ಮಕ್ಕಳ ಪ್ರವೇಶಕ್ಕೆ ಆಧಾರ್ ಕಡ್ಡಾಯಗೊಳಿಸಬೇಡಿ: ಶಾಲೆಗಳಿಗೆ ಯುಐಡಿಎ ಎಚ್ಚರಿಕೆ
0
ಡಿಸೆಂಬರ್ 25, 2018
ನವದೆಹಲಿ: ಮಕ್ಕಳನ್ನು ಶಾಲೆಗೆ ಸೇರಿಸಲು ಆಧಾರ್ ಕಡ್ಡಾಯಗೊಳಿಸಬೇಡಿ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಶಾಲೆಗಳಿಗೆ ಇಂದು (ಮಂಗಳವಾರ) ಎಚ್ಚರಿಕೆ ನೀಡಿದೆ.
ಶಾಲಾ ಪ್ರವೇಶಕ್ಕೆ ಆಧಾರ್ ಸಂಖ್ಯೆ ಕಡ್ಡಾಯವಾಗಿ ಕೊಡಬೇಕು ಎಂಬುದು ತಪ್ಪು. ಹೀಗೆ ಮಾಡುವುದು ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗುತ್ತದೆ ಎಂದು ಯುಐಡಿಎಐ ಹೇಳಿದೆ.
ದೆಹಲಿಯಲ್ಲಿ 1500ಕ್ಕೂ ಹೆಚ್ಚು ಖಾಸಗಿ ಶಾಲೆಗಳಲ್ಲಿ ನರ್ಸರಿ ಮತ್ತು ಪ್ರಾಥಮಿಕ ತರಗಳಿಗೆ ಪ್ರವೇಶ ಆರಂಭವಾಗುವ ಹೊತ್ತಿನಲ್ಲಿಯೇ ಯುಐಡಿಎಐ ಈ ಎಚ್ಚರಿಕೆ ನೀಡಿದೆ.
ಕೆಲವು ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಿಕೊಳ್ಳಲು ಆಧಾರ್ ಕಡ್ಡಾಯಗೊಳಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಇದು ತಪ್ಪು ಮತ್ತು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಯುಐಡಿಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಜಯ್ ಭೂಷಣ್ ಅವರು ಹೇಳಿದ್ದಾರೆ.
ಆಧಾರ್ ಇಲ್ಲ ಎಂಬ ಕಾರಣಕ್ಕೆ ಯಾವುದೇ ಮಗುವಿಗೆ ಪ್ರವೇಶ ನಿರಾಕರಿಸುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.


