HEALTH TIPS

ಟ್ರಂಪ್ ಶಾಂತಿ ಯೋಜನೆಯನ್ನು ತಿರಸ್ಕರಿಸಿದರೆ ಇನ್ನಷ್ಟು ಪ್ರದೇಶ ವಶ : ಉಕ್ರೇನ್‌ ಅಧ್ಯಕ್ಷರಿಗೆ ಪುಟಿನ್ ಎಚ್ಚರಿಕೆ

ಕೀವ್:  ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾವಿತ ಶಾಂತಿ ಯೋಜನೆ ಕುರಿತು ಅಮೆರಿಕ ಮತ್ತು ಉಕ್ರೇನ್ ಮಧ್ಯೆ ಉದ್ವಿಗ್ನತೆಯ ನಡುವೆಯೇ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು, ಅಮೆರಿಕದ ಅಧ್ಯಕ್ಷರ 28 ಅಂಶಗಳ ಯೋಜನೆಯು 2022ರಿಂದಲೂ ನಡೆಯುತ್ತಿರುವ ರಕ್ತಸಿಕ್ತ ಯುದ್ಧವನ್ನು ಅಂತ್ಯಗೊಳಿಸಲು 'ಅಂತಿಮ ಒಪ್ಪಂದ'ಕ್ಕೆ ಆಧಾರವಾಗಬಹುದು ಎಂದು ಹೇಳಿದ್ದಾರೆ.

ಟಿವಿಯಲ್ಲಿ ಪ್ರಸಾರವಾದ ಹೇಳಿಕೆಗಳಲ್ಲಿ ಪುಟಿನ್ ಅಮೆರಿಕದ ಪ್ರಸ್ತಾವವನ್ನು ರಷ್ಯಾ ಸ್ವೀಕರಿಸಿದೆ ಎಂದು ದೃಢಪಡಿಸಿದರು.

'ಅಲಾಸ್ಕಾದಲ್ಲಿ ಚರ್ಚೆಯ ಸಂದರ್ಭದಲ್ಲಿ ತಾನು ಹೇಳಿದಂತೆ ಕೆಲವು ರಾಜಿಗಳನ್ನು ಮತ್ತು ಹೊಂದಾಣಿಕೆಗಳನ್ನು ಮಾಡಿಕೊಳ್ಳುವಂತೆ ಅಮೆರಿಕವು ನಮಗೆ ಸೂಚಿಸಿದೆ. ಕೆಲವು ಸಂಕೀರ್ಣ ಸಮಸ್ಯೆಗಳು ಮತ್ತು ತೊಂದರೆಗಳ ಹೊರತಾಗಿಯೂ ರಷ್ಯಾ ಪ್ರಸ್ತಾವವನ್ನು ಒಪ್ಪಿಕೊಂಡಿದೆ ' ಎಂದು ತಿಳಿಸಿದರು.

ಯುದ್ಧವನ್ನು ಅಂತ್ಯಗೊಳಿಸಲು ರಷ್ಯಾದ ಒಲವನ್ನು ವ್ಯಕ್ತಪಡಿಸಿದ ಪುಟಿನ್, ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನಸ್ಕಿ ಅವರು ಪ್ರಸ್ತಾವವನ್ನು ತಿರಸ್ಕರಿಸಿದರೆ ಆ ದೇಶದ ಇನ್ನಷ್ಟು ಭೂಪ್ರದೇಶಗಳನ್ನು ವಶಪಡಿಸಿಕೊಳ್ಳುವ ಬೆದರಿಕೆಯೊಡ್ಡಿದರು. ಅಮೆರಿಕದ ಪ್ರಸ್ತಾವವು ರಷ್ಯಾದ ಬೇಡಿಕೆಗಳನ್ನು ಅನುಮೋದಿಸಿದೆ ಎಂದು ಉಕ್ರೇನ್ ಹೇಳಿದೆ.

'ಅಧ್ಯಕ್ಷ ಟ್ರಂಪ್ ಅವರ ಪ್ರಸ್ತಾವವನ್ನು ಚರ್ಚಿಸಲು ಉಕ್ರೇನ್ ನಿರಾಕರಿಸಿದರೆ ಕುಪಿಯನ್ಸ್ಕ್‌ನಲ್ಲಿ ನಡೆದ ಘಟನೆಗಳು ಮುಂಚೂಣಿಯ ಇತರ ಪ್ರಮುಖ ವಿಭಾಗಗಳಲ್ಲಿ ಪುನರಾವರ್ತನೆಗೊಳ್ಳಲಿವೆ ಎನ್ನುವುದನ್ನು ಝೆಲೆನಸ್ಕಿ ಮತ್ತು ಐರೋಪ್ಯ ಯುದ್ಧೋತ್ಸಾಹಿಗಳು ಅರ್ಥ ಮಾಡಿಕೊಳ್ಳಬೇಕು. ಒಟ್ಟಾರೆಯಾಗಿ,ಈ ಸ್ಥಿತಿಯು ನಮಗೆ ಸ್ವೀಕಾರಾರ್ಹವಾಗಿದೆ' ಎಂದು ಪುಟಿನ್ ಹೇಳಿದರು.

ಟ್ರಂಪ್ ಅವರ ಪ್ರಸ್ತಾವಿತ ಶಾಂತಿ ಯೋಜನೆಗೆ ಉಕ್ರೇನ್ ಆಕ್ಷೇಪಗಳನ್ನು ವ್ಯಕ್ತಪಡಿಸಿರುವ ಸಮಯದಲ್ಲೇ ಚರ್ಚೆಗೆ ತಾನು ಸಿದ್ಧ ಎಂಬ ಪುಟಿನ್ ಸೂಚನೆ ಹೊರಬಿದ್ದಿದೆ.

ಶುಕ್ರವಾರ ಟಿವಿ ಸಂದರ್ಶನದಲ್ಲಿ ಝೆಲೆನಸ್ಕಿ, ಟ್ರಂಪ್ ಪ್ರಸ್ತಾವದ ಹಿನ್ನೆಲೆಯಲ್ಲಿ ಉಕ್ರೇನ್ ತನ್ನ ಘನತೆಯನ್ನು ಅಥವಾ ಅಮೆರಿಕದ ಬೆಂಬಲವನ್ನು ಕಳೆದುಕೊಳ್ಳುವ ಕಷ್ಟಕರವಾದ ಆಯ್ಕೆಯನ್ನು ಎದುರಿಸುತ್ತಿದೆ ಎಂದು ಹೇಳಿದ್ದರು.

ಆದರೂ ಝೆಲೆನಸ್ಕಿ ಟ್ರಂಪ್ ಪ್ರಸ್ತಾವವನ್ನು ಸಂಪೂರ್ಣವಾಗಿ ತಿರಸ್ಕರಿಸಿಲ್ಲ. 'ಯುದ್ಧವನ್ನು ಕೊನೆಗೊಳಿಸಲು ಅಮೆರಿಕ, ಅಧ್ಯಕ್ಷ ಟ್ರಂಪ್ ಮತ್ತು ಅವರ ತಂಡದ ಪ್ರಯತ್ನಗಳನ್ನು ನಾವು ಗೌರವಿಸುತ್ತೇವೆ. ಇದು ನಿಜವಾದ ಮತ್ತು ಘನತೆಯುಕ್ತ ಶಾಂತಿಯನ್ನು ಖಚಿತಪಡಿಸುವ ಯೋಜನೆಯಾಗಿರಬೇಕು ಎಂದು ಅವರು ಹೇಳಿದ್ದಾರೆ.

ಟ್ರಂಪ್ ಅವರು ಯೋಜನೆಯನ್ನು ಪರಿಶೀಲಿಸಲು ಮತ್ತು ಒಪ್ಪಿಕೊಳ್ಳಲು ಉಕ್ರೇನ್‌ಗೆ ಗುರುವಾರದವರೆಗೆ ಗಡುವು ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries