ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಶಿಕ್ಷಕನ ಬಂಧನ ಆಗ್ರಹಿಸಿ ಪ್ರತಿಭಟನೆ
0
ಡಿಸೆಂಬರ್ 15, 2018
ಬದಿಯಡ್ಕ : 5ನೇ ತರಗತಿ ಬಾಲಕಿಗೆ ಕಿರುಕುಳ ನೀಡಲು ಯತ್ನಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಬೇಳ ಶಾಲೆಯ ಅಧ್ಯಾಪಕ ಅರುಣ್ ಕ್ರಾಸ್ತನ ಬಂಧನ ವಿಳಂಬ ಪ್ರತಿಭಟಿಸಿ ಶನಿವಾರ ಸಂಜೆ ಬದಿಯಡ್ಕ ಪೊಲೀಸ್ ಠಾಣೆಗೆ ಕ್ರಿಯಾ ಸಮಿತಿ ವತಿಯಿಂದ ಶನಿವಾರ ಸಂಜೆ ಮಾರ್ಚ್ ನಡೆಸಲಾಯಿತು.
ಕ್ರೀಯಾಸಮಿತಿಯ ಅಧ್ಯಕ್ಷ ರಾಮಕೃಷ್ಣ ಮಣಿಯಾಣಿ ನೇತೃತ್ವದಲ್ಲಿ ಬದಿಯಡ್ಕ ಪೇಟೆಯಲ್ಲಿ ಮೆರವಣಿಗೆಯ ಮೂಲಕ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಎಂ.ಸುಧಾಮ ಗೋಸಾಡ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಕಿರುಕಳ ನೀಡಿದ ಅಧ್ಯಾಪಕನನ್ನು ಬಂಧಿಸುವ ಮೂಲಕ ವಿದ್ಯಾಭ್ಯಾಸ ವಲಯವನ್ನು ರಕ್ಷಿಸುವ ಮಹತ್ತರ ಹೊಣೆಗಾರಿಕೆಯನ್ನು ಪೊಲೀಸರು ತೋರ್ಪಡಿಸಬೇಕಾಗಿದೆ. ನ್ಯಾಯಕ್ಕಾಗಿ ಜನತೆ ಬೀದಿಗಿಳಿಯಬೇಕಾಗಿ ಬಂದಿರುವುದು ಖೇದಕರ ವಿಚಾರವಾಗಿದೆ. ಕೂಡಲೇ ಆರೋಪಿಯನ್ನು ಬಂಧಿಸಿ ಸೂಕ್ತ ತನಿಖೆಯನ್ನು ನಡೆಸಬೇಕು ಎಂದರು.
ಸಾಮಾಜಿಕ ಕಾರ್ಯಕರ್ತರಾದ ರಾಮಪ್ಪ ಮಂಜೇಶ್ವರ, ಹರೀಶ್ ನಾರಂಪಾಡಿ, ಅವಿನಾಶ್ ರೈ, ಶಂಕರ ಡಿ., ಕೃಷ್ಣ ಮಣಿಯಾಣಿ ಮೊಳೆಯಾರು, ಬಾಲಕೃಷ್ಣ ಶೆಟ್ಟಿ ಕಡಾರು, ಎಂ. ನಾರಾಯಣ ಭಟ್, ರಜನಿ ಸಂದೀಪ್, ಎಸ್.ನಾರಾಯಣ, ಸುಕುಮಾರ ಕುದ್ರೆಪ್ಪಾಡಿ, ಪ್ರೇಮ, ಜಯಂತಿ, ಸುಂದರ ಕಟ್ನಡ್ಕ, ಬಾಲಕೃಷ್ಣ ಮಣಿಯಾಣಿ ಸಹಿತ ಶಾಲೆಯ ಮಕ್ಕಳ ಹೆತ್ತವರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಒಂದು ತಿಂಗಳ ಹಿಂದೆ ಘಟನೆ ನಡೆದಿತ್ತು. ಬಾಲಕಿ ಕಲಿಯುತ್ತಿದ್ದ ತರಗತಿಯ ಅಧ್ಯಾಪಕ ಅರುಣ್ ಕ್ರಾಸ್ತ ಹಲವು ಬಾರಿ ತರಗತಿಯಲ್ಲಿ ಕಿರುಕುಳಕ್ಕೆತ್ನಿಸಿದ್ದು, ಈ ಬಗ್ಗೆ ಬಾಲಕಿ ಹೆತ್ತವರಲ್ಲಿ ಮಾಹಿತಿ ತಿಳಿಸಿದ್ದಳು. ಹೆತ್ತವರು ಚೈಲ್ಡ್ ಲೈನ್ ಅಧಿಕಾರಿಗಳಿಗೆ ನೀಡಿದ ಮಾಹಿತಿಯಂತೆ ಅವರು ಆಗಮಿಸಿ ತನಿಖೆ ನಡೆಸಿದಾಗ ಅಧ್ಯಾಪಕನ ಕಿರುಕುಳ ಮಾಹಿತಿ ಬಹಿರಂಗಗೊಂಡಿತು. ಚೈಲ್ಡ್ ಲೈನ್ ಅಧಿಕಾರಿಗಳ ವರದಿಯಂತೆ ಬದಿಯಡ್ಕ ಪೊಲೀಸರು ಅಧ್ಯಾಪಕ ಅರುಣ್ ಕ್ರಾಸ್ತಾರ ವಿರುದ್ಧ ಪೋಕ್ಸೋ ಕಾಯ್ದೆ ಪ್ರಕಾರ ಕೇಸು ದಾಖಲಿಸಿದ್ದರು. ಆರೋಪಿಯನ್ನು ಬಂಧಿಸದಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೊಳಗಾಗಿತ್ತು.

