಅವರ ಬ್ಯಾಗ್‍ಗಳನ್ನು ಪರಿಶೀಲಿಸಲು ಹಿಂಜರಿಯಬಾರದು. ಆ ಕಾರಣಕ್ಕಾಗಿ ಯಾರಾದರೂ ಸುಳ್ಳು ದೂರು ದಾಖಲಿಸುತ್ತಾರೆ ಎಂದು ಭಯಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ಪೋಷಕರು ತಮ್ಮ ಮಕ್ಕಳಲ್ಲಿ ಯಾವುದೇ ನಡವಳಿಕೆಯ ಅಸ್ವಸ್ಥತೆಯನ್ನು ಮರೆಮಾಡಬಾರದು. ಯಾವುದೇ ಸಮಸ್ಯೆಯನ್ನು ಆರಂಭದಲ್ಲಿಯೇ ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ, ಅದು ಪರಿಣಾಮಕಾರಿಯಾಗುತ್ತದೆ ಎಂದವರು ಸೂಚಿಸಿರುವರು.





