HEALTH TIPS

ಸಿಪಿಎಂ ಕೊಲೆ ರಾಜಕೀಯ ನಡೆಸಿದರೆ, ಕಾಂಗ್ರೆಸ್ ಕಪಟ ರಾಜಕಾರಣದಲ್ಲಿ ತೊಡಗಿದೆ- ಪೈವಳಿಕೆ ಗ್ರಾ.ಪಂ ಸಮಿತಿ ವತಿಯ ಬಿಜೆಪಿ ಕುಟುಂಬ ಸಂಗಮದಲ್ಲಿ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್

ಉಪ್ಪಳ: ಸಂಘ ಪರಿವಾರ ರಾಜ್ಯಾದ್ಯಂತ ಹಮ್ಮಿಕೊಂಡ ಶಬರಿಮಲೆ ಸಂರಕ್ಷಣಾ ಹೋರಾಟವು ಯಶಸ್ಸು ಕಂಡಿದೆ, ಸಮನಸ್ಕ ಸಮುದಾಯ ಹಾಗೂ ಯುವಕರ ತಂಡವು ಶಬರಿಮಲೆ ಆಚಾರ ವಿಚಾರಗಳ ರಕ್ಷಣೆಗೆ ಕಟಿಬದ್ಧವಾಗಿದ್ದು ಧರ್ಮ ರಕ್ಷಣೆಯ ಕಾರ್ಯದಲ್ಲೂ ಕಾರ್ಯ ತತ್ಪರವಾಗಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದರು. ಸಜಂಕಿಲ ಸಮೀಪದ ಆವಳಮಠ ದುರ್ಗಾಸದನದಲ್ಲಿ ಗುರುವಾರ ನಡೆದ ಪೈವಳಿಕೆ ಪಂಚಾಯತಿ ಮಟ್ಟದ ಬಿಜೆಪಿ ಕುಟುಂಬ ಸಂಗಮ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಪುಲ್ವಾಮ ಘಟನೆಯಲ್ಲಿ ಮಡಿದ ಸೈನಿಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ದೇಶದ ಗಡಿ ರಕ್ಷಣೆಯ ಹೊಣೆಯನ್ನು ಧೀಮಂತ ಸೈನಿಕರು ಹೊತ್ತರೆ, ಧರ್ಮ ಮತ್ತು ಸಮಾಜದ ರಕ್ಷಣೆಯ ಜವಾಬ್ದಾರಿಯನ್ನು ಬಿಸಿ ರಕ್ತದ ಯುವಕರು ಹೊತ್ತಿದ್ದಾರೆ. ದೇಶ ಮತ್ತು ಧರ್ಮದ ವಿರುದ್ಧವಾಗಿ ನಡೆಯುವವರಿಗೆ ತಕ್ಷ ಶಾಸ್ತಿಯಾಗಬೇಕಿದೆ ಎಂದರು. ಶಬರಿಮಲೆ ಕ್ಷೇತ್ರದ ಆಚರಣೆಗಳನ್ನು ಉಳಿಸುವ ನಿಟ್ಟಿನಲ್ಲಿ ಜರುಗಿದ ನಾಮಜಪ ಯಜ್ಞಗಳು ರಾಜ್ಯ, ದೇಶದ ಗಡಿ ದಾಟಿ ವಿಶ್ವದಾದ್ಯಂತ ಹಬ್ಬಿವೆ. ಐಕ್ಯತೆಯ ಮಂತ್ರ ತತ್ವಮಸಿಯನ್ನು ಬೋಧಿಸುವ ಅಯ್ಯಪ್ಪನ ಸಂದೇಶವು ಎಲ್ಲಡೆಯು ಪಸರಿದೆ ಎಂದರು. ಸ್ತ್ರೀ ಸ್ವಾತಂತ್ರ್ಯದ ನೆಪದಲ್ಲಿ ಎಲ್ಲ ಯುವತಿಯರನ್ನು ಶಬರಿಮಲೆಗೆ ಒತ್ತಾಯಪೂರ್ವಕವಾಗಿ ಕಳುಹಿಸಿದ ಎಡರಂಗ ಸರಕಾರಕ್ಕೆ ತಕ್ಕ ಶಾಸ್ತಿಯಾಗಲಿದೆ ಎಂದರು. ರಾಜ್ಯದ ವಿವಿದೆಡೆಗಳಲ್ಲಿ ನಾಮಜಪ ಯಜ್ಞದಲ್ಲಿ ತೊಡಗಿದ್ದ ಸುಮಾರು 6 ಸಾವಿರ ಮಂದಿ ಮಹಿಳೆಯರು ಮತ್ತು 4 ಸಾವಿರ ಮಂದಿ ಯುವಕರ ವಿರುದ್ಧ ವಿನಾ ಕಾರಣ ಕೇಸುಗಳನ್ನು ದಾಖಲಿಸಿದ ರಾಜ್ಯ ಸರಕಾರದ ಕ್ರಮ ಸರಿಯಲ್ಲವೆಂದರು. ಶಬರಿಮಲೆ ಹೋರಾಟವು ಧರ್ಮ ರಕ್ಷಣೆಯ ಭಾಗವಾಗಿ ಯಶಸ್ಸು ಕಂಡಿದ್ದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ ಎಂದರು. ಸಿಪಿಎಂ ಕೇವಲ ಕೊಲೆ ರಾಜಕಾರಣದಲ್ಲಿ ತೊಡಗಿದೆ. ಪುಲ್ಲೂರು ಪೆರಿಯಾ ಗ್ರಾ.ಪಂ ಪರಿಧಿಯಲ್ಲಿ ನಡೆದ ಇಬ್ಬರು ಯುವಕರ ಕೊಲೆ ಕೃತ್ಯವೇ ಇದಕ್ಕೆ ಸಾಕ್ಷಿಯಾಗಿರುದಾಗಿ ತಿಳಿಸಿದರು. ಕಾಂಗ್ರೆಸ್ ನಾಯಕರು ತಮ್ಮ ಕಾರ್ಯಕರ್ತರ ಹತ್ಯೆಗೆ ಕೇವಲ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ವಿರೋಧ ಪಕ್ಷ ಸಿಪಿಎಂ ಜೊತೆ ಜಿಲ್ಲೆಯ ಕೆಲ ಗ್ರಾ.ಪಂ ಗಳಲ್ಲಿ ಅಧಿಕಾರ ಹಂಚಿಕೊಂಡಿರುವ ಕಾಂಗ್ರೆಸ್ ಕಪಟ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದರು. ಕಾರಡ್ಕ, ಎಣ್ಮಕಜೆ ಗ್ರಾ.ಪಂಗಳಲ್ಲಿ ಕೋಲಿಬಿ ಸಖ್ಯ ಮುಂದುವರಿದಿದೆ ಎಂದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ ಮಾತನಾಡಿ ಕೇಂದ್ರದಲ್ಲಿ ಮಗದೊಮ್ಮೆ ಬಿಜೆಪಿ ಸರ್ವಾನುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಬೇಕು. ನರೇಂದ್ರ ಮೋದಿ ಮಗದೊಮ್ಮೆ ನಮ್ಮೆಲ್ಲರ ಪ್ರಧಾನಿಯಾಗಬೇಕು. ಇದನ್ನು ನನಸಾಗಿಸಲು ಎಲ್ಲ ಕಾರ್ಯಕರ್ತರು ಜತೆಗೂಡಿ ಶ್ರಮಿಸಬೇಕಿದೆ ಎಂದರು. ಮೋದಿ ಸರಕಾರದ ವಿಶೇಷ ಸಾಧನೆಗಳನ್ನು ಜನರ ಬಳಿ ತಲುಪಿಸುವ ಜವಾಬ್ದಾರಿಯು ಪ್ರತಿಯೊಬ್ಬ ಕಾರ್ಯಕರ್ತನ ಹೆಗಲ ಮೇಲಿದೆ ಎಂದರು. ಬಿಜೆಪಿ ಮಂಜೇಶ್ವರ ಕ್ಷೇತ್ರ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಮಾತನಾಡಿ ನರೇಂದ್ರ ಮೋದಿ ಆಳ್ವಿಕೆಯಲ್ಲಿ ದೇಶ ಸಾಕಷ್ಟು ಬದಲಾಗಿದೆ. ರಾಜ್ಯದಲ್ಲೂ ಬದಲಾವಣೆಯ ಗಾಳಿ ಬೀಸತೊಡಗಿದೆ. ಕಮ್ಯೂನಿಸ್ಟ್ ಭದ್ರಕೋಟೆ ಎನಿಸಿದ್ದ ಹಲವು ಪ್ರದೇಶಗಳಲ್ಲಿ ಕಮಲ ಅರಳಿದ್ದು, ಜನಸಾಮಾನ್ಯರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ಪೈವಳಿಕೆ ಪಂಚಾಯತ್ ಸಮಿತಿ ಅಧ್ಯಕ್ಷ ಸದಾಶಿವ ಚೇರಾಲು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹರೀಶ್ಚಂದ್ರ ಮಂಜೇಶ್ವರ, ಎಸ್.ಸಿ ಮೋರ್ಚಾದ ಎ.ಕೆ ಕಯ್ಯಾರ್ ಶುಭಾಶಂಸನೆಗೈದರು. ಬಿಜೆಪಿ ಪೈವಳಿಕೆ ಪಂಚಾಯತ್ ಸಮಿತಿ ಕಾರ್ಯದರ್ಶಿ ಆಟಿಕುಕ್ಕೆ ಸುಬ್ರಹ್ಮಣ್ಯ ಭಟ್ ಸ್ವಾಗತ ಭಾಷಣ ಮಾಡಿದರು. ಮಹಿಳಾ ಮೋರ್ಚಾದ ಸರೋಜಾ ಬಲ್ಲಾಳ್, ಪುಷ್ಪಾಲಕ್ಷ್ಮೀ ಇದ್ದರು. ದೇವಿ ಪ್ರಸಾದ್ ಆಳ್ವ ವಂದೇ ಮಾತರಂ ಗೀತೆ ಹಾಡಿದರು. ಕಾರ್ಯಕ್ರಮ ಆರಂಭದಲ್ಲಿ ಪುಲ್ವಾಮದಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries