HEALTH TIPS

ದಿ.ಶೇಡಿಗುಮ್ಮೆ ಕೃಷ್ಣ ಭಟ್ ಜನ್ಮ ಶತಮಾನೋತ್ಸವ-ಸ್ಮರಣ ಸಂಚಿಕೆ ಬಿಡುಗಡೆ

ಕುಂಬಳೆ: ಉತ್ತಮ ಮಾನವೀಯ ಮೌಲ್ಯಗಳಿಂದೊಡಗೂಡಿದ ಬದುಕಿನ ಪಥ ಹುಟ್ಟನ್ನು ಸಾರ್ಥಕಗೊಳಿಸುತ್ತದೆ. ಕಾಯ ಅಳಿದರೂ ಉಳಿಯುವ ಕೀರ್ತಿಗೆ ಇಂತಹ ಜೀವನ, ಕೊಡುಗೆಗಳೂ ಕಾರಣವಾಗುತ್ತದೆ ಎಂದು ವಕೀಲ, ಹರಿದಾಸ ಕೂಡ್ಳು ಮಹಾಬಲ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಹಿರಿಯ ಭಾಗವತ ದಿ.ಶೇಡಿಗುಮ್ಮೆ ಕೃಷ್ಣ ಭಟ್ಟರ ಜನ್ಮ ಶತಮಾನೋತ್ಸವದ ಅಂಗವಾಗಿ ಭಾನುವಾರ ಅನಂತಪುರ ಶ್ರೀಅನಂತಪದ್ಮನಾಭ ಸಭಾ ಭವನದಲ್ಲಿ ನಡೆದ ಸಂಸ್ಮರಣಾ ಸಮಾರಂಭದಲ್ಲಿ ಸಂಸ್ಮರಣಾ ಗ್ರಂಥ 'ಸಾತ್ವಿಕತೆಯ ಸಾಕಾರಮೂರ್ತಿ'ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. 


ದಿ.ಶೇಡಿಗುಮ್ಮೆ ಕೃಷ್ಣ ಭಟ್ಟರು ಕಾಸರಗೋಡಿನಾದ್ಯಂತ ತಾಳಮದ್ದಳೆ ಕ್ಷೇತ್ರದಲ್ಲಿ ನೀಡಿದ್ದ ಕೊಡುಗೆಗಳು ಅತ್ಯಪೂರ್ವ. ಸರಳ ಸಜ್ಜನಿಕೆಯ ಅವರ ವ್ಯಕ್ತಿತ್ವ ಗಮನಾರ್ಹ. ಹಿರಿಯ ಸಾಧಕರ ಬದುಕಿನ ಬಗ್ಗೆ ಬೆಳಕು ಚೆಲ್ಲುವ ಸ್ಮರಣ ಸಂಚಿಕೆಗಳ ಮೂಲಕ ಹೊಸ ತಲೆಮಾರಿಗೆ ಸಾರುವ ಅನುಕರಣೀಯ ಚಟುವಟಿಕೆಗಳು ಮಾದರಿಯಾಗುತ್ತದೆ ಎಮದವರು ತಿಳಿಸಿದರು.

ಸಂಸ್ಮರಣಾ ಭಾಷಣಗೈದು ಮಾತನಾಡಿದ ಗಣರಾಜ ಕುಂಬ್ಳೆ ಅವರು, ಸಮರ್ಥ ನಿರ್ದೇಶನಗಳು ಕಲಾವಿದರನ್ನು ಬೆಳೆಸುತ್ತದೆ. ದಿ.ಶೇಡಿಗುಮ್ಮೆ ಭಾಗವತರು ಹಿತ, ಮಿತ, ಮೃದು ಮಾತು, ಸ್ವಭಾವಗಳಿಂದ ಕಲಾಕ್ಷೇತ್ರದಲ್ಲಿ ನೀಡಿದ ಸೇವೆ ಹಲವಾರು ಕಲಾವಿದರನ್ನು ರೂಪಿಸಿದೆ. ಅವರ ಸಮರ್ಥ ದಿಗ್ದರ್ಶನದಿಂದ ಆ ಕಾಲದ ಕಲಾಕ್ಷೇತ್ರಕ್ಕೆ ಬೆಂಬಲವಾಗಿ ಬೆಳಕಾಗಿತ್ತು ಎಂದವರು ತಿಳಿಸಿದರು.


