ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 18, 2017
ಹರಿಕಥಾ ದಶಾಹ ಆರಂಭ
ಉಪ್ಪಳ: ಯುವ ಸಮೂಹವನ್ನು ಪರಂಪರೆ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆಸಿ ಮಾರ್ಗದರ್ಶ ನೀಡಿದಾಗ ಸಮೃದ್ದ ಸಂತೃಪ್ತ ಸಮಾಜ ಸಾಕಾರವಾಗುತ್ತದೆ. ಈ ನಿಟ್ಟಿನಲ್ಲಿ ಹರಿಕಥಾ ಸಂಕೀರ್ತನೆ, ಯಕ್ಷಗಾನ ದಂತಹ ಕಲಾ ಮಾಧ್ಯಮ ಹೆಚ್ಚು ಪರಿಣಾಮಕಾರಿಯಾಗಿದ್ದು, ಅವನ್ನು ಪ್ರೋತ್ಸಾಹಿಸುವುದು ಇಂದಿನ ಅಗತ್ಯ ಎಂದು ನಿವೃತ್ತ ಶಿಕ್ಷಕ, ಸಾಮಾಜಿಕ ಮುಖಂಡ ಪಾಂಡ್ಯಡ್ಕ ಶ್ರೀರಾಮ ಮೂಡಿತ್ತಾಯ ಅಭಿಪ್ರಾಯ ವ್ಯಕ್ತಪಡಿಸಿದರು.
ಪೈವಳಿಕೆ ಸಮೀಪದ ಬಾಯಿಕಟ್ಟೆಯಲ್ಲಿರುವ ಶ್ರೀಅಯ್ಯಪ್ಪ ಮಂದಿರದಲ್ಲಿ ಇತ್ತೀಚೆಗೆ ಅವರು ಕಲಾರತ್ನ ಶಂ.ನಾ ಅಡಿಗರ ನೇತೃತ್ವದಲ್ಲಿ ನಡೆಯುತ್ತಿರುವ ಹರಿಕಥಾ ದಶಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೇದ, ಪುರಾಣ, ಉಪನಿಷತ್ತುಗಳ ಕ್ಲಿಷ್ಟ ಮರ್ಮಗಳನ್ನು ಜನಸಾಮಾನ್ಯರಿಗೆ ಅಪ್ಯಾಯಮಾನತೆಯಿಂದ ಪರಿಣಾಮಕಾರಿಯಾಗಿ ಮುಟ್ಟಿಸುವಲ್ಲಿ ಕಥಾ ಸಂಕೀರ್ತನೆ ಅತ್ಯುತ್ತಮ ಮಾಧ್ಯಮವಾಗಿದ್ದು, ಜ್ಞಾನ ಮತ್ತು ವಾಕ್ಚಾತುರ್ಯಗಳಿಂದ ವರ್ತಮಾನದ ಘಟನಾವಳಿಗಳನ್ನು ಹೋಲಿಸಿಕೊಂಡು ಜನಮನ ಮುಟ್ಟುವಂತೆ ವಿಷಯ ಮಂಡಿಸುವ ಮೂಲಕ ಅರಿವು ಮೂಡಿಸುವ ಯತ್ನ ವಿಶಿಷ್ಟವಾಗಿದ್ದು, ಮನೆಮನೆಗಳಲ್ಲಿ ಇದು ನಡೆಯಬೇಕು ಎಂದು ತಿಳಿಸಿದರು.
ಬಾಯಿಕಟ್ಟೆ ಶ್ರೀಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಸುದರ್ಶನಪಾಣಿ ಬಲ್ಲಾಳ್ ಅಧ್ಯಕ್ಷತೆ ವಹಿಸಿ ಮಾತನಾಡಿ ಆಧುನಿಕ ಮಾಧ್ಯಮಗಳ ಭರಾಟೆಯಲ್ಲಿ ಪರಂಪರಾಗತವಾಗಿ ಬಂದ ಮನಸ್ಸು ಅರಳಿಸುವ ಭಜನೆ, ಹರಿಕಥಾ ಸಂಕೀರ್ತನೆಗಳಂತಹ ಚಟುವಟಿಕೆಗಳು ಕುಗ್ಗಿರುವುದುದರಿಂದ ವ್ಯಾಪಕ ಅಸಮತೋಲನ, ಗೊಂದಲ ಅಶಾಂತಿಗಳು ಇಂದು ಕಂಡುಬರುತ್ತಿದೆ. ಅವುಗಳಿಂದ ಹೊರಬಂದು ನೈಜ ಮಾನವರಾಗಲು ಇಂತಹ ಯತ್ನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ವೆಂಕಟರಮಣ ಮೂಡಿತ್ತಾಯ, ಕಲಾರತ್ನ ಶಂ.ನಾ ಅಡಿಗ ಉಪಸ್ಥಿತರಿದ್ದು ಮಾತನಾಡಿದರು. ಗಣೇಶ್ ಆಚಾರ್ಯ ಬಾಯಿಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಕಲಾರತ್ನ ಶಂ.ನಾ ಅಡಿಗರಿಂದ ದಶದಿನಗಳ ಸಂಕೀರ್ತನೆಗೆ ಚಾಲನೆ ದೊರಕಿ ಹರಿಕಥಾ ಸತ್ಸಂಗ ನಡೆಯಿತು.



