HEALTH TIPS

ಕುಂಬಳೆಯಲ್ಲಿ ಬಹುಮತ ಗಳಿಸಿದ ಮುಸ್ಲಿಂ ಲೀಗ್: ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಗೊಂದಲ ಸೃಷ್ಟಿ

ಕುಂಬಳೆ:  ಸ್ಥಳೀಯಾಡಳಿತ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಸದಸ್ಯರ ಪ್ರಮಾಣ ವಚನ ಭಾನುವಾರ ನಡೆದಿದ್ದು, ಕುಂಬಳೆ ಗ್ರಾ.ಪಂ. ಕಾರ್ಯಾಲಯದಲ್ಲೂ ಪ್ರಮಾಣ ವಚನ ಸಮಾರಂಭ ನಡೆಯಿತು.

24 ಮಂದಿ ಸದಸ್ಯರುಳ್ಳ ಕುಂಬಳೆ ಪಂಚಾಯತಿಯಲ್ಲಿ 23 ಮಂದಿಗೂ ಪಂಚಾಯತಿ ಸದಸ್ಯರಾಗಲು ಪ್ರಮಾಣವಚನ ಬೋಧಿಸಿದ್ದು ಹಿರಿಯ ಸದಸ್ಯ ಕಾಂಗ್ರೆಸ್‍ನ ಮಂಜುನಾಥ ಆಳ್ವ ಮಡ್ವ ಅವರು. ಮಂಜುನಾಥ ಆಳ್ವ ಅವರಿಗೆ ಚುನಾವಣಾಧಿಕಾರಿ ಹಂಸೀನಾ ಪ್ರಮಾಣ ವಚನ ಬೋಧಿಸಿದರು. ಒಟ್ಟು 24 ಮಂದಿ ಸದಸ್ಯರ ಪೈಕಿ ಅತಿ ಕಿರಿಯ ಸದಸ್ಯೆಯಾಗಿ 21ನೇ ವಾರ್ಡಿನ 21ರ ಹರೆಯದ ಸ್ನೇಹಾ ಪ್ರಮಾಣ ವಚನ ಸ್ವೀಕರಿಸಿದರು. ವಿವಿಧ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.  


24 ಮಂದಿ ಸದಸ್ಯರಿರುವ ಪಂಚಾಯತಿಯಲ್ಲಿ ಮುಸ್ಲಿಂಲೀಗ್‍ಗೆ 13 ಮಂದಿ ಸದಸ್ಯರಿದ್ದಾರೆ. ಈ ಮೂಲಕ ಲೀಗ್‍ಗೆ  ಸ್ಪಷ್ಟ ಬಹುಮತ ಲಭಿಸಿದೆ. ಇದರ ಹೊರತು ಕಾಂಗ್ರೆಸ್‍ನ ಇಬ್ಬರು ಸದಸ್ಯರು ಯುಡಿಎಫ್‍ನಲ್ಲಿದ್ದಾರೆ. ವಿಪಕ್ಷದಲ್ಲಿ ಅತೀ ದೊಡ್ಡ ಪಕ್ಷವಾದ ಬಿಜೆಪಿಗೆ ಐದು ಮಂದಿ ಸದಸ್ಯರಿದ್ದಾರೆ. ಕಳೆದಬಾರಿ 9 ಮಂದಿ ಸದಸ್ಯರಿದ್ದರು. ಸಿಪಿಎಂಗೆ ಮೂವರು ಸದಸ್ಯರಿದ್ದಾರೆ. ಕಳೆದಬಾರಿಯೂ  ಸಿಪಿಎಂಗೆ ಮೂವರು ಸದಸ್ಯರಿದ್ದರು. 27ರಂದು ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ.

ಗೊಂದಲ:

ಕುಂಬಳೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಮುಸ್ಲಿಂಲೀಗ್ ಪಂಚಾಯತಿ ಅಧ್ಯಕ್ಷರಾಗಿ ಯಾರನ್ನು ಆರಿಸಬೇಕೆಂಬ ವಿಷಯ ಗೊಂದಲಕ್ಕೀಡಾಗಿದೆ. ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿಯೂ, ಎರಡುಬಾರಿ ಪಂಚಾಯತಿ ಸದಸ್ಯ, ಒಂದು ಬಾರಿ ಬ್ಲಾಕ್ ಪಂಚಾಯತಿ ಸದಸ್ಯನಾಗಿದ್ದ ಎ.ಕೆ. ಆರಿಫ್ ಈ ಬಾರಿಯೂ ಪಂಚಾಯತ್ ಸದಸ್ಯನಾಗಿ ಆಯ್ಕೆಯಾಗಿದ್ದಾರೆ. ಮುಸ್ಲಿಂ ಲೀಗ್ ರಾಜ್ಯ ಕೌನ್ಸಿಲರ್, ಜಿಲ್ಲಾ ಸಮಿತಿ ಸದಸ್ಯ ಎಂಬೀ ನೆಲೆಗಳಲ್ಲಿ ಕಾರ್ಯಾಚರಿಸುವ ವಿ.ಪಿ. ಅಬ್ದುಲ್ ಖಾದರ್ ಹಾಜಿ  ಎರಡು ಬಾರಿ ಪಂಚಾಯತ್ ಸದಸ್ಯನಾಗಿ, ಒಂದು ಬಾರಿ  ಬ್ಲಾಕ್ ಸದಸ್ಯನಾಗಿಯೂ  ಆಯ್ಕೆಯಾಗಿದ್ದಾರೆ. ಎಂ.ಪಿ. ಖಾಲಿದ್ ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಜೊತೆ ಕಾರ್ಯದರ್ಶಿಯಾಗಿದ್ದಾರೆ. ಇವರು ಮೊದಲ ಬಾರಿಗೆ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಗೆ ಮೊದಲೇ ಅಧ್ಯಕ್ಷ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸುವುದಾಗಿ ಪ್ರಚಾರ ಉಂಟಾಗಿತ್ತು. ಈ ಮೂರು ಮಂದಿಯೂ ಪಕ್ಷದವರಿಗೆ ಹಾಗೂ ನಾಗರಿಕರಿಗೆ  ಪರಿಚಿತರಾಗಿದ್ದಾರೆ. ಮೂರು ಮಂದಿಯನ್ನು ಪಕ್ಷದವರು ಗೌರವಿಸುತ್ತಾರೆ. ಆದರೆ ಎಂ.ಪಿ. ಖಾಲಿದ್ ರೊಂದಿಗೆ ಪಕ್ಷದ ಕಾರ್ಯಕರ್ತರಿಗೆ  ಗೌರವ ಸ್ವಲ್ಪ ಹೆಚ್ಚಿದೆಯೇ ಎಂಬ ಸಂಶಯ ಎಲ್ಲರಲ್ಲೂ ಇದೆ. ಅಧಿಕಾರ, ಸ್ಥಾನಗಳ  ಚಟುವಟಿಕೆ ಅದಕ್ಕಿರುವ ನಿಯಮ, ನಿರ್ದೇಶಗಳು ಅಧಿಕಾರ ಸ್ಥಾನ ವಹಿಸುವವರ ನಿಲುವು ಏನೆಂದು ವಿವಿಧ ಅಧಿಕಾರ ಕೇಂದ್ರಗಳಲ್ಲಿ ಕಾರ್ಯಾಚರಿಸಿದ ಆರಿಫ್‍ರಿಗೆ ಹಾಗೂ ಅಬ್ದುಲ್ ಖಾದರ್ ಹಾಜಿಗೆ ತಿಳಿದಿದೆ ಯೆಂದು ನಾಗರಿಕರು ಹೇಳುತ್ತಿದ್ದಾರೆ. ಜನರೊಂದಿಗೆ ಹೇಗೆ ವ್ಯವಹರಿಸಬೇಕೆಂದು, ಜನರಿಗೆ ಹೇಗೆ ನ್ಯಾಯ ದೊರಕಿಸಬೇಕೆಂದು ಎಂ.ಪಿ. ಖಾಲಿದ್‍ರಿಗೆ ತಿಳಿದಿದೆಯೆಂದೂ ಹೇಳಲಾಗುತ್ತಿದೆ. ಉಪಾಧ್ಯಕ್ಷ ಸ್ಥಾನ ಜನರಲ್ ಆಗಿರುತ್ತಿದ್ದಲ್ಲಿ ಒಬ್ಬರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಿ ಸಮಸ್ಯೆ ಪರಿಹರಿಸಬಹುದಾಗಿತ್ತು. ಆದರೆ ಪಂಚಾಯತ್ ಉಪಾಧ್ಯಕ್ಷ ಸ್ಥಾನ ಕುಂಬಳೆಯಲ್ಲಿ ಮಹಿಳಾ ಮೀಸಲಾತಿಯಾಗಿದೆ.  ಆ ಸ್ಥಾನಕ್ಕೆ  ಅಭ್ಯರ್ಥಿಯನ್ನು ನೇಮಿಸಬೇಕಾದ ಹೊಣೆಗಾರಿಕೆ ಪಕ್ಷಕ್ಕಿದೆ. ಪಕ್ಷದ ಪದಾಧಿಕಾರಿ ಸ್ಥಾನ ಹಾಗೂ ಅಧಿಕಾರ ಸ್ಥಾನಗಳನ್ನು ಒಬ್ಬರೇ ನಿರ್ವಹಿಸುವುದು ಸೂಕ್ತವಲ್ಲವೆಂದು ಹೇಳಲಾಗುತ್ತಿದೆ. ಎರಡು ಸ್ಥಾನವನ್ನು ಒಬ್ಬರು ವಹಿಸುವಾಗ ಅವರ ಹಾಗೂ ಪಕ್ಷದ ಹಿತಾಸಕ್ತಿಗಳನ್ನು ಸಂರಕ್ಷಿಸಬೇಕಾಗಿ ಬರಲಿದೆ. ಹಾಗಾದಲ್ಲಿ ಅದು ಕೆಲವೊಮ್ಮೆ ಜನರ ಹಿತಾಸಕ್ತಿಗೆ ವಿರುದ್ಧ ವಾಗುವ ಸಾಧ್ಯತೆ ಇದೆಯೆಂದು ಭಾವಿಸುವವರಿದ್ದಾರೆ. ಈ ಹಿನ್ನೆಲೆಯಲ್ಲಿ ಯಾರನ್ನು ಅಧ್ಯಕ್ಷರಾಗಿ ಆಯ್ಕೆಮಾಡಬೇಕು, ಯಾರನ್ನು ಕೈಬಿಡಬೇಕೆಂಬ ಸಂದಿಗ್ದ ಸ್ಥಿತಿಯನ್ನು ಕುಂಬಳೆಯಲ್ಲಿ ಪಕ್ಷದ ನಾಯಕತ್ವ ಎದುರಿಸುತ್ತಿದೆ. ರಾಜ್ಯ ನಾಯಕತ್ವ ಮಧ್ಯಸ್ಥಿಕೆ ವಹಿಸಿದರೆ ಪ್ರಾದೇಶಿಕ ನೇತಾರರಿಗೆ ಈ ಗೊಂದಲದಿಂದ ಪಾರಾಗಬಹುದು. ಆದರೆ ರಾಜ್ಯ ನಾಯಕತ್ವ  ಬಹುಮತ ಲಭಿಸಿದ ಪಕ್ಷದ ಪಂಚಾಯತ್ ಅಧ್ಯಕ್ಷರನ್ನು ತೀರ್ಮಾನಿಸಲು ಆಸಕ್ತಿ ವಹಿಸುವುದೇ ಎಂಬ ಬಗ್ಗೆ ಸಂಶಯ ಉಂಟಾಗಿದೆ. ಸಮಸ್ಯೆ ಪರಿಹರಿಸಲು ಯುಡಿಎಫ್‍ನ ಮಿತ್ರ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ಹಸ್ತಾಂತರಿಸಲು ಪಕ್ಷ ತೀರ್ಮಾನಿಸಿದಲ್ಲಿ ಕಾರ್ಯಕರ್ತರು ಅದರ ವಿರುದ್ಧ ರಂಗಕ್ಕಿಳಿಯುವರೆಂದು ನಾಯಕತ್ವ ಭಾವಿಸಿರುವುದಾಗಿ ಹೇಳಲಾಗುತ್ತಿದೆ. ಕಾಂಗ್ರೆಸ್  ಅಂತಹ  ಬೇಡಿಕೆಯನ್ನು ಮುಂದಿರಿಸಲು ಸಾಧ್ಯತೆಯಿಲ್ಲ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries