ಬದಿಯಡ್ಕದಲ್ಲಿ ಪ್ರತಿಭಟನಾ ಮೆರವಣಿಗೆ
0
ಡಿಸೆಂಬರ್ 14, 2018
ಬದಿಯಡ್ಕ: ಶಬರಿಮಲೆ ವಿಷಯದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ರಾಜ್ಯ ಎಡರಂಗ ಸರಕಾರ ಕೈಗೊಂಡಿರುವ ನಿರ್ಧಾರದಿಂದ ಮನನೊಂದು ತಿರುವನಂತಪುರದಲ್ಲಿ ಗುರುವಾರ ಮುಂಜಾನೆ ಅಯ್ಯಪ್ಪ ಭಕ್ತರಾದ ಅಟೋ ಚಾಲಕ ವೇಣುಗೋಪಾಲನ್ ನಾಯರ್ ಆತ್ಮಹತ್ಯೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ರಾಜ್ಯಾದ್ಯಂತ ಬಿಜೆಪಿ ಹಾಗೂ ಪರಿವಾರ ಸಂಘಟನೆಗಳು ಕರೆನೀಡಿದ ಹರತಾಳದ ಭಾಗವಾಗಿ ರಾಜ್ಯ ಸರಕಾರದ ವಿರುದ್ಧ ಬದಿಯಡ್ಕದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ಬಿಜೆಪಿ ಕಾಸರಗೋಡು ಮಂಡಲ ಪ್ರಧಾನ ಕಾರ್ಯದರ್ಶಿ ಹರೀಶ್ ನಾರಂಪಾಡಿ ಈ ಸಂದರ್ಭದಲ್ಲಿ ಮಾತನಾಡಿ, ಅಸಂಖ್ಯಾತ ಅಯ್ಯಪ್ಪ ಭಕ್ತರ ಭಾವನೆಗಳನ್ನು ಗೌರವಿಸದೆ ರಾಜ್ಯ ಸರಕಾರವು ಕಠಿಣ ನಿಲುವನ್ನು ತಳೆದಿರುವುದರಿಂದ ಇಂದು ಅಯ್ಯಪ್ಪ ಭಕ್ತರೋರ್ವರು ಆತ್ಮಾಹುತಿಗೆ ಶರಣಾಗಿದ್ದಾರೆ. ಈ ಘಟನೆಗೆ ರಾಜ್ಯ ಸರಕಾರವೇ ನೇರ ಹೊಣೆಯಾಗಿದೆ. ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿರುವ ಸರಕಾರವು ಜನತೆಗೆ ನ್ಯಾಯವನ್ನು ನೀಡಲು ವಿಫಲವಾಗಿದೆ ಎಂದು ಸರಕಾರವನ್ನು ದೂರಿದರು.
ನೇತಾರರಾದ ಬಾಲಕೃಷ್ಣ ಶೆಟ್ಟಿ ಕಡಾರು, ನ್ಯಾಯವಾದಿ ಗಣೇಶ್ ಬದಿಯಡ್ಕ, ವಿಶ್ವನಾಥ ಪ್ರಭು ಕರಿಂಬಿಲ, ವಿಜಯಸಾಯಿ ಬದಿಯಡ್ಕ, ಸುನಿಲ್ ಕಿನ್ನಿಮಾಣಿ, ರಕ್ಷಿತ್ ಕೆದಿಲಾಯ, ರಮೇಶ್ ಆಳ್ವ, ಉದಯ ಕರಿಂಬಿಲ, ಪ್ರಸಾದ್ ಕನಕಪ್ಪಾಡಿ, ಅಯ್ಯಪ್ಪ ಭಕ್ತರು, ಮಹಿಳೆಯರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

