ಜಿಲ್ಲೆಯನ್ನು ಸಂಪೂರ್ಣ ಜಲ ಸುರಕ್ಷಾ ಜಿಲ್ಲೆಯಾಗಿ ಮಾರ್ಪಡಿಸಲು ಸಿದ್ಧತೆ
0
ಡಿಸೆಂಬರ್ 16, 2018
ಕಾಸರಗೋಡು: ಜಿಲ್ಲೆಯನ್ನು ಸಂಪೂರ್ಣ ಜಲ ಸುರಕ್ಷಾ ಜಿಲ್ಲೆಯಾಗಿ ಮಾರ್ಪಡಿಸುವ ಯೋಜನೆಗೆ ಚಾಲನೆ ದೊರೆತಿದೆ. ಹಸಿರು ಕೇರಳ ಮಿಷನ್‍ನ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಜಲ ಸಂರಕ್ಷಣೆ ಚಟುವಟಿಕೆಗಳಿಗೆ ಆದ್ಯತೆ ನೀಡುವ ಕೇರಳ ಸರಕಾರದ ನಿರ್ಧಾರದ ಪ್ರಯುಕ್ತ ಜಿಲ್ಲೆಯಲ್ಲಿ ವಿವಿಧ ಯೋಜನೆಗಳನ್ನು ತಯಾರಿಸಲಾಗಿದೆ.
ಜಿಲ್ಲೆಯಲ್ಲಿ 12 ಜೀವನದಿಗಳಿದ್ದರೂ, ಬೇಸಿಗೆಯಲ್ಲಿ ತೀವ್ರವಾದ ನೀರಿನ ಬರ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಒದಗಿಸುವ ನಿಮಿತ್ತ ಪರಿಹಾರಕ್ಕಾಗಿ ಜಲದ ಸದುಪಯೋಗದೊಂದಿಗೆ ಬದುಕು ಎಂಬ ಘೋಷಣೆ ಸಹಿತ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಸಂಪೂರ್ಣ ಜಲಸುರಕ್ಷಾ ಜಿಲ್ಲೆಯಾಗಿ ಕಾಸರಗೋಡನ್ನು ಮಾರ್ಪಡಿಸುವ ಕ್ರಿಯಾ ಯೋಜನೆಯನ್ನು ಆರಂಭಿಸಲು ತೀರ್ಮಾನಿಸಲಾಗಿದೆ.
ಯೋಜನೆಯ ಪ್ರಥಮ ಹಂತವಾಗಿ ಡಿಸೆಂಬರ್ 8ರಿಂದ ಆರಂಭಗೊಂಡು 15ರ ವರೆಗೆ ಪ್ರತಿ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಜನಪರ ಒಕ್ಕೂಟದೊಂದಿಗೆ ಕನಿಷ್ಠ ಒಂದು ಜಲಾಶಯದ ಸಂರಕ್ಷಣೆಯ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಸಹಿತ ಸಮಾಜದ ಬೇರೆ ಬೇರೆ ಸ್ತರಗಳ ಕಾರ್ಮಿಕರ ಸಹ`Áಗಿತ್ವ ಪಡೆದುಕೊಂಡು ಶಿಬಿರ ಇತ್ಯಾದಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಎಂಡೋಸಲ್ಫಾನ್ ಸಮಸ್ಯೆ ಬಾಧಿತ ಪ್ರದೇಶಗಳಲ್ಲಿ ಜಲಾಶಯಗಳನ್ನು ಪುನಶ್ಚೇತನಗೊಳಿಸಿ ಜಿಲ್ಲೆಯ ಪರಂಪರಾಗತ ಜಲಾಶಯಗಳಾದ ಹಳ್ಳ, ಸುರಂಗ, ಕೆರೆ, ತೋಡು, ಬಾವಿ ಇತ್ಯಾದಿಗಳನ್ನು ಸಂರಕ್ಷಿಸಿ ಹೊಸತಲೆಮಾರಿಗೆ ಸಾಕಷ್ಟು ಶುದ್ಧನೀರು ಲಭ್ಯವಾಗುವಂತೆ ಮಾಡುವುದು ಯೋಜನೆಯ ಪ್ರಧಾನ ಉದ್ದೇಶವಾಗಿದೆ. ಆಯಾ ಸ್ಥಳೀಯಾಡಳಿತ ಸಂಸ್ಥೆಯೂ ಜಲಸಂರಕ್ಷಣೆ ಚಟುವಟಿಕೆಗಳಿಗಾಗಿ ಸಮಗ್ರ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಹಂತ ಹಂತವಾಗಿ ಜಾರಿಗೊಳಿಸುವಲ್ಲಿ ಶ್ರಮಿಸುತ್ತಿದೆ.


