ಚಿಪ್ಪಾರು ಶಾಲಾ ಶತಮಾನೋತ್ಸವ ಇಂದು ಸಂಪನ್ನ
0
ಫೆಬ್ರವರಿ 24, 2019
ಉಪ್ಪಳ: ಹಳೆವಿದ್ಯಾರ್ಥಿಗಳು ಶಾಲೆಯನ್ನು ಬೆಳಗುವ ಹಿರಿಯ ವಿದ್ಯಾರ್ಥಿಗಳಾಗಿದ್ದಾರೆ. ಆರಾಧನಾಲಯ ಹಾಗೂ ಶಾಲೆಯು ಮನುಷ್ಯನ ಎರಡು ಕಣ್ಣುಗಳಿದ್ದಂತೆ ಊರಿಗೆ ಬೆಳಕನ್ನು ನೀಡುವಲ್ಲಿ ಪ್ರಧಾನವಾಗಿದೆ ಎಂದು ಜಿಲ್ಲಾಪಂಚಾಯತ್ ಸದಸ್ಯೆ ಪುಷ್ಪಾ ಅಮೆಕ್ಕಳ ಅಭಿಪ್ರಾಯಪಟ್ಟರು.
ಶನಿವಾರ ಚಿಪ್ಪಾರು ಹಿಂದೂ ಎ.ಯು.ಪಿ. ಶಾಲೆಯ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಶಾಲೆಯ ಸಂಸ್ಥಾಪಕರ ಭಾವಚಿತ್ರವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. ಕನ್ನಡದ ಮೇಲೆ ಮಲಯಾಳದ ನಿರಂತರ ಸವಾರಿ ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ಕನ್ನಡ ಶಾಲೆಯೊಂದು ಶತಮಾನೋತ್ಸವವನ್ನು ಕಾಣುತ್ತಿರುವುದು ನಮಗೆಲ್ಲ ಅಭಿಮಾನವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಸಿಗುವ ಮಾತೃಭಾಷೆಯ ಶಿಕ್ಷಣದಿಂದ ಊರಿಗೆ ಬೆಳಕಾಗಲಿ ಎಂದು ಅವರು ಹಾರೈಸಿದರು.
ಶಾಲೆಯ ಹಳೆವಿದ್ಯಾರ್ಥಿ, ಕಲ್ಲಿಕೋಟೆ ಮಲಬಾರ್ ಆಸ್ಪತ್ರೆಯ ಹೃದಯತಜ್ಞ ಡಾ. ಕುಂಞÁಲಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಇತರೆಲ್ಲ ಕಡೆಗಳಿಗಿಂತ ನಮ್ಮ ರಾಜ್ಯವು ಅಹ್ರಪಂಕ್ತಿಯಲ್ಲಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಅನೇಕ ಪ್ರತಿಭಾವಂತರನ್ನು ಹೊರತರುವಲ್ಲಿ ಇಂತಹ ಶಾಲೆಗಳು ಪ್ರಧಾನಪಾತ್ರವಹಿಸಿದೆ ಎಂದರು.
ಇಸ್ರೋದ ನಿವೃತ್ತ ವಿಜ್ಞಾನಿ ನಾರಾಯಣ ಎ. ಸಮಾರಂಭವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪ್ರಾಥಮಿಕ ವಿದ್ಯಾಭ್ಯಾಸವು ನಿರ್ಣಾಯಕವಾಗಿದ್ದು, ಅದು ವ್ಯಕ್ತಿಯ ನಿರ್ಮಾಣಕ್ಕಿರುವ ಭದ್ರವಾದ ಅಡಿಪಾಯವಾಗಿದೆ. ಕೇರಳ ರಾಜ್ಯದಲ್ಲಿ ಕನ್ನಡ ಶಾಲೆಯೊಂದು ಶತಮಾನೋತ್ಸವವನ್ನು ಕಾಣುವಲ್ಲಿ ಶಾಲೆಯ ಸಂಸ್ಥಾಪಕರಾದ ಬಲ್ಲಾಳ ಮನೆತನದವರ ಶ್ರಮ ಸಾರ್ಥಕವಾಗಿದೆ ಎಂದರು.
ಪಾತೂರು ಸೂರ್ಯೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ, ಬಾಕ್ರಬೈಲು ಧರ್ಮಚಾವಡಿಯ ಮಂಜುನಾಥ ಶೆಟ್ಟಿ ನೂತನ ರಂಗಮಂದಿರವನ್ನು ಉದ್ಘಾಟಿಸಿ ಶುಭಹಾರೈಸಿದರು. ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ವಲಯ ವ್ಯವಸ್ಥಾಪಕ ಮುರಳೀಧರ ಕೆ. ಸ್ಮರಣಸಂಚಿಕೆ `ಶತಮಾನದ ಚಿಲುಮೆ'ಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ಶತಮಾನೋತ್ಸವವನ್ನು ಕಂಡ ಶಾಲೆಯಲ್ಲಿ ಅಧ್ಯಾಪಕರ ಶ್ರಮವು ಸಾರ್ಥಕ್ಯವನ್ನು ಕಾಣಬೇಕಾದರೆ ವಿದ್ಯಾರ್ಥಿಗಳು ಮುಕ್ತಮನಸ್ಸಿನಿಂದ ವಿದ್ಯಾರ್ಜನೆಯನ್ನು ಮಾಡಬೇಕು ಎಂಬ ಹಿತನುಡಿಯನ್ನು ಹೇಳಿದರು. 
ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ನಾರಾಯಣ ಕಜೆ ಮಾತನಾಡುತ್ತಾ ಶಾಲೆಯು ಊರಿಗೆ ಜ್ಞಾನವನ್ನು ನೀಡುವ ಕೇಂದ್ರವಾಗಿದೆ. ಮಾತೃಭಾಷೆಯ ಶಿಕ್ಷಣಕ್ಕೆ ಊರಿನವರ ಪ್ರೋತ್ಸಾಹ ಅತೀ ಅಗತ್ಯವಾಗಿದೆ ಎಂದರು.
ಸ್ಮರಣಸಂಚಿಕೆಯ ಪ್ರಧಾನ ಸಂಚಾಲಕ ನರಸಿಂಹ ಬಲ್ಲಾಳ್ ಮಾತನಾಡುತ್ತಾ ಪಾಂಡಿತ್ಯವನ್ನು ಧಾರೆಯೆರೆಯುವ ಕಾಲ ಕಳೆದುಹೋಗಿ ಪುಸ್ತಕದಲ್ಲಿರುವುದನ್ನು ಕಲಿಸುವ ಕಾಲ ಬಂದೊದಗಿದೆ. ಶಿಕ್ಷಣದ ಗುರಿ ಬದಲಾಗಿದ್ದು, ಪ್ರಸ್ತುತ ಕಾಲಘಟ್ಟದಲ್ಲಿ ಆಢಂಬರದ ಶಿಕ್ಷಣ ಆಕರ್ಷಣೆಯನ್ನು ಪಡೆದುಕೊಂಡಿದೆ ಎಂದರು. ವೇದಿಕೆಯಲ್ಲಿ ಕುರುವೇರಿ ಗಣಪತಿ ಭಟ್, ಐತ್ತಪ್ಪ ಶೆಟ್ಟಿಗಾರ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಖಲೀಲ್, ಮಾತೃ ಸಂಘದ ಅಧ್ಯಕ್ಷೆ ಜಯಲಕ್ಷ್ಮೀ, ಸೀತಾರಾಮ ಬಲ್ಲಾಳ್, ಕೇಶವ ಭಟ್, ನಂದ ವರ್ಮ ಬಿ., ಮಹಾಬಲ ಶೆಟ್ಟಿ ಮೊದಲಾದವರು ಶುಭಹಾರೈಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣಪತ್ರ, ಸ್ಮರಣಿಕೆಯನ್ನು ನೀಡಲಾಯಿತು. ನಿವೃತ್ತ ವಿದ್ಯಾಧಿಕಾರಿ ಗುರುರಂಗಯ್ಯ ಬಲ್ಲಾಳ್ ಸ್ಮರಣಾರ್ಥ 7ನೇ ತರಗತಿಯ ಪ್ರತಿಭಾನ್ವಿತ 5 ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಿಸಲಾಯಿತು. ಶಾಲಾ ವ್ಯವಸ್ಥಾಪಕ ಗಂಗಾಧರ ಬಲ್ಲಾಳ್ ಧ್ವಜಾರೋಹಣಗೈದು ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ದಾಸಪ್ಪ ಕೆ. ಸ್ವಾಗತಿಸಿ, ಅಧ್ಯಾಪಿಕೆ ಪ್ರೇಮಲತಾ ಸಿ.ಎಸ್. ಧನ್ಯವಾದವನ್ನಿತ್ತರು. ಅಧ್ಯಾಪಕ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ನಂತರ ಶಾಲಾ ಮಕ್ಕಳಿಂದ ನೃತ್ಯ, ನಾಟಕ, ವಿವಿಧ ಕಾರ್ಯಕ್ರಮಗಳು ಪ್ರದರ್ಶನಗೊಂಡವು.
ಇಂದು ಫೆ.24ರಂದು ಬೆಳಗ್ಗೆ ಸಾಹಿತ್ಯ ಸಂಗಮ, ಮದ್ಯಾಹ್ನ 3.30ರಿಂದ ನಾಟ್ಯ ತರಂಗ, ಸಂಜೆ 5ಕ್ಕೆ ವಿದ್ಯಾರ್ಥಿನಿಯರಿಂದ ಯಕ್ಷಗಾನ ಹಾಗೂ ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ರಾತ್ರಿ 7.30ರಿಂದ ಹಳೆ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, 8.30ರಿಂದ ಹಳೆ ವಿದ್ಯಾರ್ಥಿಗಳು ಮತ್ತು ಅತಿಥಿ ಕಲಾವಿದರಿಂದ ತುಳು ಸಾಂಸಾರಿಕ ಹಾಸ್ಯಮಯ ನಾಟಕ `ಪಿರ ಬರುವೆರಾ' ಪ್ರದರ್ಶನಗೊಳ್ಳಲಿದೆ.

