ಮುಳ್ಳೇರಿಯ: ಬೇಸಿಗೆ ಆರಂಭವಾಗುತ್ತಿದ್ದಂತೆ, ಕೊಡಗು ಅರಣ್ಯದಿಂದ ಪಯಸ್ವಿ ನದಿಗುಂಟ ಆನೆಗಳ ಹಿಂಡು ವಲಸೆ ಬರಲು ಪ್ರಾರಂಭಿಸಿದೆ. ಪುಲಿಪರಂಬದಲ್ಲಿರುವ ಸೌರಶಕ್ತಿ ಚಾಲಿತ ನೇತಾಡುವ ಬೇಲಿಯ(ಸೋಲಾರ್ ಗ್ಯಾಂಗಿಂಗ್ ಫೆನ್ಸ್) ಬಳಿ ಈ ಹಿಂಡು ಪ್ರಸ್ತುತ ಬೀಡುಬಿಟ್ಟಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿಗಳು ಹೆಚ್ಚು ಎಚ್ಚರದಿಂದಿರುವರು. ಅವುಗಳ ಆಗಮನವನ್ನು ತಡೆಯಲು ಪಟಾಕಿಗಳನ್ನು ಸಿಡಿಸುವ ಮೂಲಕ ಬೇಲಿಯಿಂದ ದೂರ ಸರಿಸಲಾಗಿದೆ ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ. ಭಾನುವಾರ, ಬೇಲಿಗೆ ಹಬ್ಬಿದ್ದ ಗಿಡಗಂಟಿಗಳನ್ನು ಕಡಿದು ತೆರವುಗೊಳಿಸಲಾಗಿದೆ. ಜೊತೆಗೆ ಅವುಗಳ ಕಾರ್ಯಕ್ಷಮತೆಯನ್ನೂ ಪರಿಶೀಲಿಸಲಾಗಿದೆ. ಆನೆಗಳ ಹಿಂಡು ಬೇಲಿಯನ್ನು ಮುರಿಯಲು ಅವಕಾಶಕ್ಕಾಗಿ ಕಾಯುತ್ತಿದೆ. ಕಳೆದ ಕೆಲವು ವರ್ಷಗಳಿಂದ, ಬೇಸಿಗೆ ಪ್ರಾರಂಭವಾದಾಗ ಮಾತ್ರ ಆನೆಗಳ ಹಿಂಡು ಪಯಸ್ವಿ ದಡ ತಲುಪುತ್ತಿದೆ. ಅವುಗಳ ಮರಳುವಿಕೆ ಬಹುಶಃ ದೇಲಂಪಾಡಿ, ಮುಳಿಯಾರ್, ಕಾರಡ್ಕ, ಬೇಡಡ್ಕ ಮತ್ತು ಕುತ್ತಿಕೋಲ್ ಪಂಚಾಯತಿಗಳ ರೈತರನ್ನು ಆತಂಕಕ್ಕೀಡುಮಾಡುತ್ತದೆ.
ಆದಾಗ್ಯೂ, ಕಾರಡ್ಕ ಬ್ಲಾಕ್ ಪಂಚಾಯತಿ ನೇತೃತ್ವದಲ್ಲಿ ಪುಲಿಪರಂಬ ಪ್ರದೇಶದಲ್ಲಿ ನಿರ್ಮಿಸಲಾದ 21 ಕಿಮೀ ಉದ್ದದ ಸೌರಶಕ್ತಿ ಚಾಲಿತ ಬೇಲಿ ಒಂದು ವರ್ಷದಿಂದ ಅವುಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಈ ಬೇಲಿಯನ್ನು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇದೀಗ ದೊಡ್ಡ ಮರಗಳ ಕೊಂಬೆಗಳು ಬೇಲಿಯ ಮೇಲೆ ಛತ್ರಿಗಳಂತೆ ನಿಂತಿವೆ. ಇವು ಬಿದ್ದರೆ, ಬೇಲಿ ಯಾವುದೇ ಕ್ಷಣದಲ್ಲಿ ಕುಸಿಯಬಹುದು. ಆನೆಗಳ ಹಿಂಡು ಬೇಲಿಯ ಮೇಲೆ ಮರಗಳನ್ನು ಉರುಳಿಸುವ ಮೂಲಕ ಅಥವಾ ಯಾವುದೇ ಇತರ ವಿಧಾನಗಳ ಮೂಲಕ ಬೇಲಿ ದಾಟದಂತೆ ತಡೆಯಲು ಅರಣ್ಯ ಇಲಾಖೆ ಪ್ರಬಲ ಕಣ್ಗಾವಲು ಹಾಕಿದೆ.
