ಪಶ್ಚಿಮ ಬಂಗಾಳದಲ್ಲಿ ರಥಯಾತ್ರೆಗೆ ಅನುಮತಿ ಕೋರಿ ಬಿಜೆಪಿ ಅರ್ಜಿ: ತುರ್ತು ವಿಚಾರಣೆಗೆ ಸುಪ್ರೀಂ ನಕಾರ
0
ಡಿಸೆಂಬರ್ 24, 2018
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ರಥಯಾತ್ರೆ ನಡೆಸಲು ಅನುಮತಿ ನೀಡದ ಕೋಲ್ಕತ್ತಾ ಹೈಕೋರ್ಟ್ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ಬಿಜೆಪಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಪಶ್ಚಿಮ ಬಂಗಾಳದ ಮೂರು ಜಿಲ್ಲೆಗಳಲ್ಲಿ ರಥಯಾತ್ರೆ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ತುರ್ತು ವಿಚಾರಣೆ ನಡೆಸುವಂತೆ ಬಿಜೆಪಿ ಮನವಿ ಮಾಡಿಕೊಂಡಿತ್ತು. ಆದರೆ ತುರ್ತು ವಿಚಾರಣೆ ನಡೆಸಲು ನಿರಾಕರಿಸಿದ ಕೋರ್ಟ್, ಪ್ರಕರಣವನ್ನು ಸಾಮಾನ್ಯ ಅರ್ಜಿಗಳೊಂದಿಗೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಬಿಜೆಪಿ ರಥಯಾತ್ರೆಗೆ ಅನುಮತಿ ನೀಡಿ ಕೋಲ್ಕತ್ತಾ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಕಳೆದ ಶುಕ್ರವಾರ ರದ್ದುಗೊಳಿಸಿದ ವಿಭಾಗೀಯ ಪೀಠದ ಆದೇಶವನ್ನು ಬಿಜೆಪಿ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದೆ.
2019 ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿನ 42 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಜಾಪ್ರಭುತ್ವ ಉಳಿಸಿ ರಥಯಾತ್ರೆ ಹಮ್ಮಿಕೊಂಡಿದ್ದು, ಇದಕ್ಕೆ ಅನುಮತಿ ನೀಡುವಂತೆ ಸುಪ್ರೀಂಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿದೆ.


