ಕುಂಬಳೆ: ಜಾತ್ಯಾತೀತ ಜನತಾದಳ ಪಕ್ಷ ನಾಯಕ ಚಿತ್ತೂರು ಶಾಸಕ ಕೆ.ಕೃಷ್ಣನ್ ಕುಟ್ಟಿ ಕೇರಳ ವಿಧಾನಸಭೆಯ ನೂತನ ಸಚಿವರಾಗಿ ಆಯ್ಕೆಗೊಂಡಿದ್ದಾರೆ. ಕೇರಳ ಎಡರಂಗ ಸರಕಾರದ ಪಿಣರಾಯಿ ವಿಜಯನ್ ನೇತೃತ್ವದ ಮಂತ್ರಿಮಂಡಲದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಕೃಷ್ಣನ್ ಕುಟ್ಟಿ ಜಲ ಸಂಪನ್ಮೂಲ ಸಚಿವರಾಗಿ ಮಂಗಳವಾರ ರಾಜ್ಯಪಾಲ ಪಿ.ಸದಾಶಿವಂ ಅವರಿಂದ ಪ್ರಮಾಣವಚನ ಸ್ವೀಕರಿಸಿದರು.
ಕೃಷಿ ಕುಟುಂಬದಿಂದ ಬಂದಿರುವ ಕೆ.ಕೃಷ್ಣನ್ ಕುಟ್ಟಿ, ಸಹಕಾರಿ ರಂಗದ ಪ್ರತಿಪಾದಕರಾಗಿದ್ದಾರೆ. ಜೆಡಿಎಸ್ ಪಕ್ಷದಿಂದ ಎರಡು ಬಾರಿ ಸಚಿವರಾಗಿ ಆಯ್ಕೆಗೊಂಡಿದ್ದ ಮ್ಯಾಥ್ಯೂ.ಟಿ ಥೋಮಸ್ ಪಕ್ಷ ವರಿಷ್ಠರ ಅಣತಿಯಂತೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲ ಕ್ಷೇತ್ರದಿಂದ ಶಾಸಕರಾಗಿ ಆರಿಸಿ ಬಂದಿದ್ದ ತೋಮಸ್ ಎರಡೂ ವರ್ಷಗಳಿಂದ ಜಲ ಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸೋಮವಾರದಂದು ಮ್ಯಾಥ್ಯೂ ಟಿ.ಥೋಮಸ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿವಾಸ ಕ್ಲಿಫ್ ಹೌಸ್ಗೆ ತೆರಳಿ ರಾಜಿನಾಮೆ ಪತ್ರವನ್ನು ನೀಡಿದ್ದರು. ಮಂಗಳವಾರ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮ್ಯಾಥ್ಯೂ.ಟಿ.ಥೋಮಸ್, ಮಂತ್ರಿ ಮಂಡಲದ ಸದಸ್ಯರು ಸೇರಿದಂತೆ, ಬಿಜೆಪಿ ಶಾಸಕ ಒ.ರಾಜಗೋಪಾಲ್ ಪಾಲ್ಗೊಂಡಿದ್ದರು. ಕಾಂಗ್ರೆಸ್ ಶಾಸಕರು ಶಬರಿಮಲೆ ವಿಚಾರದಲ್ಲಿ ರಾಜ್ಯ ಸರಕಾರದ ನಿಲುವು ವಿರೋಧಿಸಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿಲ್ಲ. ರಾಜ್ಯ ಎಡರಂಗದ ಮಿತ್ರಪಕ್ಷ ಜೆಡಿಎಸ್ಗೆ ಮೂವರು ಶಾಸಕರಿದ್ದು, ಆಡಳಿತ ನಡೆಸುತ್ತಿರುವ ಸರಕಾರದ ಮೂರನೆ ಅತಿ ದೊಡ್ಡ ಬಣವಾಗಿದೆ. ನಾಲ್ಕನೆ ಬಾರಿ ಶಾಸಕರಾಗಿರುವ ಕೆ.ಕೃಷ್ಣನ್ ಕುಟ್ಟಿ, ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಇವರು ನಂತರ ಜೆಡಿಎಸ್ ಸೇರಿದ್ದರು.