ನಾರಾಯಣ ಭಟ್ ಕಬೆಕ್ಕೋಡು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಹಿರಿಯ ಭಾಗವತ, ಪ್ರಸಂಗಕರ್ತ ಶೇಡಿಗುಮ್ಮೆ ವಾಸುದೇವ ಭಟ್ ಉಪಸ್ಥಿತರಿದ್ದು ಹಿರಿಯ ಸಹೋದರನ ನೆನಪುಗಳನ್ನು ಹಂಚಿಕೊಂಡರು. ಪರಮೇಶ್ವರಿ ಈಶ್ವರ ಭಟ್ ಮಾತನಾಡಿದರು. ಕಾರ್ಯಕ್ರಮದ ರೂವಾರಿ ಎಸ್.ಕೆ.ಗೋಪಾಲಕೃಷ್ಣ ಭಟ್ ಕೃತಿ ರೂಪುಪಡೆದ ಬಗ್ಗೆ ಸಮಗ್ರವಾಗಿ ಮಾತನಾಡಿದರು. ಎಸ್.ಕೆ.ನಾರಾಯಣ ಭಟ್ ಉಪಸ್ಥಿತರಿದ್ದರು. ಅಖಿಲಾ ಕಬೆಕ್ಕೋಡು, ಅಕ್ಷತಾ ಪ್ರಾರ್ಥಿಸಿದರು.  

ಸರಸ್ವತಿ ಶಂಕರ್ ಸ್ವಾಗತಿಸಿ, ಎಸ್.ಕೆ.ಸದಾಶಿವ ಭಟ್ ವಂದಿಸಿದರು. ಸಸಿಹಿತ್ಲು ಗಣಪತಿ ಭಟ್ ಹಾಗೂ ದಿವ್ಯಶ್ರೀ ಕಬೆಕ್ಕೋಡು ಕಾರ್ಯಕ್ರಮ ನಿರ್ವಹಿಸಿದರು. ಎಸ್.ಕೆ.ನಾರಾಯಣ ಭಟ್, ಎಸ್.ಕೆ.ರಾಮಚಂದ್ರ ಭಟ್, ಎಸ್.ಕೆ.ಸದಾಶಿವ ಭಟ್, ಪಿ.ಎಸ್.ರವೀಂದ್ರನಾಥ್, ರಾಜಗೋಪಾಲ ಪದ್ಯಾಣ ,ಡಾ.ಶ್ಯಾಮಪ್ರಕಾಶ ಕಬೆಕ್ಕೋಡು, ಕೃಷ್ಣ ಜಯಶಂಕರ್ ಸಹಕರಿಸಿದರು.  

ಇದಕ್ಕೂ ಮೊದಲು ಕರ್ಣಾವಸಾನ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಹೊಸಮೂಲೆ ಗಣೇಶ ಭಟ್(ಭಾಗವತರು), ಲಕ್ಷ್ಮೀಶ ಬೇಂಗ್ರೋಡಿ(ಮದ್ದಳೆ), ವಿಕ್ರಂ ಮಯ್ಯ ಪೈವಳಿಕೆ(ಚೆಂಡೆ), ಕೃಷ್ಣಮೂರ್ತಿ ಪಾಡಿ(ಚಕ್ರತಾಳ) ಹಾಗೂ ಮುಮ್ಮೇಳದಲ್ಲಿ ಜಯಪ್ರಕಾಶ ಶೆಟ್ಟಿ ಪೆರ್ಮುದೆ(ಕರ್ಣ), ಶೇಣಿ ವೇಣುಗೋಪಾಲ(ಅರ್ಜುನ-1), ಮಹಾಬಲ ಶೆಟ್ಟಿ ಕೂಡ್ಳು(ಅರ್ಜುನ-2), ಗಣರಾಜ ಕುಂಬ್ಳೆ(ಕೃಷ್ಣ), ರಾಧಾಕೃಷ್ಣ ಕಲ್ಚಾರ್(ಶಲ್ಯ), ಜಿ.ಕೆ.ನಾಯಕ್(ಸರ್ಪಸ್ತ್ರ) ಹಾಗೂ ಉದಯಶಂಕರ ಮಜಲು(ವೃದ್ಧ ಬ್ರಾಹ್ಮಣ)ಪಾತ್ರಗಳನ್ನು ನಿರ್ವಹಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries