HEALTH TIPS

ಸಮಾಜ ಸೇವೆಯಯಿಂದಬದುಕಿನ ಸಾಫಲ್ಯ-ಡಾ.ಕೆ.ಪಿ.ಹೊಳ್ಳ ಕೂಟ ಮಹಾಜಗತ್ತಿನ 150 ನೇ ಸಂಪರ್ಕ ಸಭೆ

ಮಧೂರು: ಮಾನವ ಜೀವನ ಸಾರ್ಥಕತೆಯ ಸಾಫಲ್ಯವು ಸಮಾಜ ಸೇವೆಯಿಂದ ಮಾತ್ರ ಲಭ್ಯವಾಗುವುದು. ಸಮಾಜವೇ ದೇವರು, ಸಮಾಜ ಸೇವೆಯೇ ದೇವತಾ ಸೇವೆ ಎಂಬ ಪರಿಕಲ್ಪನೆ ಭಾರತೀಯ ಮೂಲ ತತ್ವ ಎಂದು ಖ್ಯಾತ ಸಂಘಟಕ ಹಾಗು ಸಮಾಜ ಸುಧಾರಕ ಡಾ.ಕೆ.ಪ್ರಭಾಕರ ಹೊಳ್ಳ ಅವರು ಅಭಿಪ್ರಾಯಪಟ್ಟರು. ಕೂಟಮಹಾಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆಯ 150 ನೇ ಸಂಪರ್ಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಹುಟ್ಟಿದ ಮನೆಗೆ ನೀವು ಬೆಳಕಾಗಿರುವಂತೆ, ಹುಟ್ಟಿದ ಸಮಾಜಕ್ಕೂ ನಮ್ಮಿಂದ ಬೆಳಕು ದೊರೆಯುವಂತಾಗಬೇಕೆಂದೂ ಅವರು ಕರೆಯಿತ್ತರು. ಕಾರ್ಯಕ್ರಮದಲ್ಲಿ ಕೂಟಮಹಾಜಗತ್ತಿನ ಕೇಂದ್ರ ಸಂಸ್ಥೆಯ ಉಪಾಧ್ಯಕ್ಷರಾದ ಸೋಮಶೇಖರ ಮಯ್ಯ ಅವರು ಮಾತನಾಡಿ ಭಜನೆಯ ಮೂಲಕ ಹೊರಹೊಮ್ಮುವ ಶಕ್ತಿಯು ಮಾನಸಿಕ, ಶಾರೀರಿಕ ಆರೋಗ್ಯಕ್ಕೆ ಪೂರಕ ಎಂಬುದಾಗಿ ಹೇಳಿದರು. ಇದು ಭಗವಂತನ ಅನುಗ್ರಹ ಪಡೆಯಲು ನಾವು ಅವರಿಗೆ ಸಲ್ಲಿಸುವ ಮನವಿ. ಭಕ್ತಿ ಮಾರ್ಗವು ಸಾಮಾನ್ಯರಿಗೂ ಎಟಕಬಲ್ಲ ಮುಕ್ತಿಯ ಸೋಪಾನ ಎಂದು ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ಕಾಸರಗೋಡು ಅಂಗಸಂಸ್ಥೆಯ ಅಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದು, ಈ ವರೆಗಿನ ಸಂಪರ್ಕ ಸಭೆಗಳನ್ನು ನಡೆಸಲು ಆತಿಥ್ಯವಹಿಸಿದ ಎಲ್ಲ ಕುಟುಂಬಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಹಿರಿಯ ಧಾರ್ಮಿಕ ಮುಂದಾಳುಗಳೂ, ನಿವೃತ್ತ ಮುಖ್ಯೋಪಾಧ್ಯಾಯ ನರಹರಿ ಮಾಸ್ತರ್ ಕಳತ್ತೂರು ಅವರು ಧಾರ್ಮಿಕ ಭಾಷಣ ಮಾಡಿದರು. ಜೀವನದಲ್ಲಿ ಒಳಿತು-ಕೆಡುಕುಗಳನ್ನು ವಿವೇಚನೆ ಮಾಡಿ ತಿಳಿದು ಸನ್ಮಾರ್ಗದಲ್ಲಿ ನಡೆಯುವಂತೆ ಅವರು ಕಿವಿಮಾತು ಹೇಳಿದರು. ಈ ವಿಶೇಷ ಸಂಪರ್ಕ ಸಭೆಯಲ್ಲಿ ಖ್ಯಾತ ಸಂಘಟಕ, ಆದರ್ಶ ಶಿಕ್ಷಕ ಹಾಗು ಕಾಸರಗೋಡು ಅಂಗಸಂಸ್ಥೆಯ ನಿಕಟಪೂರ್ವ ಕಾರ್ಯದರ್ಶಿ ಎಂ.ನರಸಿಂಹ ರಾಜ್ ಅವರಿಗೆ ಅತಿಥಿ ಗಣ್ಯರು ಶಾಲು ಹೊದಿಸಿ, ಫಲತಾಂಬೂಲಾದಿಗಳನ್ನು ಹಾಗು ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು. ಸಮ್ಮಾನಕ್ಕಾಗಿ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿದರು. ಜ್ಯೋತಿ ಹೊಳ್ಳ ಸಮ್ಮಾನಿತರನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಅಂಗಸಂಸ್ಥೆಯ ಕೂಟ ಬಂಧುಗಳ ವಿವರಗಳನ್ನು ಒಳಗೊಂಡ `ಸಂಪರ್ಕ ವಾಹಿನಿ' ಕೈಪಿಡಿಯನ್ನು ಮತ್ತು 2019 ನೇ ಸಾಲಿನ ದಿನದರ್ಶಿನಿಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಪ್ರಸ್ತುತ ಸಮಾರಂಭದಲ್ಲಿ ಕೂಟ ಮಹಾಜಗತ್ತಿನ ಕೇಂದ್ರ ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್ ಹೊಳ್ಳ, ಉಡುಪಿ ಅಂಗಸಂಸ್ಥೆಯ ಮಹಿಳಾ ವೇದಿಕೆಯ ಕಾರ್ಯದರ್ಶಿ ಸುಧಾ ಹೊಳ್ಳ, ಹಿರಿಯರಾದ ಎ.ವಾಸುದೇವ ಹೊಳ್ಳ, ಕೆ.ವಿಷ್ಣು ಭಟ್ ಮುಂತಾದವರು ಶುಭ ಹಾರೈಸಿ ಮಾತನಾಡಿದರು. ಕೇಂದ್ರ ಸಹಾಯನಿಧಿಯಾದ ಬಿಲಿಯನ್ ಫೌಂಡೇಶನ್‍ನ ವಿದ್ಯಾ ಸಹಾಯಧನವನ್ನು ವಿಘ್ನೇಶ್ ಪಿ. ಅವರಿಗೆ ಅತಿಥಿಗಳು ವಿತರಿಸಿದರು. ಈ ಸಂದರ್ಭದಲ್ಲಿ ಅಂಗ ಸಂಸ್ಥೆಯ ಸಹಾಯನಿಧಿಯಾದ `ಸಿರಿನಿಧಿ'ಗೆ ಎ.ವಾಸುದೇವ ಹೊಳ್ಳ ಅವರು ಐವತ್ತು ಸಾವಿರ ರೂಪಾಯಿಯನ್ನು ದೇಣಿಗೆಯಾಗಿ ನೀಡಿದರು. ಅಂಗಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನರಸಿಂಹ ಮಯ್ಯ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಬಿಲಿಯನ್ ಸಂಚಾಲಕ ಕೃಷ್ಣ ಪ್ರಸಾದ ಅಡಿಗ ವಂದಿಸಿದರು. ಕೋಶಾಧಿಕಾರಿ ಬಿ.ಕೃಷ್ಣ ಕಾರಂತ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಪ್ರಯುಕ್ತ ಬೆಳಗ್ಗೆ ಪೂಜಾ ಕೈಂಕರ್ಯಗಳು, ಕಾಸರಗೋಡು ಅಂಗಸಂಸ್ಥೆಯ ಹಿರಿಯ-ಕಿರಿಯ ಸದಸ್ಯರಿಂದ ವಿಷ್ಣು ಸಹಸ್ರ ನಾಮ, ನರಸಿಂಹ ಅಷ್ಟೋತ್ತರ ಹಾಗು ಭಜನಾ ಸಂಕೀರ್ತನೆ ಜರಗಿತು. ಮಂಗಲ್ಪಾಡಿ ಹಾಗು ಮೀಯಪದವು ಅಂಗಸಂಸ್ಥೆಯವರಿಂದಲೂ ಭಜನಾ ಸಂಕೀರ್ತನೆ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries