ಪುಲ್ವಾಮಾ ದಾಳಿ ನಡೆಸಿದವರಿಗೆ ಖಂಡಿತವಾಗಿಯೂ ಸೇನೆ ತಕ್ಕ ಉತ್ತರ ನೀಡಲಿದೆ: ಪ್ರಧಾನಿ ನರೇಂದ್ರ ಮೋದಿ
0
ಫೆಬ್ರವರಿ 17, 2019
ಯವತ್ಮಾಲ್(ಮಹಾರಾಷ್ಟ್ರ): ಪುಲ್ವಾಮಾ ಭಯೋತ್ಪಾದಕ ಆತ್ಮಾಹುತಿ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ವೀರ ಯೋಧರ ಬಲಿದಾನ ನಿಷ್ಟ್ರಯೋಜಕವಾಗಲು ಬಿಡುವುದಿಲ್ಲ, ಉಗ್ರಗಾಮಿ ಪಡೆ ಎಲ್ಲೇ ಅಡಗಿ ಕುಳಿತಿರಲಿ ಅವರನ್ನು ಶಿಕ್ಷಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಪುನರುಚ್ಛರಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಯವತ್ಮಾಲ್ ಮತ್ತು ದುಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಮತ್ತು ಯೋಜನೆಗಳ ಚಾಲನೆಗೆ ಆಗಮಿಸಿದ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಈ ಹೀನ ಕೃತ್ಯವೆಸಗಿದ ಉಗ್ರಗಾಮಿ ಸಂಘಟನೆ ಎಷ್ಟೇ ತಪ್ಪಿಸಿಕೊಳ್ಳಲು ಅಥವಾ ಅಡಗಿ ಕುಳಿತುಕೊಳ್ಳಲು ಪ್ರಯತ್ನಿಸಲಿ ಅವರನ್ನು ಶಿಕ್ಷಿಸಲಾಗುವುದು. ಭದ್ರತಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಉಗ್ರಗಾಮಿಗಳ ಹಣೆಬರಹವನ್ನು ನಿರ್ಧರಿಸಲು ಸೇನೆಗೆ ಸೂಚಿಸಲಾಗಿದೆ ಎಂದರು.
ಹತ್ತಾರು ಮಂದಿ ಯೋಧರ ಪ್ರಾಣವನ್ನು ಕಳೆದುಕೊಂಡ ಭಾರತೀಯರಾದ ನಾವೆಲ್ಲರೂ ಇಂದು ದುಃಖದಲ್ಲಿದ್ದೇವೆ. ನಾಗರಿಕರ ಸಿಟ್ಟು, ಆಕ್ರೋಶ ನನಗೆ ಅರ್ಥವಾಗುತ್ತದೆ, ಮಹಾರಾಷ್ಟ್ರದ ಇಬ್ಬರು ಯೋಧರು ಕೂಡ ಹುತಾತ್ಮರಾಗಿದ್ದಾರೆ. ತಮ್ಮ ಪ್ರಾಣ ಕಳೆದುಕೊಂಡ ಯೋಧರ ಜೀವಕ್ಕೆ ಬೆಲೆಯಿದೆ. ಅವರ ತ್ಯಾಗ ನಿರುಪಯೋಗವಾಗಲು ಬಿಡುವುದಿಲ್ಲ ಎಂದು ಹೇಳಿದರು.
ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸಿದ ಪ್ರಧಾನಿ, ಪಾಕಿಸ್ತಾನಕ್ಕೆ ಪಾಕಿಸ್ತಾನವೇ ಪರ್ಯಾಯವಾಗಿದೆ. ಇಂದು ಜನರು ನೆಮ್ಮದಿಯಾಗಿ ತಮ್ಮ ಕನಸುಗಳನ್ನು ಹೊತ್ತು ಜೀವಿಸುತ್ತಿದ್ದಾರೆ ಎಂದಾದರೆ ಅದಕ್ಕೆ ಯೋಧರೇ ಕಾರಣ ಎಂದವರು ತಿಳಿಸಿರುವರು.

