ಮಲೆನಾಡು ಹೈವೇ ನಿರ್ಮಾಣ ಕಾಮಗಾರಿ ಆರಂಭ ವರ್ಷಗಳ ನಂತರ ರಾಜ್ಯಕ್ಕೊಂದು ಪರ್ಯಾಯ ಹೆದ್ದಾರಿ
0
ಡಿಸೆಂಬರ್ 15, 2018
ಕುಂಬಳೆ: ಅಭಿವೃದ್ಧಿಗೆ ರಹದಾರಿಯಾಗಲಿರುವ ಮಲೆನಾಡು ಹೆದ್ದಾರಿ ನಿರ್ಮಾಣ ಕಾರ್ಯವನ್ನು ಸಮಯದೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಜಿಲ್ಲೆಯ ಉತ್ತರದಲ್ಲಿರುವ ಗಡಿಭಾಗವಾದ ನಂದಾರಪದವಿನಿಂದ ದಕ್ಷಿಣದ ಚೆರುಪ್ಪುಳ ಸೇತುವೆ ಪ್ರದೇಶ ತನಕದ ರಸ್ತೆ 127.412 ಕಿ.ಮೀ ಇರಲಿದೆ. ಮೆಕ್ ಡ್ಯಾಂ ಟಾರಿಂಗ್ ತಂತ್ರಜ್ಞಾನದ ಮೂಲಕ ಆಧುನಿಕ ಮಾದರಿಯಲ್ಲಿ ರಸ್ತೆಯನ್ನು ನಿರ್ಮಿಸಿ ಹೊಸತನದತ್ತ ಮುಖಮಾಡಲು ಸಹಕಾರಿಯಾಗುವಂತೆ ಕಿಫ್ಬಿ(ಕೇರಳ ಇನ್‍ಫ್ರಾಸ್ಟ್ರಕ್ಚರ್ ಇನ್‍ವೆಸ್ಟ್‍ಮೆಂಟ್ ಫಂಡ್ ಬೋರ್ಡ್) ಮೂಲಕ ಯೋಜನೆಗೆ ರೂಪುರೇಶೆ ನೀಡಲಾಗಿದೆ. ರಾಜ್ಯ ಸರಕಾರವು ಗಿರಿ ಹೆದ್ದಾರಿಯ ಅಭಿವೃದ್ಧಿಗೆ 305.38 ಕೋಟಿ ರೂ. ಮೀಸಲಿಟ್ಟಿದೆ. ಜಿಲ್ಲೆಯ ಮೂಲಕ ಸಾಗುವ ಮಲೆನಾಡು ಹೆದ್ದಾರಿ ನಿರ್ಮಾಣ ಕಾರ್ಯವು ನಾಲ್ಕು ಹಂತಗಳಲ್ಲಿ ನಡೆಯಲಿದೆ. ಎರಡು ಹಂತದ ರಸ್ತೆ ನಿರ್ಮಾಣ ಕಾರ್ಯದ ಗುತ್ತಿಗೆ ಈಗಾಗಲೇ ನೀಡಲಾಗಿದ್ದು, ನಿರ್ಮಾಣ ಕಾರ್ಯ ಚಟುವಟಿಕೆಗಳು ಆರಂಭಗೊಂಡಿದೆ. ನಂದಾರಪದವು-ಚೇವಾರು ಹಾಗೂ ಎಡಪರಂಬ ಕೋಳೀಚ್ಚಾಲು ಎಂಬ ಎರಡು ವಿಭಾಗದಲ್ಲಿ ಈಗಾಗಲೇ ಕಾಮಗಾರಿ ಆರಂಭವಾಗಿದೆ. ಉಳಿದಂತೆ ಎರಡು ಹಂತದ ನಿರ್ಮಾಣ ಕಾರ್ಯಕ್ಕೆ ಒಂದು ವಾರದ ಒಳಗಾಗಿ ಗುತ್ತಿಗೆ ನೀಡಲ್ಪಟ್ಟು ನಿರ್ಮಾಣ ಕಾರ್ಯ ಆರಂಭಿಸಲಾಗುವುದೆಂದು ಲೋಕೋಪಯೋಗಿ ಅಧಿಕೃತರು ತಿಳಿಸಿದ್ದಾರೆ.
ನಂದಾರಪದವು-ಚೇವಾರು(23ಕಿ.ಮೀ), ಚೇವಾರು-ಎಡಪರಂಬ(49.63 ಕಿ.ಮೀ), ಎಡಪರಂಬ-ಕೋಳಿಚ್ಚಾಲು(24.4ಕಿ.ಮೀ),ಕೋಳಿಚ್ಚಾಲು-ಚೆರುಪ್ಪುಳ(30.37 ಕಿ.ಮೀ) ಮೂಲಕ ರಸ್ತೆ ಹಾದುಹೋಗಲಿದೆ. ನಂದಾರಪದವಿನಿಂದ ಚೇವಾರು ತನಕದ ರಸ್ತೆ ನಿರ್ಮಾಣಕ್ಕೆ 54.53 ಕೋಟಿ ರೂ., ಚೇವಾರಿನಿಂದ ಎಡಪರಂಬದ ತನಕದ ರಸ್ತೆ ನಿರ್ಮಾಣಕ್ಕೆ 83.7 ಕೋಟಿ ರೂ., ಎಡಪರಂಬದಿಂದ ಕೋಳಿಚ್ಚಾಲು ತನಕದ ರಸ್ತೆಗೆ 85.15 ಕೋಟಿ ರೂ., ಕೋಳಿಚ್ಚಾಲಿನಿಂದ ಚೆರುಪ್ಪುಳ ಸೇತುವೆ ತನಕದ ರಸ್ತೆ ನಿರ್ಮಾಣ ಕಾಮಗಾರಿಗೆ 85 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ. 12 ಮೀ. ಅಗಲವಿರಲಿರುವ ರಸ್ತೆಯ 7 ಮೀ. ಅಗಲಕ್ಕೆ ಮೆಕ್ ಡ್ಯಾಂ ಟಾರಿಂಗ್ ಮಾಡಲಾಗುತ್ತದೆ ಎಂದು ಅಧಿಕೃತರು ತಿಳಿಸಿದ್ದಾರೆ. ರಸ್ತೆಯು ಆಧುನಿಕ ಸುರಕ್ಷಾ ವ್ಯವಸ್ಥೆಗಳನ್ನು ಹೊಂದಲಿದ್ದು. ರಸ್ತೆ ನಿರ್ಮಾಣ ಕಾರ್ಯಕ್ಕೆ ಸಂಸದ ಪಿ.ಕರುಣಾಕರನ್ ಹಾಗೂ ಶಾಸಕ ಎಂ.ರಾಜಗೋಪಾಲ್ ಅವರನ್ನು ಒಳಗೊಂಡ ರಸ್ತೆ ನಿರ್ಮಾಣ ಸಮಿತಿಯನ್ನು ರೂಪಿಸಲಾಗಿದೆ. ಸ್ಥಳೀಯ ಮಟ್ಟದಲ್ಲಿ ಪ್ರಾದೇಶಿಕ ಸಮಿತಿಗಳನ್ನು ರೂಪಿಸಲಾಗಿದ್ದು, ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ಸಮಿತಿಯ ಮೂಲಕ ಪಡೆದು ಸರಕಾರಕ್ಕೆ ಹಸ್ತಾಂತರಿಸಲಾಗಿದೆ. ನಂದಾರಪದವಿನಿಂದ ಆರಂಭಗೊಳ್ಳುವ ರಸ್ತೆಯು ಸುಂಕದಕಟ್ಟೆ, ಪೈವಳಿಕೆ, ಚೇವಾರು, ಅಂಗಡಿಮೊಗರು, ಇಡಿಯಡ್ಕ, ಬದಿಯಡ್ಕ, ಮುಳ್ಳೇರಿಯ, ಪಡಿಯತ್ತಡ್ಕ, ಅತ್ತನಾಡಿ, ಎಡಪರಂಬ, ಪಾಂಡಿ, ಪಳ್ಳಂಬಿ, ಶಂಕರಪಾಡಿ, ಪಡ್ಪು, ಬಂದಡ್ಕ, ಮಾನಡ್ಕ, ಕೋಳಿಚ್ಚಾಲು, ಪದಿನೆಟ್ಟಾಂಮೈಲು, ಮರುತೋಂ, ಚುಳ್ಳಿ, ಪಳ್ಳಿಕಡವು, ಚಿತ್ತಾರಿಕ್ಕಲ್ ಮೂಲಕ ಸಾಗಿ ಚೆರುಪ್ಪುಳ ತಲುಪಲಿದ್ದು ಕಣ್ಣೂರು ಜಿಲ್ಲೆಯನ್ನು ಸಮೀಪಿಸಲಿದೆ.
ಮಾರ್ಚ್ ತಿಂಗಳಲ್ಲಿ ತಾಂತ್ರಿಕ ಒಪ್ಪಿಗೆ:
ಮಲೆನಾಡು ಹೆದ್ದಾರಿ ನಿರ್ಮಾಣಕ್ಕೆ ಅಗತ್ಯವಾದ ತಾಂತ್ರಿಕ ಒಪ್ಪಿಗೆಯು ಕಳೆದ ಮಾರ್ಚ್ ತಿಂಗಳಲ್ಲಿ ಲಭಿಸಿತ್ತು. ಸ್ಥಳೀಯ ಅಧಿಕೃತರು ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಭೂ ಸ್ಥಳವನ್ನು ಹಸ್ತಾಂತರಿಸಿ ವರದಿ ನೀಡುವ ಮೂಲಕ ರಸ್ತೆ ನಿರ್ಮಾಣ ಯೋಜನೆಯ ಕಾರ್ಯಕ್ಕೆ ಚಾಲನೆ ನೀಡಿದ್ದರು. ಜಿಲ್ಲೆಯ ಮೂಲಕ ಹಾದು ಹೋಗುವ 128.44 ಕಿ.ಮಿ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಒಪ್ಪಿಗೆ ನೀಡಿತ್ತು. ಪ್ರಸ್ತುತ ನಂದಾರಪದವಿನಿಂದ ಚೆರುಪ್ಪುಳ ತನಕವಿರುವ ರಸ್ತೆಯನ್ನು ಅಗಲೀಕರಣಗೊಳಿಸಿ, ಮೆಕ್ ಡ್ಯಾಂ ಟಾರಿಂಗ್ ಸಹಿತ ಆಧುನಿಕ ವ್ಯವಸ್ಥೆಗೆ ಒಳಪಡಿಸುವ ಯೋಜನೆಗೆ ಲೋಕೋಪಯೋಗಿ ಇಲಾಖೆ ಮೂಲಕ ವರದಿ ಸಿದ್ಧವಾಗಿದ್ದು, ಅಗತ್ಯವಿರುವಲ್ಲಿ ಸೂಕ್ತ ಸೇತುವೆ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ.
2.5 ಕಿ.ಮೀ ಅರಣ್ಯ ಪ್ರದೇಶ:
ಮಲೆನಾಡು ಗಿರಿ ಹೆದ್ದಾರಿ ರಸ್ತೆಯು 600 ಮೀ. ದೂರದಷ್ಟು ಸಂರಕ್ಷಿತ ಅರಣ್ಯ ಪ್ರದೇಶದ ಮೂಲಕ ಹಾದುಹೋಗುತ್ತದೆ. ಚಿತ್ತಾರಿಕಲ್ಲು ಮತ್ತು ವಲ್ಲಿಕಡಕವು ನಡುವಿನಲ್ಲಿರುವ ಸಂರಕ್ಷಿತ ಅರಣ್ಯ ಪ್ರದೇಶ ಇದಾಗಿದೆ. ಜೊತೆಯಲ್ಲಿ 2.5 ಕಿ.ಮೀ ದೂರವಿರುವ ಕೋಳಿಚ್ಚಾಲು-ಮಾಲೋಂ ಪ್ರದೇಶದ ದಟ್ಟ ಅರಣ್ಯದ ಮೂಲಕ ಮುಂದುವರಿಯುವ ರಸ್ತೆಯು ಕಣ್ಣೂರು ಜಿಲ್ಲೆ ಪ್ರವೇಶಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆ ಮೂಲಕ ಪ್ರವಾಸ, ಉದ್ಯಮ ಅಭಿವೃದ್ಧಿ:
ಮಲೆನಾಡು ಹೆದ್ದಾರಿಯು ಗಿರಿ ಪ್ರದೇಶದಲ್ಲಿ ವಾಸಿಸುವ ಹಲವು ಸಮುದಾಯಗಳ ಮಂದಿಗೆ ವರದಾನವಾಗಲಿದೆ. ರಸ್ತೆ ನಿರ್ಮಾಣದ ಮೂಲಕ ಗಿರಿ ಪ್ರದೇಶದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಠಿಯಾಗಲಿದ್ದು, ಹೊಸ ಮಾರುಕಟ್ಟೆ ವ್ಯವಸ್ಥೆಗಳು ಆರ್ಥಿಕತೆಗೆ ನಾಂದಿ ಹಾಡಲಿವೆ ಎಂದು ನಂಬಲಾಗಿದೆ. ಹೆದ್ದಾರಿ ನಿರ್ಮಾಣದ ಮೂಲಕ ಪ್ರವಾಸೋದ್ಯಮ ಕ್ಷೇತ್ರಕ್ಕೂ ವಿಪುಲ ಅವಕಾಶಗಳು ದೊರಕಲಿವೆ.
ಪ್ರವಾಸೋದ್ಯಮ ಸಹಿತ ಒಟ್ಟು ಜಿಲ್ಲೆಯ ಸಮಗ್ರ ಅಭಿವೃದ್ದಿಯಲ್ಲಿ ಉದ್ದೇಶಿತ ಮಲೆನಾಡ ಹೆದ್ದಾರಿ ಬಹುನಿರೀಕ್ಷೆಯಿಂದ ರೂಪಿಸಲಾಗಿದೆ. ಈಗಾಗಲೇ ಎರಡು ಕೇಂದ್ರಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಎರಡನೇ ಹಂತದ ಕಾಮಗಾರಿ ಆರಂಭಕ್ಕೆ ತಾಂತ್ರಿಕ ಅನುಮತಿ ಮುಂದಿನ ವಾರದಾರಂಭದಲ್ಲಿ ಲಭಿಸುವ ನಿರೀಕ್ಷೆಯಿದೆ. ಮುಂದಿನ ವರ್ಷ ಮಧ್ಯಭಾಗದಲ್ಲಿ ಈ ರಸ್ತೆಸಂಪೂರ್ಣಗೊಂಡು ಲೋಕಾರ್ಪಣೆಗೊಳಿಸುವ ಯೋಜನೆ ಇರಿಸಲಾಗಿದೆ.
ವಿನೋದ್ ಕುಮಾರ್
ಪ್ರಧಾನ ಅಭಿಯಂತರರು. ಲೋಕೋಪಯೋಗಿ ಇಲಾಖೆ ಕಾಸರಗೋಡು ರಸ್ತೆ ವಿಭಾಗ



