ನವದೆಹಲಿ: 20 ವರ್ಷ ಹಳೇಯ ನರೇಗಾ (MGNREGA) ಯೋಜನೆಯನ್ನು ಬದಲಿಸುವ 'ವಿಕಸಿತ ಭಾರತ- ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ)' ಮಸೂದೆಗೆ ಲೋಕಸಭೆ ಗುರುವಾರ ಅಂಗೀಕಾರ ನೀಡಿದೆ. ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆ ನಡುವೆಯೇ ಮಸೂದೆಗೆ ಒಪ್ಪಿಗೆ ಲಭಿಸಿದೆ.
ವಿಬಿ-ಜಿ ರಾಮ್ ಜಿ ಮಸೂದೆ ಮೇಲೆ ನಡೆದ 8 ಗಂಟೆಗಳ ಚರ್ಚೆಗೆ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಉತ್ತರಿಸಿದರು. 'ಮೋದಿ ಸರ್ಕಾರವು ಮಹಾತ್ಮಾ ಗಾಂಧಿ ಅವರ ಚಿಂತನೆಗಳನ್ನು ವಿವಿಧ ಉಪಕ್ರಮಗಳ ಮೂಲಕ ಎತ್ತಿ ಹಿಡಿಯುತ್ತಿದೆ' ಎಂದು ಅವರು ಪ್ರತಿಪಾದಿಸಿದ್ದಾರೆ.
'ಬಾಪುವಿನ ಚಿಂತನೆಗಳನ್ನು ಕಾಂಗ್ರೆಸ್ ಕೊಂದಿದೆ. ಪಿಎಂ ಆವಾಸ್ ಯೋಜನೆಯಡಿ ನಿರ್ಮಾಣ ಮಾಡಿದ ಪಕ್ಕಾ ಮನೆಗಳು, ಉಜ್ವಲ ಯೋಜನೆ, ಸ್ವಚ್ಛ ಭಾರತ ಮಿಷನ್, ಆಯುಷ್ಮಾನ್ ಭಾರತ್ ಮುಂತಾದ ಯೋಜನೆಳ ಮೂಲಕ ಎನ್‌ಡಿಎ ಸರ್ಕಾರ ಬಾಪುವನ್ನು ಜೀವಂತವಾಗಿರಿಸಿದೆ' ಎಂದು ಚೌಹಾಣ್ ಹೇಳಿದ್ದಾರೆ.
ಯೋಜನೆಯಿಂದ ಮಹಾತ್ಮಾ ಗಾಂಧಿ ಅವರ ಹೆಸರನ್ನು ತೆಗೆದು ಹಾಕುವುದಕ್ಕೆ ಪಕ್ಷಗಳಿಂದ ತೀವ್ರ ವಿರೋಧ ಎದುರಾಯಿತು. ಸಂಸದರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಮಸೂದೆಯ ಪ್ರತಿಗಳನ್ನು ಹರಿದು ಸ್ಪೀಕರ್ ಕುರ್ಚಿಯತ್ತ ತೂರಿದರು.
ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಧ್ವನಿ ಮತದ ಮೂಲಕ ಮಸೂದೆಗೆ ಅಂಗೀಕಾರ ಲಭಿಸಿತು. ಮಸೂದೆಗೆ ಒಪ್ಪಿಗೆ ಸಿಗುತ್ತಿದ್ದಂತೆಯೇ ಕಲಾಪವನ್ನು ದಿನದ ಮಟ್ಟಿಗೆ ಸ್ಪೀಕರ್ ಮುಂದೂಡಿದರು.

