ತುಳು ಭವನ ಶಿಲಾನ್ಯಾಸ ಫೆ.27ರಂದು ಕೇರಳ ವಿಧಾನಸಭಾ ಸಭಾಪತಿ ಶ್ರೀರಾಮಕೃಷ್ಣನ್ ಅವರಿಂದ
0
ಫೆಬ್ರವರಿ 12, 2019
ಮಂಜೇಶ್ವರ: ಕೇರಳ ತುಳು ಅಕಾಡೆಮಿ ಅಧೀನದ ಮಹತ್ವಾಕಾಂಕ್ಷಿ ಯೋಜನೆ ತುಳು ಭವನದ ಶಿಲಾನ್ಯಾಸ ಕಾರ್ಯಕ್ರಮ 27 ರಂದು ಮಧ್ಯಾಹ್ನ 3 ಗಂಟೆಗೆ ದುರ್ಗಿಪಳ್ಳದಲ್ಲಿ ನಡೆಯಲಿದೆ. ರಾಜ್ಯ ಸರಕಾರದ ಸಾವಿರ ದಿನಾಚರಣೆಯ ಕಾರ್ಯಕ್ರಮಗಳ ಸರಣಿಯಲ್ಲಿ ಒಂದಾಗಿ ಏರ್ಪಡಿಸಲಾಗಿರುವ ಸಮಾರಂಭದಲ್ಲಿ ಕೇರಳ ವಿಧಾನಸಭಾ ಸ್ಪೀಕರ್ ಶ್ರೀರಾಮಕೃಷ್ಣನ್ ತುಳು ಭವನದ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಯೋಜನೆಯು ತುಳು ಸಂಸ್ಕøತಿ ಬೆಳವಣಿಗೆಗೆ ಪೂರಕವಾಗಿರಲಿದೆ ಎಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಸಾಲಿಯಾನ್ ಹೇಳಿದರು.
ಮಂಜೇಶ್ವರ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಪರಾಹ್ನ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಯ ಬಹುಸಂಖ್ಯಾತ ತುಳು ಬಾಂಧವರು ತುಳು ಭವನ ಶಿಲಾನ್ಯಾಸದ ಸಂಭ್ರಮದ ಕ್ಷಣದಲ್ಲಿ ಭಾಗವಹಿಸುವಂತಾಗಬೇಕು ಎಂದರು. ಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ತಹಶೀಲ್ದಾರ್ ಜಾನ್ ವರ್ಗೀಸ್ ಮಾತನಾಡಿ ಮಂಜೇಶ್ವರ ಪ್ರದೇಶದಲ್ಲಿನ ಹಲವು ಅಭಿವೃದ್ಧಿಪರ ಯೋಜನೆಗೆ ಪೂರಕ ವಾತಾವರಣ ಸೃಷ್ಠಿಯಾಗಿದೆ. 27 ರಂದು ಜಿಲ್ಲೆಗೆ ಆಗಮಿಸುವ ಸಭಾಪತಿಯವರು ಪೈವಳಿಕೆ ಪರಿಧಿಯಲ್ಲಿ ಪೋಲಿಸ್ ಸ್ಟೇಸನ್ ಗೆ ಶಿಲಾನ್ಯಾಸ ನೆವೇರಿಸಲಿದ್ದು, ಗೋವಿಂದ ಪೈ ಸ್ಮಾರಕ ಕಾಲೇಜಿನಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡವನ್ನು ಉದ್ಘಾಟಿಸುವರು. ತಲಪಾಡಿಯಲ್ಲಿನ ಹೋಟೆಲ್ ಆರಮ್ ಅನ್ನು ಕಾಸರಗೋಡು ಕೆಫೆ ಎಂದು ಹೆಸರಿಡಲಾಗಿದ್ದು ಅದರ ಉದ್ಘಾಟನೆ ನೆರವೇರಿಸಲಾಗುವುದು ಎಂದರು. ತುಳು ಭವನದ ಶಿಲಾನ್ಯಾಸ ಕಾರ್ಯಕ್ರಮ ದಿನದಂದು ತುಳು ತ್ರೈಮಾಸಿಕ ತೆಂಬರೆಯ ಉದ್ಘಾಟನೆಯಾಗಲಿದೆ. ಹಿರಿಯ ಪತ್ರಕರ್ತ ಸಾಹಿತಿ ಮಲಾರು ಜಯರಾಮ ರೈ, ಸಂಶೋಧಕಿ ಲಕ್ಷ್ಮೀ ಜಿ.ಪ್ರಸಾದ್, ತುಳು ಮಲೆಯಾಳ ನಿಘಂಟು ಕರ್ತೃ ಪ್ರೊ.ಎ.ಎನ್.ಶ್ರೀಧರನ್ ಸಹಿತ ತುಳು ಭಾಷೆ ಮತ್ತು ಸಂಸ್ಕøತಿಗೆ ಕೊಡುಗೆ ನೀಡಿದ ವ್ಯಕ್ತಿಗಳನ್ನು ಸನ್ಮಾನಿಸಲಾಗುವುದು ಎಂದು ಅವರು ಹೇಳಿದರು. ತುಳು ಭವನ ಶಿಲಾನ್ಯಾಸ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಹೊಸಂಗಡಿಯಲ್ಲಿ ಸ್ವಾಗತ ಸಂಘದ ಕಚೇರಿ ಕಾರ್ಯನಿರ್ವಹಿಸಲಿದೆ. ತ್ರೈಮಾಸಿಕ ತೆಂಬರೆಗೆ ತುಳು ಭಾಷಾ ಲೇಖನಗಳನ್ನು 15 ರೊಳಗೆ ನೀಡಬೇಕೆಂದು ಅಕಾಡೆಮಿ ಕಾರ್ಯದರ್ಶಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಸಭೆಯಲ್ಲಿ ಜನಸಾಮಾನ್ಯರು ವಿವಿದ ಸಂಘಟನೆಗಳ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಕಾಸರಗೋಡು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಮೀಂಜ ಗ್ರಾ.ಪಂ ಅಧ್ಯಕ್ಷೆ ಶಂಶಾದ್ ಶುಕೂರ್, ಮಂಜೇಶ್ವರ ಉಪ ಶಿಕ್ಷಣಾಧಿಕಾರಿ ದಿನೇಶನ್, ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಸಭೆ 15 ರಂದು ಹೊಸಂಗಡಿಯಲ್ಲಿ ತೆರೆಯಲಾಗುವ ಅಕಾಡೆಮಿ ಶಂಕುಸ್ಥಾಪನೆಯ ಕಾರ್ಯಾಲಯದಲ್ಲಿ ನಡೆಯಲಿದೆ. 

