ಸರ್ಕಾರ ಉರ್ಜಿತ್ ಪಟೇಲ್ ರಾಜೀನಾಮೆ ಕೇಳಿರಲಿಲ್ಲ: ಅರುಣ್ ಜೇಟ್ಲಿ
0
ಡಿಸೆಂಬರ್ 18, 2018
ನವದೆಹಲಿ: ಆರ್‌ಬಿಐ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡುವಂತೆ ಕೇಂದ್ರ ಸರ್ಕಾರ ಉರ್ಜಿತ್ ಪಟೇಲ್ ಅವರನ್ನು ಎಂದೂ ಕೇಳಿರಲಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ಹೇಳಿದ್ದಾರೆ.
ಇಂದು ಅಜೆಂಡಾ ಆಜ್ ತಕ್ ನೊಂದಿಗೆ ಮಾತನಾಡಿದ ಜೇಟ್ಲಿ, ಕೆಲ ಕ್ಷೇತ್ರಗಳಲ್ಲಿನ ಹಣಕಾಸು ಒತ್ತಡವನ್ನು ನಿಭಾಯಿಸುವಲ್ಲಿನ ವ್ಯತ್ಯಾಸಗಳಿಂದಾಗಿ ಉರ್ಜಿತ್ ಪಟೇಲ್ ಅವರು ರಾಜೀನಾಮೆ ನೀಡಿದ್ದಾರೆ. ಸರ್ಕಾರ ಅವರ ರಾಜೀನಾಮೆಯನ್ನು ಯಾವತ್ತೂ ಕೇಳಿಲ್ಲ ಎಂದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್‌ಬಿಐ ಬಂಡವಾಳದ ಮೀಸಲು ನಿಧಿಯಿಂದ ಸರ್ಕಾರಕ್ಕೆ ಒಂದು ಪೈಸೆಯ ಅಗತ್ಯವಿರಲಿಲ್ಲ ಎಂದು ಜೇಟ್ಲಿ ತಿಳಿಸಿದ್ದಾರೆ.
ಇದೇ ವೇಳೆ ಊರ್ಜಿತ್ ಪಟೇಲ್ ದಿಢೀರ್ ರಾಜೀನಾಮೆಯ ಕುರಿತಾಗಿನ ವ್ಯಾಪಕ ಟೀಕೆಗಳಿಗೆ ಪ್ರತಿಕ್ರಿಯಿಸಿದ ಜೇಟ್ಲಿ, ಸೂಕ್ತವಾದ ಮೀಸಲು ಗಾತ್ರವನ್ನು ಕೇಂದ್ರ ಬ್ಯಾಂಕ್ ಹೊಂದಿರಬೇಕು ಎನ್ನುವ ಕುರಿತು ಆರ್‌ಬಿಐ ಮಂಡಳಿಯ ಸಭೆಯಲ್ಲಿ ಸೌಹಾರ್ದಯುತ ಚರ್ಚೆಗಳು ನಡೆದಿದ್ದವು ಎಂದರು.


