ಚೀನಾ ಸಂಘರ್ಷವನ್ನು ಉಲ್ಬಣಗೊಳಿಸುವಲ್ಲಿ ತನ್ನ ಯಾವುದೇ ನೇರ ಪಾತ್ರವನ್ನು ತಪ್ಪಿಸಿಕೊಂಡಿತ್ತು ಹಾಗೂ ಭಾರತ ಮತ್ತು ಪಾಕ್ ನಡುವಿನ ನಾಲ್ಕು ದಿನಗಳ ಯುದ್ಧವನ್ನು ತನ್ನ ನೂತನ ಶಸ್ತ್ರಾಸ್ತ್ರಗಳ ಪರೀಕ್ಷಾ ತಾಣವಾಗಿ ಬಳಸಿಕೊಂಡಿತ್ತು ಎಂದು ಹೇಳಿರುವ ಅಮೆರಿಕ-ಚೀನಾ ಆರ್ಥಿಕ ಮತ್ತು ಭದ್ರತಾ ಪುನರ್‌ಪರಿಶೀಲನೆ ಆಯೋಗವು, ಭಾರತದೊಂದಿಗೆ ಗಡಿ ಉದ್ವಿಗ್ನತೆಯ ಸಂದರ್ಭದಲ್ಲಿ ಉಪಯುಕ್ತವಾಗುವಂತೆ ಮತ್ತು ತನ್ನ ರಕ್ಷಣಾ ಉದ್ಯಮದ ಗುರಿಗಳನ್ನು ವಿಸ್ತರಿಸಲು ಚೀನಾ ಈ ಸಂಘರ್ಷವನ್ನು ತನ್ನ ನೂತನ ಶಸ್ತ್ರಾಸ್ತ್ರಗಳ ವ್ಯಾಪ್ತಿ ಮತ್ತು ಅತ್ಯಾಧುನಿಕತೆಯನ್ನು ಪ್ರದರ್ಶಿಸಲು ಅವಕಾಶವನ್ನಾಗಿ ಬಳಸಿಕೊಂಡಿತ್ತು ಎಂದು ಹೇಳಿದೆ.
ವರದಿಯ ಪ್ರಕಾರ, ಇದೇ ಮೊದಲ ಬಾರಿಗೆ ಚೀನಾದ ಆಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳಾದ ಎಚ್‌ಕ್ಯೂ-9-ವಾಯು ರಕ್ಷಣಾ ವ್ಯವಸ್ಥೆ, ಪಿಎಲ್ ಕ್ಷಿಪಣಿಗಳು ಮತ್ತು ಜೆ-10 ಯುದ್ಧ ವಿಮಾನಗಳನ್ನು ಯುದ್ಧದಲ್ಲಿ ನಿಯೋಜಿಸಲಾಗಿತ್ತು.
ಚೀನಾ ಜೂನ್ 2025ರಲ್ಲಿ 40 ಜೆ-35 ಐದನೇ ಪೀಳಿಗೆಯ ಯುದ್ಧವಿಮಾನಗಳು, ಕೆಜೆ-500 ವಿಮಾನ ಮತ್ತು ಬ್ಯಾಲೆಸ್ಟಿಕ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡುವ ಪ್ರಸ್ತಾವವನ್ನು ಮುಂದಿರಿಸಿತ್ತು ಎಂದು ವರದಿಯು ಪ್ರತಿಪಾದಿಸಿದೆ.
ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ ಮತ್ತು ಮಾಧ್ಯಮ ವರದಿಗಳು ಸೇರಿದಂತೆ ಸಮಿತಿಯ ವಿಚಾರಣೆಗಳು ಮತ್ತು ಸಂಶೋಧನೆಯನ್ನು ಆಧರಿಸಿರುವ ವರದಿಯು, ಚೀನಿ ರಾಯಭಾರ ಕಚೇರಿಗಳು ಭಾರತ-ಪಾಕ್ ಸಂಘರ್ಷದಲ್ಲಿ ಚೀನಾದ ಶಸ್ತ್ರಾಸ್ತ್ರ ವ್ಯವಸ್ಥೆಗಳ 'ಯಶಸ್ಸುಗಳನ್ನು' ಶ್ಲಾಘಿಸಿ ಶಸ್ತ್ರಾಸ್ತ್ರಗಳ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸಿದ್ದವು ಎಂದು ಬೆಟ್ಟು ಮಾಡಿದೆ.
ಸಂಘರ್ಷದ ಬೆನ್ನಲ್ಲೇ ಚೀನಾ ಫ್ರೆಂಚ್ ರಫೇಲ್ ಯುದ್ಧವಿಮಾನಕ್ಕೆ ಅಪಖ್ಯಾತಿಯನ್ನುಂಟು ಮಾಡಲು ತಪ್ಪು ಮಾಹಿತಿ ಅಭಿಯಾನವನ್ನೂ ನಡೆಸಿತ್ತು ಎಂದು ವರದಿಯು ಹೇಳಿದೆ.




