ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ನ್ಯೂಯಾರ್ಕ್ ನಗರದ ನೂತನ ಮೇಯರ್ ಝೊಹ್ರಾನ್ ಮಮ್ದಾನಿ ನಡುವಿನ ಶುಕ್ರವಾರದ ಶ್ವೇತಭವನ ಭೇಟಿಯು ರಾಜಕೀಯ ಪೈಪೋಟಿಯಿಂದ ತೀವ್ರಗೊಳ್ಳಲಿದೆ ಎಂಬ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಅವರಿಬ್ಬರು ಭೇಟಿಯಾದ ಕ್ಷಣ ಎಲ್ಲವೂ ಸಂಪೂರ್ಣವಾಗಿ ವಿಭಿನ್ನವಾಗಿತ್ತು.
ಸೌಹಾರ್ದತೆ, ನಗು, ತಿಳಿಯಾದ ಸಂಭಾಷಣೆ ಮತ್ತು ಪರಸ್ಪರ ಹೊಗಳಿಕೆಯು ಎಲ್ಲರನ್ನೂ ಅಚ್ಚರಿಗೊಳಿಸಿತು.
ಖಾಸಗಿ ಮಾತುಕತೆಯ ನಂತರ ಪತ್ರಿಕಾಗೋಷ್ಠಿ ನಡೆಯಿತು. ಟ್ರಂಪ್ ರೆಸಲ್ಯೂಟ್ ಡೆಸ್ಕ್ ಹಿಂದೆ ಕುಳಿತಿದ್ದರೆ, ಮಮ್ದಾನಿ ಅವರ ಬಲಭಾಗದಲ್ಲಿ ಕೈಗಳನ್ನು ಜೋಡಿಸಿಕೊಂಡು ನಿಂತಿದ್ದರು. ಇಬ್ಬರ ದೇಹಭಾಷೆಯೇ ಮೃದುಮಯವಾಗಿತ್ತು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪರಸ್ಪರ ಕಠಿಣ ಪದಪ್ರಯೋಗ ಮಾಡಿದ್ದರೂ, ಟ್ರಂಪ್ ಮಮ್ದಾನಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. "ಅವರು ನಿಜವಾಗಿಯೂ ಉತ್ತಮ ಮೇಯರ್ ಆಗುತ್ತಾರೆ. ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ" ಎಂದು ಟ್ರಂಪ್ ಹೇಳಿದರು.
ಪತ್ರಕರ್ತರು ಹಳೆಯ ಹೇಳಿಕೆಗಳನ್ನು ನೆನಪಿಸಿದಾಗ, ಇಬ್ಬರೂ ಪ್ರಶ್ನೆಗಳನ್ನು ಅದನ್ನು ಬೇರೆಡೆ ತಿರುಗಿಸಿದರು. ಮಮ್ದಾನಿ ಟ್ರಂಪ್ ಅವರನ್ನು ಫ್ಯಾಸಿಸ್ಟ್ ಎಂದೇ ಭಾವಿಸಿದ್ದರೇ ಎಂಬ ಪ್ರಶ್ನೆಗೆ ಟ್ರಂಪ್ ಸ್ವತಃ ಮಧ್ಯಪ್ರವೇಶಿಸಿ, ಮಮ್ದಾನಿಯ ತೋಳನ್ನು ತಟ್ಟಿ ನಗುತ್ತಾ, "ಹೌದು ಎಂದು ಹೇಳೋದೂ ಸರಿ, ವಿವರಿಸುವುದಕ್ಕಿಂತ ಸುಲಭ" ಎಂದು ನಕ್ಕರು.
ಮಮ್ದಾನಿಯ ರಾಜಕೀಯ ನಿಲುವುಗಳನ್ನು ಟೀಕಿಸುವ ಸನ್ನಿವೇಶ ಬಂದಾಗ, ಟ್ರಂಪ್ "ಅವರ ಅಭಿಪ್ರಾಯಗಳು ಸ್ವಲ್ಪ ಕಡಿಮೆ" ಎಂಬ ತಮಾಷೆ ಮಾಡಿದರೂ, ಟೀಕಿಸಲು ಹೋಗಲಿಲ್ಲ. ಇನ್ನೂ ಗಮನಾರ್ಹವಾಗಿ, ಮಮ್ದಾನಿಯನ್ನು "ಜಿಹಾದಿ" ಎಂದು ಕರೆದ ತಮ್ಮ ರಾಜಕೀಯ ಮಿತ್ರೆ ಎಲಿಸ್ ಸ್ಟೆಫಾನಿಕ್ ಹೇಳಿಕೆಯನ್ನು ವರದಿಗಾರರು ಉಲ್ಲೇಖಿಸಿದಾಗ, ಟ್ರಂಪ್ ನೇರವಾಗಿ "ಇಲ್ಲ, ನಾನು ಹಾಗೆ ಹೇಳುವುದಿಲ್ಲ" ಎಂದು ಸ್ಪಷ್ಟಪಡಿಸಿದರು. "ಪ್ರಚಾರ ಸಂದರ್ಭದಲ್ಲಿ ಕೆಲವೊಮ್ಮೆ ಮಾತುಗಳು ಗಡಿ ಮೀರುತ್ತವೆ. ಅವರು ಸಮರ್ಥ ನಾಯಕಿ" ಎಂದು ಟ್ರಂಪ್ ಹೇಳಿದರು.