ಆನೆಗಳನ್ನು ತಡೆಯಲು ಬೇಲಿ ಸಂಪೂರ್ಣವಾಗಿ ಸಜ್ಜುಗೊಂಡಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಗಿಡಗಂಟಿಗಳನ್ನು ಕತ್ತರಿಸಿ ಸ್ವಚ್ಛಗೊಳಿಸಲಾಗಿದೆ. ಕಳೆದ ಕೆಲವು ದಿನಗಳಲ್ಲಿ ಜಾಲ್ಸೂರ್ ಪ್ರದೇಶದಲ್ಲಿದ್ದ ಆನೆಗಳು ಭಾನುವಾರ ಬೇಲಿಯ ಬಳಿ ಬಂದವು. ಈ ಮಧ್ಯೆ, ಜಾಲ್ಸೂರ್ ಬಳಿಯ ಕೆಮ್ಮನಬಳ್ಳಿಯ ತೋಟಕ್ಕೆ ನುಗ್ಗಿದ ಒಂಟಿಸಲಗ ಅನೇಕ ಕಂಗು-ತೆಂಗು ಮತ್ತು ಬಾಳೆಗಳನ್ನು ನಾಶಪಡಿಸಿವೆ. ಒಂದು ವಾರಕ್ಕೂ ಹೆಚ್ಚು ಕಾಲ ಇಲ್ಲಿ ಬೀಡುಬಿಟ್ಟಿದ್ದ ಆನೆಗಳು ವ್ಯಾಪಕ ಕೃಷಿ ನಾಶಗೊಳಿಸಿವೆ. ಕರ್ನಾಟಕ ಅರಣ್ಯ ಅಧಿಕಾರಿಗಳು ಪಟಾಕಿ ಸಿಡಿಸಿ ಓಡಿಸಿದ ಆನೆಗಳ ಹಿಂಡು ಈಗ ಪುಲಿಪರಂಬ ತಲುಪಿದೆ. ಆನೆಗಳ ಹಿಂಡು ಪುಲಿಪರಂಬ ತಲುಪಿದರೆ, ಪಯಸ್ವಿನಿ ನದಿ ಬದಿಯ ನೂರಾರು ರೈತರು ತೊಂದರೆ ಅನುಭವಿಸಬೇಕಾಗುತ್ತದೆ. ಅರಣ್ಯ ಇಲಾಖೆಯು ದಿನದ 24 ಗಂಟೆಗಳ ಕಾಲ ಕಣ್ಗಾವಲು ನಡೆಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.
ಅಭಿಮತ:
-ರೈತರು ಭಯ ಪಡುವ ಅಗತ್ಯವಿಲ್ಲ. ಕಾಡಾನೆಗಳು ಒಳ ಪ್ರವೇಶಿಸದಂತೆ ವ್ಯಾಪಕ ಪ್ರತಿರೋಧ ಕ್ರಮ ಏರ್ಪಡಿಸಲಾಗಿದೆ. ಸೋಲಾರ್ ಬೇಲಿಯನ್ನು ದಾಟಿ ಬಾರದಂತೆ ಸಕಲ ವ್ಯವಸ್ಥೆಗಳನ್ನೂ ಗರಿಷ್ಠ ಮಟ್ಟದಲ್ಲಿ ನಿರ್ವಹಿಸಲಾಗುತ್ತಿದೆ. ಆದರೂ, ಕೃಷಿಕರು, ನಾಗರಿಕರು ಜಾಗೃತರಾಗಿರಬೇಕಾದ್ದೂ ಅಗತ್ಯವಿದೆ. ಸೋಲಾರ್ ಬೇಲಿ ಸಹಿತ ಅಂತರ್ ರಾಜ್ಯ ಗಡಿಗುಂಟ ಸಾರ್ವಜನಿಕರು ಲೋಪಗಳು ಕಂಡುಬಂದಲ್ಲಿ ಸೂಚನೆ ನೀಡಬೇಕು.
-ಜೋಸ್ ಮ್ಯಾಥ್ಯು
ಜಿಲ್ಲಾ ಮುಖ್ಯ ಅರಣ್ಯಾಧಿಕಾರಿ(ಡಿ.ಎಫ್.ಒ).ಕಾಸರಗೋಡು.

.jpg)
.jpg)
