HEALTH TIPS

ಧಾರ್ಮಿಕ ಕೇಂದ್ರಗಳ ನಿರ್ದೇಶನಗಳಿಂದ ಧರ್ಮ ಸಂರಕ್ಷಣೆ ಸಾಧ್ಯ-ಉಳಿಯತ್ತಾಯ ವಿಷ್ಣು ಆಸ್ರ ಸೋಮಯಾಗದ ಧರ್ಮ ಸಂದೇಶದಲ್ಲಿ ಅಭಿಮತ

ಉಪ್ಪಳ: ಪ್ರಕೃತಿಯಲ್ಲಿರುವ ಶಕ್ತಿಗಳು ಜೀವಕೋಟಿಗಳನ್ನು ಸಂರಕ್ಷಿಸುತ್ತದೆ ಎಂಬ ಕಲ್ಪನೆ ಭಾರತೀಯ ಪರಂಪರೆಯ ಹಿರಿಮೆಯಾಗಿದೆ. ಪ್ರಾಚೀನ ಕಾಲದಿಂದಲೂ ಭಾರತ ಯಾಗ ಭೂಮಿಯಾಗಿ ಲೋಕೋದ್ದಾರದ ಕೈಂಕರ್ಯದ ಮೂಲಕ ವಿಶ್ವಗುರುತ್ವಕ್ಕೆ ಪಾತ್ರವಾಗಿತ್ತು. ವೇದಗಳು ಜಗತ್ತಿನ ಸ್ತಂಭಗಳಾಗಿದ್ದು, ಕೊಂಡೆವೂರಿನಲ್ಲಿ ನಡೆಯುತ್ತಿರುವ ವೇದ ಅರ್ಚನೆ ವಿಶಿಷ್ಟವಾಗಿ ನೆಮ್ಮದಿ ನೀಡುತ್ತದೆ ಎಂದು ಜಿಲ್ಲೆಯ ಹಿರಿಯ ವೈಧಿಕ ವಿದ್ವಾಂಸ ವೇದಮೂರ್ತಿ ಉಳಿಯತ್ತಾಯ ವಿಷ್ಣು ಆಸ್ರ ಅವರು ತಿಳಿಸಿದರು. ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಆರಂಭಗೊಂಡಿರುವ ಅತಿರಾತ್ರ ಸೋಮಯಾಗದ ಪ್ರಥಮ ದಿನವಾದ ಸೋಮವಾರ ಸಂಜೆ ನಡೆದ ಧರ್ಮ ಸಂದೇಶ ಸಭೆಯಲ್ಲಿ ಪ್ರಧಾನ ಭಾಷಣಗೈದು ಅವರು ಮಾತನಾಡಿದರು. ಪಂಚಭೂತಗಳಿಂದ ಚೈತನ್ಯಗೊಂಡು ಸರ್ವ ಜೀವರಾಶಿಗೂ ನೆಮ್ಮದಿ ನೀಡುವ ಅವುಗಳ ಬಗೆಗಿನ ಚಿಂತನೆಯ ಅಗತ್ಯವಿದೆ. ಜೊತೆಗೆ ಪಂಚಭೂತಗಳಲ್ಲಿರುವ ನಿರ್ಲಿಪ್ತತೆಯಂತೆ ಮನುಷ್ಯ ಜೀವನದಲ್ಲೂ ಇತರರಿಗೆ ನೆರವಾಗಿ, ಅಹಂಕಾರ-ಅಹಂಭಾವ ರಹಿತರಾಗಿ ಬದುಕನ್ನು ಸಾರ್ಥಕಪಡಿಸುವ ಮನಸ್ಸು ಯಾಗಗಳಿಂದ ಹುಟ್ಟಿಕೊಳ್ಳಲಿ ಎಂದು ತಿಳಿಸಿದರು. ಧಾರ್ಮಿಕ ಚಿಂತನೆಗಳು ಧಾರ್ಮಿಕ ಕೇಂದ್ರಗಳಿಂದ ನಿರ್ದೇಶಿಸಲ್ಪಟ್ಟಾಗ ಧರ್ಮ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು. ರಾಷ್ಟ್ರದ ಪ್ರಾಚೀನ ಪರಂಪರೆ ಪ್ರತಿಯೊಂದು ಜಾತಿ ವಿಭಾಗಗಳನ್ನೂ ವೃತಿ ಧರ್ಮದಡಿ ನಿರ್ವಹಿಸುತ್ತಿತ್ತೆಂಬುದರ ಪ್ರತೀಕವಾಗಿ ಯಾಗ ಶಾಲೆಗೆ ಅವರವರ ಕುಲಧರ್ಮಕ್ಕನುಸರಿಸಿ ಯಾಗ ಸಂಬಂಧಿ ವಸ್ತುಗಳನ್ನು ಒದಗಿಸಿಕೊಡುವ ಮೂಲಕ ಮರು ಚಿಂತನೆಗೆ ಅವಕಾಶ ನೀಡಿರುವುದು ಪ್ರಸ್ತುತವಾಗಿದೆ. ಪ್ರತಿಯೊಬ್ಬರೂ ಧರ್ಮವನ್ನು ಅನುಸರಿಸುವ ಮೂಲಕ ಸುಖ ನೆಮ್ಮದಿಯೊಂದಿಗೆ ಬದುಕಲು ಸಾಧ್ಯವಿದೆ ಎಂದು ಅವರು ತಿಳಿಸಿದರು. ದೇಹದಲ್ಲಿ ವಿವಿಧ ಅಂಗಗಳು ವಿವಿಧ ಕೆಲಸಗಳನ್ನು ನಿರ್ವಹಿಸುವಂತೆ ಸಮಾಜದ ಅಂಗಗಳಾದ ಹಿಂದೂ ಸಮಾಜದ ವಿವಿಧ ಜಾತಿ ಬಾಂಧವರು ಧರ್ಮ ಸಂರಕ್ಷಣೆಗಾಗಿ ಕೈಜೋಡಿಸುವ ಮಹಾನ್ ಚಿಂತನೆ ಅತಿರಾತ್ರ ಸೋಮಯಾಗದ ಹಿನ್ನೆಲೆಯ ಈ ಸಂದರ್ಭ ಜಾಗೃತ ಸಮಾಜಕ್ಕೆ ನಿರ್ದೇಶಿಸಲ್ಪಡಲಿ ಎಂದು ಅವರು ಕರೆನೀಡಿದರು. ಸಮಾರಂಭದಲ್ಲಿ ವಿವಿಧ ಸಮಾಜದ ಪ್ರಮುಖರನ್ನು ಗೌರವಿಸಲಾಯಿತು. ಕೇಶವ ಆಚಾರ್ಯ ಉಳಿಯತ್ತಡ್ಕ(ವಿಶ್ವಕರ್ಮ),ಮಧುಸೂದನ ಅಯರ್(ಯಾದವ), ರವೀಂದ್ರ ಮನ್ನಿಪ್ಪಾಡಿ(ಕುಲಾಲ)ಉಜಾರು(ಕೊರಗ), ಪದ್ಮನಾಭ ನರಿಂಗಾನ(ಬಾಕುಡ), ನಾರಾಯಣ ಎಂ(ಮೊಗೇರ) ಅನಂತ ಐಲ(ದೇವಾಡಿಗ), ತಿಮ್ಮಪ್ಪ ಬಂಡಾರಿ(ಬಂಢಾರಿ ಸಮಾಜ)ಕರುಣಾಕರ ಬೆಳ್ಚಪ್ಪಾಡ(ಬೋವಿ),ರಾಮಕೃಷ್ಣ ಮಾಂಬಾಡಿ, ರಘು ಸಫಲ್ಯ(ಗಾಣಿಗ), ಕೃಷ್ಣನ್ ಮುಳ್ಳೇರಿಯ(ದೇವಾಂಗ), ಗೋಪಾಲ ನಿಡಿಂಬಿರಿ(ಮಡಿವಾಳ), ಮಹಾಲಿಂಗ ಜೋಗಿ ಸಜಕಿಲ(ಜೋಗಿ) ಅವರುಗಳನ್ನು ಸಮಾಜದ ಪರವಾಗಿ ಗಣ್ಯರು ಅಭಿನಂದಿಸಿದರು. ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನಗೈದು ಹಾರೈಸಿದರು. ಕಟೀಲು ಶ್ರೀಕ್ಷೇತ್ರದ ಕಮಲಾದೇವಿ ಪ್ರಸಾದ ಆಸ್ರಣ್ಣ, ವಿದ್ವಾನ್.ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿ, ಯಾಗ ಸಮಿತಿ ಕಾರ್ಯಾಧ್ಯಕ್ಷ ಮೋನಪ್ಪ ಭಂಡಾರಿ, ಡಾ.ನಾರಾಯಣ್ ಸ್ಕ್ಯಾನ್ ಫ್ರಿಂಟರ್ಸ್, ಕಾರ್ಯದರ್ಶಿ ಶ್ರೀಧರ ಭಟ್ ಉಪ್ಪಳ, ಪರವರನ್ ಅಚ್ಯುತ್ತನ್ ನಂಬೂದಿರಿ ಉಪಸ್ಥಿತರಿದ್ದು ಶುಭಹಾರೈಸಿದರು. ರಾಮಚಂದ್ರ ಸಿ.ಉಪ್ಪಳ ಸ್ವಾಗತಿಸಿದರು. ನ್ಯಾಯವಾದಿ ಗಂಗಾಧರ ಮತ್ತು ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries