ಉಪ್ಪಳ: ಚೇವಾರು ಪಟ್ಲ ಶ್ರೀಅಯ್ಯಪ್ಪ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ದೀಪೋತ್ಸವ ಬ್ರಹ್ಮಶ್ರೀ ರಾಮಪ್ರಸಾದ್ ನಲ್ಲೂರಾಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಜರಗಿತು.
ಬೆಳಗ್ಗೆ ತಂತ್ರಿಗಳ ಆಗಮನದ ಬಳಿಕ ದೀಪ ಪ್ರತಿಷ್ಠೆ, ಗಣಪತಿ ಹವನ, ಉಪ್ಪಳ ಅಯ್ಯಪ್ಪ ಮಂದಿರದ ಗುರುಸ್ವಾಮಿ ಮತ್ತು ಬಳಗದಿದ ಹರಿನಾಮ ಸಂಕೀರ್ತನೆ, ಸಾರ್ವಜನಿಕ ಸತ್ಯನಾರಾಯಣಪೂಜೆ ನಡೆಯಿತು.
ಬಳಿಕ ಜರಗಿದ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಚನ ನೀಡಿ, ಭಗವಂತನಿಗೆ ಶ್ರದ್ಧಾ ಭಕ್ತಿಪೂರ್ವಕವಾದ ಸಮರ್ಪಣೆಯಿಂದ ಬದುಕಿನಲ್ಲಿ ನೆಮ್ಮದಿ, ಶಾಂತಿ ದೊರಕುತ್ತದೆ. ಸಮರ್ಪಣೆಯ ಸುಖವನ್ನು ಅರಿತ ಭಕ್ತನು ಭಗವಂತನ ಸೇವೆಯಲ್ಲಿ ಸದಾ ನಿರತನಾಗುತ್ತಾನೆ ಎಂದು ನುಡಿದರು.ಪ್ರಕೃತ ಸಮಾಜದಲ್ಲಿ ಪ್ರೀತಿ ಮತ್ತು ಶಾಂತಿಯ ಕೊರತೆ ಇದೆ. ಪ್ರೀತಿ ಇದ್ದಲ್ಲಿ ಸದಾ ಶಾಂತಿ ನೆಮ್ಮದಿ ನೆಲೆಯಾಗುತ್ತದೆ. ಭಕ್ತರು ಆಧ್ಯಾತ್ಮದ ಕೃಷಿ ಮಾಡಿದಲ್ಲಿ ಇನ್ನಷ್ಟು ಶಾಂತಿ ದೊರೆಯುವುದೆಂದು ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು.
ಕೇರಳ ರಾಜ್ಯ ದೇವಸ್ವಂ ಬೋರ್ಡ್ ಮಾಜಿ ಸದಸ್ಯ ಎಂ.ಶಂಕರ ರೈ ಧಾರ್ಮಿಕ ಪ್ರವಚನ ನೀಡಿದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಮತ್ತು ಪೈವಳಿಕೆ ಗ್ರಾಮ ಪಂಚಾಯತಿ ಮಾಜಿ ಆಧ್ಯಕ್ಷ ಅಚ್ಯುತ ಚೇವಾರ್, ಗ್ರಾ.ಪಂ.ಸದಸ್ಯ ಹರೀಶ್ ಬೊಟ್ಟಾರಿ, ನ್ಯಾಯವಾದಿ ಸುಮಲತಾ ಮಂಗಳೂರು ಅತಿಥಿಗಳಾಗಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಮಂದಿರದ ಅರ್ಚಕ ಉಪೇಂದ್ರ ಆಚಾರ್ಯ ಮತ್ತು ಸಮಾಜಸೇವಕ ಈಶ್ವರ ಕುಲಾಲ್ ಅವರನ್ನು ಸಮ್ಮಾನಿಸಲಾಯಿತು. ಕು.ಶ್ವೇತಾ ಪಟ್ಲ ಅಭಿನಂದನಾ ಭಾಷಣ ಮಾಡಿದರು. ರವಿಚಂದ್ರ ಚೇವಾರು ಚಾವಡಿಕಟ್ಟೆ ಸ್ವಾಗತಿಸಿ, ಯುಎಂ.ಗೋಪಲಾಕೃಷ್ಣ ಭಟ್ ವಂದಿಸಿದರು.
ಮದ್ಯಾಹ್ನ ಶ್ರೀ ಅಯ್ಯಪ್ಪ ದೇವರಿಗೆ ವಿಶೇಷ ಪೂಜೆಯ ಬಳಿಕ ಪ್ರಸಾದ ಭೋಜನ ನಡೆಯಿತು. ಸಂಜೆ ಕನಕಪ್ಪಾಡಿ ಶ್ರೀಮಹಾವಿಷ್ಣು ಕ್ಷೇತ್ರದಿಂದ ವಾದ್ಯಘೋಷ ಆಕರ್ಷಕ ಟಾಬ್ಲೊಗಳೊಂದಿಗೆ ಕುಣಿತ ಭಜನೆಯ ಮೂಲಕ ಪಾಲೆಕೊಂಬು ಮೆರವಣಿಗೆ ಉತ್ಸವಾಂಗಣಕ್ಕೆ ಆಗಮಿಸಿದ ಬಳಿಕ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಕಟೀಲು ಮೇಳದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು. ಮಧ್ಯರಾತ್ರಿ ದೀಪಾರಾಧನೆ, ತಾಯಂಬಕ, ಅಯ್ಯಪ್ಪ ಗೀತೆ, ಹಣತೆ ದೀಪಮೆರವಣಿಗೆ, ಅಗ್ನಿ ಪೂಜೆ, ಅಯ್ಯಪ್ಪ ವಾವರ ಯುದ್ಧ, ಅಯ್ಯಪ್ಪ ವಿಳಕ್ ಜರಗಿ ಸಂಪನ್ನಗೊಂಡಿತು.

.jpg)
