HEALTH TIPS

ಏಳು ವರ್ಷಗಳು ಕಳೆದರೂ ಒಬಿಸಿ ಪಟ್ಟಿಗೆ ಇನ್ನೂ ಸಿಗದ ಸಂಸತ್ತಿನ ಅಂಗೀಕಾರ: ವರದಿ

ನವದೆಹಲಿ: ಕೇಂದ್ರ ಸರಕಾರವು ಏಳು ವರ್ಷಗಳ ಹಿಂದೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ (ಎನ್‌ಸಿಬಿಸಿ) ಸಾಂವಿಧಾನಿಕ ಸ್ಥಾನಮಾನವನ್ನು ನೀಡಿದಾಗಿನಿಂದ ಈವರೆಗೂ ಇತರ ಹಿಂದುಳಿದ ವರ್ಗಗಳ (ಒಬಿಸಿ) ಕೇಂದ್ರ ಪಟ್ಟಿಯನ್ನು ಅಧಿಸೂಚಿಸಿಲ್ಲ. ಕಾರ್ಯಕಾರಿ ಆದೇಶದ ಮೂಲಕ ಪ್ರಕಟಿಸುವ ಪ್ರಸ್ತುತ ಪದ್ಧತಿಯ ಬದಲು ಭವಿಷ್ಯದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯನ್ನು ಸಂಸತ್ತು ಅನುಮೋದಿಸುವುದನ್ನು ಆಯೋಗವು ಕಡ್ಡಾಯಗೊಳಿಸಿದೆ ಎಂದು Times of India ವರದಿ ಮಾಡಿದೆ.

ಹಿಂದುಳಿದ ವರ್ಗಗಳ ಉಪವರ್ಗೀಕರಣ ಕುರಿತು ರೋಹಿಣಿ ಆಯೋಗದ ವರದಿಯನ್ನು ಮುಟ್ಟಲು ಸರಕಾರದ ಹಿಂಜರಿಕೆಯು ಈ ನಿರ್ಣಾಯಕ ಪಟ್ಟಿಯ ಕುರಿತು ಅನಿಶ್ಚಿತತೆಗೆ ಕಾರಣವಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಇದು 2018ರ 102ನೇ ಸಂವಿಧಾನ ತಿದ್ದುಪಡಿಯು ನಿಗದಿಗೊಳಿಸಿದ್ದ ಹೊಸ ಮಾರ್ಗಕ್ಕೆ ಪರಿವರ್ತನೆಗೆ ತಡೆಯನ್ನುಂಟು ಮಾಡಿದೆ. ಪರಿಣಾಮವಾಗಿ 2018ರಿಂದಲೂ ಒಬಿಸಿಗಳ ಕೇಂದ್ರ ಪಟ್ಟಿಯು ಇದ್ದಲ್ಲಿಯೇ ಇದೆ, ಅದಕ್ಕೆ ಹೊಸದಾಗಿ ಯಾವುದೇ ಸಮುದಾಯಗಳ ಸೇರ್ಪಡೆಯನ್ನು ಮಾಡಲಾಗಿಲ್ಲ ಅಥವಾ ಅದರಿಂದ ಯಾವುದೇ ಸಮುದಾಯವನ್ನು ಹೊರಗಿರಿಸಲಾಗಿಲ್ಲ.

ಎನ್‌ಸಿಬಿಸಿಗೆ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗಗಳಿಗೆ ಸಮಾನ ಸ್ಥಾನಮಾನವನ್ನು ನೀಡಿರುವ 102ನೇ ಸಂವಿಧಾನ ತಿದುಪಡಿಯ ಹಿನ್ನೆಲೆಯಲ್ಲಿ ಕೇಂದ್ರ ಪಟ್ಟಿಯನ್ನು ಸಂಸತ್ತು ಅಧಿಸೂಚಿಸಬೇಕಿದೆ. ಒಬಿಸಿ ಪಟ್ಟಿಯು ಕೂಡ ಎಸ್‌ಸಿಗಳ ಮತ್ತು ಎಸ್‌ಟಿಗಳ ಪಟ್ಟಿಗಳಂತೆ ಸಂಸತ್ತಿನಿಂದ ಅನುಮೋದನೆಯ ಅಧಿಸೂಚನೆ ಪ್ರಕ್ರಿಯೆಯನ್ನು ಅನುಸರಿಸಬೇಕು ಎಂದು ತಿದ್ದುಪಡಿಯಲ್ಲಿ ಹೇಳಲಾಗಿದೆ. 2019ರಲ್ಲಿ ಸಂಸತ್ತಿನ ಅನುಮೋದನೆ ಪಡೆಯುವ ಪ್ರಕ್ರಿಯೆ ಆರಂಭಗೊಂಡಿತ್ತಾದರೂ ಅದು ಅಲ್ಲಿಗೇ ಸ್ಥಗಿತಗೊಂಡಿದೆ.

ರೋಹಿಣಿ ಆಯೋಗವು ಸೃಷ್ಟಿಸಿರುವ ಅಡಚಣೆಯು ಗೊಂದಲಮಯವಾಗಿದೆ. ಅಸ್ತಿತ್ವದಲ್ಲಿರುವ ಒಬಿಸಿ ಪಟ್ಟಿಯಲ್ಲಿ ಕಾಗುಣಿತದಂತಹ ಹಲವಾರು ವ್ಯತ್ಯಾಸಗಳಿರುವುದರಿಂದ ಸರಕಾರವು ಸಂಸತ್ತಿನ ಮೂಲಕ ಅದನ್ನೇ ಅಧಿಸೂಚಿಸಿ ಕೈತೊಳೆದುಕೊಳ್ಳುವಂತಿಲ್ಲ,ಹೀಗಾಗಿ ಅದು ತಿದ್ದುಪಡಿಗಳನ್ನು ಸೂಚಿಸುವಂತೆ ರೋಹಿಣಿ ಆಯೋಗವನ್ನು ಕೇಳಿಕೊಂಡಿದೆ. ಕೆಲವು ವರ್ಷಗಳ ಹಿಂದೆ ಬಿಜೆಪಿಯ ಪ್ರಮುಖ ರಾಜಕೀಯ ಅಜೆಂಡಾ ಆಗಿದ್ದ ಒಬಿಸಿಗಳ ಕೇಂದ್ರ ಪಟ್ಟಿಯ ಉಪ ವರ್ಗೀಕರಣ ಆಯೋಗದ ಮುಖ್ಯ ಕಾರ್ಯವಾಗಿತ್ತು. ಆದರೆ ಬದಲಾದ ರಾಜಕೀಯ ಸೂಕ್ಷ್ಮತೆಯಿಂದಾಗಿ ಆಗಿನಿಂದ ಆಡಳಿತ ಪಕ್ಷವು ಹಿಂದುಳಿದ ವರ್ಗಗಳ ಪಟ್ಟಿಯನ್ನು ವಿಭಜಿಸುವ ತನ್ನ ಉದ್ದೇಶವನ್ನು ಕೈಬಿಟ್ಟಿದೆ ಮತ್ತು 2023,ಜು.31ರಂದು ಆರು ವರ್ಷಗಳ ಅವಧಿಯಲ್ಲಿ 14 ವಿಸ್ತರಣೆಗಳ ಬಳಿಕ ಆಯೋಗವು ಅಂತಿಮವಾಗಿ ಸಲ್ಲಿಸಿದ್ದ ವರದಿಯನ್ನು ಆಗಿನಿಂದ ಗುಪ್ತವಾಗಿರಿಸಿದೆ.

ಒಬಿಸಿ ಪಟ್ಟಿಯನ್ನು ಸರಿಪಡಿಸಲು ಮುಂದಾದರೆ ರೋಹಿಣಿ ವರದಿಯನ್ನು ತೆರೆಯಬೇಕಾಗುತ್ತದೆ ಎಂದು ಅಧಿಕಾರಿಯೋರ್ವರು ಹೇಳಿದರು. ಅನಿಶ್ಚಿತತೆಗಳ ನಡುವೆ 102ನೇ ಸಂವಿಧಾನ ತಿದ್ದುಪಡಿಯ ಘೋಷಣೆಯೊಂದಿಗೆ ಹಳೆಯ ಸೇರ್ಪಡೆ/ಹೊರಗಿರಿಸುವ ವ್ಯವಸ್ಥೆಯಾಗಿದ್ದ 1993ರ ಎನ್‌ಸಿಬಿಸಿ ಕಾಯ್ದೆ ರದ್ದುಗೊಂಡಿರುವುದರಿಂದ ಕೇಂದ್ರ ಒಬಿಸಿ ಪಟ್ಟಿ ಏಳು ವರ್ಷಗಳಿಂದ ಸ್ಥಗಿತಗೊಂಡಿದೆ. 1993ರ ಕಾಯ್ದೆಯು ಪಟ್ಟಿಯಲ್ಲಿ ಸೇರ್ಪಡೆ/ಹೊರಗಿರಿಸುವಿಕೆಗಾಗಿ ವಿಶೇಷ ಆದೇಶವನ್ನು ಹೊಂದಿತ್ತು. ಸಾಮಾಜಿಕ ನ್ಯಾಯ ಸಚಿವಾಲಯದಲ್ಲಿ ಪಟ್ಟಿಯಲ್ಲಿ ಸೇರ್ಪಡೆ/ಹೊರಗಿರಿಸುವುದಕ್ಕಾಗಿ ಸುಮಾರು 450 ಪ್ರಸ್ತಾವಗಳು ಸಂಸ್ಕರಣೆಯ ವಿವಿಧ ಹಂತಗಳಲ್ಲಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries