ಚೆಕ್‍ಡ್ಯಾಮ್, ರಸ್ತೆ ನವೀಕರಣ ಯೋಜನೆಗೆ ಸಮ್ಮತಿ
0
ಡಿಸೆಂಬರ್ 25, 2018
ಕಾಸರಗೋಡು: 2019-20ನೇ ಆರ್ಥಿಕ ವರ್ಷದ ಹಲವಾರು ಯೋಜನೆಗಳು ಹಾಗೂ ಮೆಕ್ಕಾಡಂ ಡಾಮರೀಕರಣ ಮೊದಲಾದ ರಸ್ತೆಗಳ ದುರಸ್ತಿ ಕಾಮಗಾರಿಗಳ ಟೆಂಡರ್‍ಗಳನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಅಂಗೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಚೆಕ್‍ಡ್ಯಾಮ್‍ಗಳ ನವೀಕರಣ ಮುಂತಾದ ಯೋಜನೆಗಳಿಗೆ ಒಪ್ಪಿಗೆ ಕೊಡಲಾಯಿತು.
ಬ್ಲಾಕ್ ಪಂಚಾಯತ್‍ಗಳು ಜಿಲ್ಲಾ ಪಂಚಾಯತ್‍ಗೆ ಹಸ್ತಾಂತರಿಸಿದ ಯೋಜನೆಗಳಿಗೆ ಅಗತ್ಯದ ಮೊತ್ತವನ್ನು ಮಂಜೂರುಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಜಿಲ್ಲೆಯ ಚೆಕ್‍ಡ್ಯಾಮ್‍ಗಳ ನವೀಕರಣಕ್ಕೆ 40 ಲಕ್ಷ ರೂ., ಹೈನುಗಾರಿಕಾ ವಲಯಕ್ಕೆ 1.50 ಕೋಟಿ ರೂ., ನದಿ ಸಂರಕ್ಷಣೆಗೆ 5 ಲಕ್ಷ ರೂ., ಶಾಲೆಗಳ ಸೋಲಾರ್ ಯೋಜನೆಗಾಗಿ 1.75 ಕೋಟಿ ರೂ., ಶಾಲೆಗಳಲ್ಲಿ ಅರಣ್ಯೀಕರಣ ಯೋಜನೆಗೆ 10 ಲಕ್ಷ ರೂ. ಮುಂತಾದ ಯೋಜನೆಗಳಿಗೆ ಸಭೆಯು ಅಂಗೀಕಾರ ನೀಡಿದೆ.
ಜಿಲ್ಲೆಯ ಆರು ಬ್ಲಾಕ್ ಪಂಚಾಯತ್‍ಗಳು ಸಲ್ಲಿಸಿದ ಯೋಜನಾ ನಿರ್ದೇಶನಗಳನ್ನು ಸಭೆಯು ಅಂಗೀಕರಿಸಿತು. ಕಾಸರಗೋಡು ಬ್ಲಾಕ್ ಪಂಚಾಯತ್‍ನ ಚೆಕ್‍ಡ್ಯಾಮ್ ಯೋಜನೆಗಳಿಗಿರುವ 45 ಲಕ್ಷ ರೂ., ಕಾರಡ್ಕ ಬ್ಲಾಕ್ ಪಂಚಾಯತ್‍ನ 15 ಲಕ್ಷ ರೂ., ಕಾಞಂಗಾಡು ಬ್ಲಾಕ್ ಪಂಚಾಯತ್‍ನ 35 ಲಕ್ಷ ರೂ., ಮಂಜೇಶ್ವರ ಬ್ಲಾಕ್ ಪಂಚಾಯತ್‍ನ 25 ಲಕ್ಷ ರೂ. ಇತ್ಯಾದಿ ಯೋಜನೆಗಳು ಜಿಲ್ಲಾ ಪಂಚಾಯತ್‍ಗೆ ಬ್ಲಾಕ್ ಪಂಚಾಯತ್‍ಗಳು ಸಲ್ಲಿಸಿದ ಯೋಜನೆಗಳಾಗಿವೆ.
ಕಾಸರಗೋಡು ಬ್ಲಾಕ್ ಪಂಚಾಯತ್‍ಗೆ ಹೆಚ್ಚುವರಿ ಮೊತ್ತಕ್ಕಿರುವ ಯೋಜನಾ ಅನುದಾನವನ್ನು ಮಂಜೂರು ಮಾಡುವುದು ಮತ್ತು ಮಂಜೇಶ್ವರಕ್ಕೆ ಕಡಿಮೆ ಮೊತ್ತ ಮಂಜೂರುಗೊಳಿಸಿರುವುದರ ಕುರಿತು ಸಭೆಯಲ್ಲಿ ಸಮಗ್ರವಾಗಿ ಚರ್ಚೆ ನಡೆಯಿತು. ಬ್ಲಾಕ್ ಪಂಚಾಯತ್‍ಗಳು ಯೋಜನಾ ನಿರ್ದೇಶನಗಳನ್ನು ನೀಡಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಮಧ್ಯ ಪ್ರವೇಶಿಸಿಲ್ಲ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಎ.ಜಿ.ಸಿ.ಬಶೀರ್ ಹೇಳಿದರು. ಕಾಂಞಂಗಾಡು ಜಿಲ್ಲಾ ಆಸ್ಪತ್ರೆಯಲ್ಲಿ ನೇತ್ರ ರೋಗ ವಿಭಾಗ ಮಂಜೂರುಗೊಳಿಸಲಾಗಿದ್ದು, ಅದರಂತೆ ಅಗತ್ಯದ ಸಿದ್ಧತೆಯನ್ನು ಕೈಗೊಳ್ಳುವಂತೆ ಅಧ್ಯಕ್ಷರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಪ್ರತಿನಿಧಿಗಳಾದ ಡಾ.ವಿ.ಪಿ.ಪಿ.ಮುಸ್ತಾಫ, ಹರ್ಷಾದ್ ವರ್ಕಾಡಿ, ಇ.ಪದ್ಮಾವತಿ, ಶಾನವಾಸ್ ಪಾದೂರು, ನ್ಯಾಯವಾದಿ ಎ.ಪಿ.ಉಷಾ, ಪುಷ್ಪಾ ಅಮೆಕ್ಕಳ, ಜೋಸ್ ಪತಾಲಿಲ್ ಮೊದಲಾದವರು ಉಪಸ್ಥಿತರಿದ್ದರು.

