ನಮೋ ಯಜ್ಞ-ಡಾ.ಎಸ್ ಎಲ್ ಬೈರಪ್ಪ ಮಾನ್ಯಕ್ಕೆ
0
ಡಿಸೆಂಬರ್ 14, 2018
ಬದಿಯಡ್ಕ: ರಾಷ್ಟ್ರದ ಸಮಗ್ರ ವಿಕಾಸದಲ್ಲಿ ಯುವಜನರ ಸಂಕಲ್ಪ ಶಕ್ತಿಯಿಂದೊಡಗೂಡಿದ ತೊಡಗಿಸುವಿಕೆ ಮತ್ತು ರಾಷ್ಟ್ರ ಚಿಂತನೆಯ ಸಕಾರಾತ್ಮಕ ಶಕ್ತಿ ಸಂಚಯನಕ್ಕಾಗಿ ಡಿ.28 ರಿಂದ 31ರ ವರೆಗೆ ನೀರ್ಚಾಲು ಸಮೀಪದ ಮಾನ್ಯ ಬಳಿಯ ಮೇಗಿನಡ್ಕದಲ್ಲಿ ನಮೋ, ಜ್ಞಾನ, ಭಕ್ತಿ ಹಾಗೂ ಯಕ್ಷ ಯಜ್ಞಗಳೆಂಬ ನಾಲ್ಕು ಮುಖಗಳ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಂಗವಾಗಿ ಡಿ.28 ರಂದು ನಮೋಯಜ್ಞ ನಡೆಯಲಿದೆ. ಬೆಳಿಗ್ಗೆ 6.30ಕ್ಕೆ ಗಣಪತಿಹೋಮ, ಚಂಡಿಕಾ ಹೋಮ, ಸ್ವಯಂವರ ಪಾರ್ವತೀ ಹೋಮಗಳು ನಡೆಯಲಿದೆ. ಸಂಜೆ 4.30 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಧ್ಯಕ್ಷತೆ ವಹಿಸುವರು. ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸುವರು. ಸಂಸದ ನಳಿನ್ ಕುಮಾರ್ ಕಟೀಲು, ಕರ್ನಾಟಕ ಸರಕಾರದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸಂಜೀವ ಮಠಂದೂರು, ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಹರೀಶ್ ಪೂಂಜಾ, ಎಸ್.ಅಂಗಾರ, ನ್ಯಾಯವಾದಿ ಕೆ.ಶ್ರೀಕಾಂತ್ ಉಪಸ್ಥಿತರಿರುವರು. ಚಿಂತಕ ನಿತ್ಯಾನಂದ ವಿವೇಕವಂಶಿ ದಿಕ್ಸೂಚಿ ಭಾಷಣ ಮಾಡುವರು. ಕುಮಾರಿ ಕೆ.ವಿಭಾ ರಾವ್ ಅವರು ನಮೋ ಮತ್ತೆ ಏಕೆ ಎಂಬ ವಿಷಯದಲ್ಲಿ ವಿಶೇಷೋಪನ್ಯಾಸ ನೀಡುವರು.
ಡಿ.29 ರಂದು ಅಪರಾಹ್ನ 2.30ರಿಂದ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದ್ದು, ಕನ್ನಡದ ಪ್ರಸಿದ್ದ ಕಾದಂಬರಿಕಾರ ಡಾ.ಎಸ್.ಎಲ್.ಬೈರಪ್ಪರೊಂದಿಗೆ ಸಂವಾದ, ಉತ್ತರಕಾಂಡ ಕಾದಂಬರಿಯ ಬಗ್ಗೆ ಸಂವಾದ ಮತ್ತು ಮಂದ್ರ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಅಪರಾಹ್ನ 2.30 ಕ್ಕೆ ಡಾ.ಪ್ರಧಾನ ಗುರುದತ್ತ ಅವರ ಅಧ್ಯಕ್ಷತೆಯಲ್ಲಿ ಡಾ.ಎಸ್.ಎಲ್.ಬೈರಪ್ಪ ಅವರೊಂದಿಗೆ ಮಾತುಕತೆ- ಮಂದ್ರ ಕಾದಂಬರಿಯ ಬಗ್ಗೆ ಸಂವಾದ ನಡೆಯಲಿದೆ.ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಡಾ.ನಾಗರಾಜ ರಾವ್ ಹವಾಲ್ದಾರ್ ಗಾಯನ ನಡೆಸುವರು. ಕೇದಾರನಾಥ ಹವಾಲ್ದಾರ್(ತಬಲ), ಸಮೀರ್ ಹವಾಲ್ದಾರ್ (ಹಾರ್ಮೋನಿಯಂ)ನಲ್ಲಿ ಸಹಕರಿಸುವರು.
ಡಿ.30 ರಂದು ಸಂಜೆ4ಕ್ಕೆ ಸಂಗೀತ ವಿದ್ಯಾನಿಧಿ ಡಾ.ವಿದ್ಯಾಭೂಷಣ ಬೆಂಗಳೂರು ಅವರಿಂದ ಭಕ್ತಿ ಯಜ್ಞದ ವಿವಿಧ ಭಕ್ತಿ ಸಂಗೀತ ಸೌರಭ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಪತ್ರಕರ್ತ, ವಿಮರ್ಶಕ ಎ.ಈಶ್ವರಯ್ಯ ಅನಂತಪುರ ಅವರ ಅಧ್ಯಕ್ಷತೆಯಲ್ಲಿ ಡಾ.ವಿದ್ಯಾಭೂಷಣ ಅವರು ಉದ್ಘಾಟಿಸುವರು. ಸದಾನಂದ ರಾವ್ ನವದೆಹಲಿ ಹಾಗೂ ಸದಾಶಿವ ಶಾನುಭೋಗ್ ಕಿರಿಮಂಜೇಶ್ವರ ಉಪಸ್ಥಿತರಿರುವರು.
ಡಿ.31 ರಂದು ಅಪರಾಹ್ನ 3ಕ್ಕೆ ನಡೆಯಲಿರುವ ಯಕ್ಷ ಯಜ್ಞ ಕಾರ್ಯಕ್ರಮವನ್ನು ಮಲ್ಲ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಉದ್ಘಾಟಿಸುವರು. ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಆಶೀರ್ವಚನ ನೀಡುವರು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸುವರು. ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉಪಸ್ಥಿತರಿರುವರು. ಸಾಲಿಗ್ರಾಮ ಮೇಳದ ಖ್ಯಾತ ಚೆಂಡೆವಾದಕ ಕೋಟ ಶಿವಾನಂದ ಅವರನ್ನು ಈ ಸಂದರ್ಭ ಗೌರವಿಸಲಾಗುವುದು. ಬಳಿಕ ಸಂಜೆ5.30 ರಿಂದ ಸಾಲಿಗ್ರಾಮ ಯಕ್ಷಗಾನ ಮೇಳದವರಿಂದ ಚಂದ್ರಾವಳಿ ವಿಲಾಸ ಹಾಗೂ ರಾತ್ರಿ 10 ರಿಂದ ಶ್ರೀಕೊಲ್ಲಂಗಾನ ಮೇಳದವರಿಂದ ಜಲಂಧರ ಮೋಕ್ಷ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.

